Advertisement
ಅವರ ಪಾಠ ಆರಂಭಕ್ಕೆ ಮುನ್ನ 15 ನಿಮಿಷ ಪ್ರಶ್ನೋತ್ತರ ಅವಧಿ. “ಇಂದಿನ ವಿಶೇಷವೇನು?’ ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ಯಾವ ಪ್ರಶ್ನೆಯನ್ನೂ ಹಾಕಬಹುದಿತ್ತು. ಕಾಫಿ ಒಳ್ಳೆಯದೋ? ಚಹಾ ಒಳ್ಳೆಯದೋ? ತೃಪ್ತಿ ಒಳ್ಳೆಯದೋ? ಮಹತ್ವಾಕಾಂಕ್ಷೆ ಒಳ್ಳೆಯದೋ? ಬಂಧನವಿಲ್ಲದ ಸ್ವಾತಂತ್ರ್ಯ ಸಾಧ್ಯವೆ? ಗುರುಗಳು ಇಂಗ್ಲೆಂಡ್‌ಗೆ ಹೋಗಲಿಲ್ಲವೇಕೆ? ನಿಮ್ಮಂತೆ ಎಲ್ಲರೂ ನಿಲುವಂಗಿ ಹಾಕಿದರೆ ಚೆನ್ನಾಗಿರುತ್ತದೆಯೆ? – ಇಂತಹ ನೂರಾರು ಪ್ರಶ್ನೆಗಳು ಚರ್ಚೆಗೆ ಬರುತ್ತಿದ್ದವು. ಯಾವ ಪ್ರಶ್ನೆಯೂ ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ. ಏನೋ ಒಂದು ತಿರುವು ಕೊಟ್ಟು ಸಣ್ಣದನ್ನು ದೊಡ್ಡದಾಗಿಯೂ, ದೊಡ್ಡದನ್ನು ಸಣ್ಣದಾಗಿಯೂ ಮಾಡಿ ಮುಂದೆ 40 ನಿಮಿಷಗಳ ಪಾಠ ನೆರವೇರಿಸುತ್ತಿದ್ದರು. ಯಾವುದೇ ವಿಷಯವಾಗಲೀ ಅಮೃತಧಾರೆಯಾಗುತ್ತಿತ್ತು. ತಣ್ತೀಶಾಸ್ತ್ರ ಕಬ್ಬಿಣದ ಕಡಲೆಯಾದರೂ ಮೃದುವೂ, ಸ್ವಾದವೂ ಆಗುತ್ತಿದ್ದಂತೆ ದೋಷವೂ ಒಂದಿತ್ತು: ಪಾಠವಾದ ಮೇಲೆ “ಕರಗತವಾಯಿತು’ ಎನಿಸುತ್ತಿದ್ದರೂ ಹಾಗಾಗುತ್ತಿರಲಿಲ್ಲ. ಅವರ ತರಗತಿಗೆ ಸಂಬಂಧಪಡದ ವಿದ್ಯಾರ್ಥಿಗಳೂ ಬಂದು ಕುಳಿತುಕೊಳ್ಳುವುದು ಪಾಠದ ಆಕರ್ಷಣೆ. ಇಂತಹ ಅನೇಕ ಶಿಕ್ಷಕರು, ವಿದ್ಯಾರ್ಥಿಗಳೂ ನಾಡಿನಾದ್ಯಂತ ಇದ್ದರು.
Related Articles
Advertisement
ಶಿಕ್ಷಣ, ತಣ್ತೀಶಾಸ್ತ್ರದಲ್ಲಿ ಮಾಡಬಹುದಾದ ಕೆಲಸವನ್ನು ರಾಜಕೀಯ ವಾತಾವರಣಕ್ಕೆ ಹೋದ ಮೇಲೆ ಮಾಡಲಾಗಲಿಲ್ಲ ಎಂಬ ಮಾತು ಡಿವಿಜಿ ಸಹಿತ ಅನೇಕರದ್ದಿದೆ. ಆದರೆ? ಪಾಶ್ಚಾತ್ಯರು ಮಹಾತ್ಮಾ ಗಾಂಧಿಯವರನ್ನು ಕೂಡ ಕೆಟ್ಟದಾಗಿ ಚಿತ್ರಿಸಿ ಭಾರತ ವಿರುದ್ಧ ಪುಸ್ತಕಗಳನ್ನು ಬರೆಸಿ ಪ್ರಚಾರ ಮಾಡಿದ್ದರು. ಸ್ವಾತಂತ್ರ್ಯ ಬರುವ ಮೊದಲು ಪಶ್ಚಿಮ ದೇಶಗಳು ಭಾರತಕ್ಕೆ ಮನ್ನಣೆ ಕೊಡುತ್ತಿರಲಿಲ್ಲ. ಪಾಶ್ಚಾತ್ಯರಿಗಿದ್ದ ಈ ಕಲ್ಪನೆಯನ್ನು ತೊಡೆದು ಹಾಕುವಲ್ಲಿ ರಾಧಾಕೃಷ್ಣನ್ ಪ್ರಯತ್ನಿಸಿದರು. ಪಶ್ಚಿಮ ದೇಶಗಳಲ್ಲಿ ಇವರ ಉಪನ್ಯಾಸಕ್ಕೆ ಎದ್ದು ನಿಂತು ಜಯಕಾರ ಮಾಡಿ Standing ovation ಕೊಟ್ಟದ್ದನ್ನೂ ಕಂಡವರಿದ್ದಾರೆ. ಇವರಿಂದಾಗಿ ಭಾರತದ ಕುರಿತು ಸದಭಿಪ್ರಾಯ ಜಾಗತಿಕವಾಗಿ ಆಯಿತು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಇದರಿಂದಾಗಿ ಭಾರತಕ್ಕೆ ಆಗಬೇಕಾದದ್ದೇನು ಎಂಬ ಪ್ರಶ್ನೆ ಬರುತ್ತದೆ. “ಒಲ್ಲವರಿಂದಲೂ ಹೊಗಳಿಕೆಯನ್ನು ನಾವು ಬೇಡದೆ ಪಡೆಯುವಂಥ ಶಕ್ತಿ ಬೆಳೆಸಿಕೊಳ್ಳುವುದು ಕರ್ತವ್ಯ’ ಎಂದೂ ಮೂರ್ತಿರಾಯರು ಹೇಳಿದ್ದಾರೆ. “ನೀವು ಇಂಗ್ಲೆಂಡಿಗೇಕೆ ಹೋಗಲಿಲ್ಲ’ ಎಂದು ತರಗತಿಯಲ್ಲಿ ಕೇಳುತ್ತಿದ್ದಾಗ ‘We shall go, but we shall go there to teach’ ಎಂದು ಉತ್ತರಿಸಿದ್ದರು, ಆದದ್ದೂ ಹಾಗೆಯೇ.1962ರಿಂದ 67ರ ವರೆಗೆ ರಾಷ್ಟ್ರಪತಿಯವರಾಗಿದ್ದ ಸಂದರ್ಭ ಶಿಷ್ಯರು ಅವರ ಹುಟ್ಟುಹಬ್ಬ ಆಚರಿಸಲು ಕೋರಿದಾಗ ಶಿಕ್ಷಕರ ದಿನ ಆಚರಿಸಲು ಸೂಚಿಸಿದಂತೆ 1962ರಲ್ಲಿ ಭಾರತದಲ್ಲಿ ಪ್ರಥಮ ಶಿಕ್ಷಕ ದಿನಾಚರಣೆ ಆರಂಭಗೊಂಡಿತು. ರವಿವಾರ ಶಿಕ್ಷಕ ದಿನಾಚರಣೆ ನಡೆಯುವಾಗ ರಾಧಾಕೃಷ್ಣನ್ ಕಾರ್ಯಶ್ರದ್ಧೆಯನ್ನು ಶಿಕ್ಷಕರು ಮಾತ್ರವಲ್ಲ ಎಲ್ಲರೂ ಎಲ್ಲ ಕಾಲಕ್ಕೂ ಪಾಲಿಸುವುದು ಅಗತ್ಯ, ಆಗಲೇ ಸುಭಿಕ್ಷ ಕಾಲ ಬಂತೆನ್ನಬಹುದು. – ಮಟಪಾಡಿ ಕುಮಾರಸ್ವಾಮಿ