Advertisement

ರಾಮಕೃಷ್ಣ ಮಿಷನ್‌ 18ನೇ ವಾರದ ಸ್ವಚ್ಛತೆ

03:31 PM Mar 05, 2018 | |

ಮಹಾನಗರ: ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಅಭಿಯಾನದ 4ನೇ ಹಂತದ 18ನೇ ವಾರದ ಶ್ರಮದಾನ ರವಿವಾರ ಕಾವೂರು ವೃತ್ತದಲ್ಲಿ ನಡೆಯಿತು.

Advertisement

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಮಠದ ಪೀಠಾಧ್ಯಕ್ಷರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹಾಗೂ ಮಾಜಿ ಮೇಯರ್‌ ಹರಿನಾಥ್‌ ಜಂಟಿಯಾಗಿ ಅಭಿಯಾನ ಆರಂಭಿಸಿದರು. ಚೆನ್ನೈ ರಾಮಕೃಷ್ಣ ಮಠದ ಬ್ರಹ್ಮಚಾರಿ ಮಾಧವ ಚೈತನ್ಯ, ಬ್ರಹ್ಮಚಾರಿ ಶಿವಕುಮಾರ್‌ ಉಪಸ್ಥಿತರಿದ್ದರು. ವಿಧಾನ ಪರಿಷತ್‌ ವಿಕ್ಷದ ಮುಖ್ಯ ಸಚೇತಕ ಕ್ಯಾ|ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು.

ಕಾವೂರು: ಕಾರ್ಯಕರ್ತರು ಮೊದಲಿಗೆ ಕಾವೂರು ಜಂಕ್ಷನ್‌ ಸುತ್ತಮುತ್ತ ರಾಮ ಕುಮಾರ್‌ ಬೇಕಲ್‌ ಹಾಗೂ ಸಿಂಡಿಕೇಟ್‌ ಸದಸ್ಯ ಹರೀಶ್‌ ಆಚಾರ್‌ ಜತೆಗೂಡಿ ಸ್ವಚ್ಛತೆ ಕೈಗೊಂಡರು. ಅನಂತರ ಬೊಂದೆಲ್‌ ನತ್ತ ಸಾಗುವ ಮಾರ್ಗಗಳನ್ನು ಶುಚಿಮಾಡಲಾಯಿತು. ಏರ್‌ಪೋರ್ಟ್‌ ಕಡೆಗೆ ಸಾಗುವ ರಸ್ತೆಯ ಎರಡೂ ಬದಿಯ ತ್ಯಾಜ್ಯ ತೆಗೆಯಲಾಯಿತು. ಕಾವೂರು ಬಸ್‌ ತಂಗುದಾಣದ ಸುತ್ತ ಮುತ್ತಲಿನ ಪರಿಸರ, ಆಟೋ ನಿಲ್ದಾಣ ಶುಚಿಗೊಳಿಸಿ ಆಟೋ ಚಾಲಕರಿಗೆ ಸ್ವಚ್ಛತೆಯ ತಿಳುವಳಿಕೆ ನೀಡಲಾಯಿತು. ಇಮ್ತಿಯಾಜ್‌ ಶೇಖ್‌, ಸ್ವಯಂ ಸೇವಕರು ರಸ್ತೆಗಳ ಮಾರ್ಗವಿಭಾಜಕಗಳನ್ನು ಕಳೆ, ಕಸ ತೆಗೆಯಲಾಯಿತು.

ಮರಕಡ: ಸ್ವಯಂ ಸೇವಕರ ಮತ್ತೂಂದು ಗುಂಪು ಅಶೋಕ ಸುಬ್ಬಯ್ಯ ಮಾರ್ಗದರ್ಶನದಲ್ಲಿ ಮರಕಡ ಬಸ್‌ ತಂಗುದಾಣ ಸುತ್ತಮುತ್ತ ಸ್ವಚ್ಛತೆ ಕೈಗೊಂಡಿತು. ಮರಕಡ ಬಸ್‌ ತಂಗುದಾಣವನ್ನು ಶುಚಿಗೊಳಿಸಲಾಯಿತು. ಅನಂತರ ಬಸ್‌ ನಿಲ್ದಾಣದ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿ, ಗುಡಿಸಿ, ಶುಚಿ ಮಾಡಲಾಯಿತು. ಕೃಷ್ಣ ಪ್ರಸಾದ ಶೆಟ್ಟಿ, ಗಣೇಶ್‌ ಪ್ರಸಾದ ಶೆಟ್ಟಿ , ಆನಂದ ಅಡ್ಯಾರ್‌ ಮತ್ತಿತರ ಕಾರ್ಯಕರ್ತರು ಶ್ರಮದಾನ ಕೈಗೊಂಡರು.

108 ಸ್ವಚ್ಛತಾ ಮಂಥನ ಕಾರ್ಯಕ್ರಮಗಳು
ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕೆಂಬ ನಿಟ್ಟಿನಲ್ಲಿ ಯೋಜಿಸಿರುವ ಸ್ವಚ್ಛ ಮನಸ್ಸು ಅಭಿಯಾನದ ಅಡಿಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ‘ಸ್ವಚ್ಛತಾ ಮಂಥನ’ ಎಂಬ ಕೈಪಿಡಿಯ ಮೇಲೆ ವಿಶೇಷ ಕಾರ್ಯಕ್ರಮಗಳನ್ನು ಆಯಾ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಯಿತು. ಒಟ್ಟು 108 ಪ್ರೌಢಶಾಲೆಗಳಿಂದ ಒಟ್ಟು 10,750 ವಿದ್ಯಾರ್ಥಿಗಳು ಭಾಗವಹಿಸಿದರು. ಸುಮಾರು ಐವತ್ತು ಸಂಪನ್ಮೂಲ ವ್ಯಕ್ತಿಗಳು ಹಾಗೂ ಐವತ್ತು ಶಾಲಾ ಸಂಯೋಜಕರ ಸಹಕಾರದಿಂದ ಯಶಸ್ವಿಯಾಗಿ ಜರಗಿತು. ಪ್ರಧಾನ ಸಂಯೋಜಕ ರಂಜನ್‌ ಬೆಳ್ಳರಪಾಡಿ ನೇತೃತ್ವದಲ್ಲಿ ಸಂತೋಷ ಡಿ’ಸೋಜಾ, ಉಪನ್ಯಾಸಕ ಶ್ರೀವತ್ಸ ನಿರ್ಚಾಲು, ಅರ್ಜುನ ಪೈ, ವೀಣಾ ಎಸ್‌. ಪಂಡಿತ್‌ ಹಾಗೂ ಶ್ರೇಯಸ್‌ ಪಂಡಿತ್‌ ಸಂಯೋಜಿಸಿದರು. 

Advertisement

ಮನೆ ಭೇಟಿ: ಶ್ರೀ ದುರ್ಗಾಪರಮೇಶ್ವರೀ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ಸಂತೋಷ ಆಳ್ವ ಮಾರ್ಗದರ್ಶ ನದಲ್ಲಿ ಕಾವೂರು ಕಾಲನಿ ಮತ್ತು ಕಾವೂರು ಕಟ್ಟೆಯ ಪರಿಸರದಲ್ಲಿರುವ ಮನೆಗಳಿಗೆ ಭೇಟಿ ನೀಡಿದರು. ಕೋಡಂಗೆ ಬಾಲಕೃಷ್ಣ ನಾಯ್ಕ, ನಲ್ಲೂರು ಸಚಿನ್‌ ಶೆಟ್ಟಿ, ಗಣೇಶ್‌ ಕಾವೂರು ಮನೆ ಭೇಟಿಯಲ್ಲಿ ಪಾಲ್ಗೊಂಡರು.

ಫ್ಲೆಕ್ಸ್‌ ಬ್ಯಾನರ್‌ ತೆರವು: ಏರ್‌ ಪೋರ್ಟ್‌ ರಸ್ತೆಯಲ್ಲಿ ಹಲವಾರು ಫ್ಲೆಕ್ಸ್‌ ಬ್ಯಾನರಗಳು ನೇತಾಡಿಕೊಂಡು ನಗರದ ಅಂದಗೆಡಿಸುತ್ತಿದ್ದವು. ಕಳೆದ ವಾರದಂತೆ ಇಂದೂ ಸಹ ಸುಮಾರು ಐನೂರಕ್ಕೂ ಅಧಿಕ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ಅಲ್ಲಲ್ಲಿ ಅಂಟಿಸಿದ್ದ ಪೋಸ್ಟರ್‌ಗಳನ್ನೂ ತೆಗೆದು ಸ್ವಚ್ಛ  ಮಾಡಲಾಯಿತು.

ಸುಧಾಕರ್‌ ಕಾವೂರು, ಅಪ್ಜಲ್‌, ನಜೀರ್‌ ಅಹ್ಮದ್‌, ಸಚಿನ್‌ ಕಾವೂರು ಸೇರಿದಂತೆ ಅನೇಕರು ಅಭಿಯಾನದಲ್ಲಿ ಭಾಗವಹಿಸಿದರು. ಶುಭೋದಯ ಆಳ್ವ ನೇತೃತ್ವ ವಹಿಸಿದ್ದರು. ಈ ಸ್ವಚ್ಛತಾ ಕಾರ್ಯಗಳಿಗೆ ಎಂಆರ್‌ಪಿಎಲ್‌ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next