Advertisement

2 ತಲೆಮಾರು ರಾಜಕಾರಣಿಗಳ ಜತೆ ಒಡನಾಟ ಹೊಂದಿದ್ದ ರಾಮಯ್ಯ;ಬೊಮ್ಮಾಯಿ

04:01 PM Oct 28, 2022 | Team Udayavani |

ಬೆಂಗಳೂರು: ಯಾವಾಗಲೂ ಆತ್ಮಸಾಕ್ಷಿಯಾಗಿ ನಡೆಯುವುದು ಬಹಳ ಕಷ್ಟ. ನಾವು ಆತ್ಮ ಸಾಕ್ಷಿಯಂತೆ ನಡೆದರೆ ಹಲವಾರು ವಿಘ್ನಗಳು, ಸಮಸ್ಯೆಗಳು ಎದುರಾಗುತ್ತಿರುತ್ತವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅಭಿಮಾನಿ ಪ್ರಕಾಶನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಅವರ 60 ವರ್ಷಗಳ ಅನುಭವ ಕಥನ “ನಾನು
ಹಿಂದೂ ರಾಮಯ್ಯ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Advertisement

ಪಿ.ರಾಮಯ್ಯ ಅವರನ್ನು ಬಾಲ್ಯದಿಂದಲೇ ನಾನು ನೋಡಿ ಬೆಳೆದವನು. ಅವರೆಂದೂ ಆತ್ಮಸಾಕ್ಷಿಗೆ ವಂಚನೆ ಮಾಡಿ ಕೆಲಸ ಮಾಡಿದವರಲ್ಲ. ರಾಮಯ್ಯ ಪತ್ರಿಕೋದ್ಯಮದ ಮಾಸ್ಟರ್‌ ಪೀಸ್‌ ಎಂದು ಬಣ್ಣಿಸಿದರು. ನನಗೆ ರಾಮಯ್ಯ ಅವರು ಏಕಲವ್ಯಗೆ ದ್ರೋಣಾಚಾರ್ಯರು ಇದ್ದಾಗ ಹಾಗೆ. ಬಾಲ್ಯ ದಲ್ಲೇ ಅವರ ಲೇಖನಗಳನ್ನು ಓದುತ್ತಾ ಬೆಳೆದಿದ್ದೇನೆ. ಅವುಗಳಿಂದ ಬಹಳಷ್ಟು ಕಲಿತಿದ್ದೇನೆ.

ನನ್ನ ತಂದೆ ಅವರಿಗೂ ಬಹಳಷ್ಟು ಒಡನಾಟ ಇಟ್ಟುಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ಎಚ್‌.ಡಿ.ದೇವೇಗೌಡ, ಜೆ.ಎಸ್‌.ಪಟೇಲ್‌ ಸೇರಿದಂತೆ ಸುಮಾರು ಎರಡು ತಲೆಮಾರುಗಳ ರಾಜಕಾರಣಿಗಳ ಜತೆ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು. ಸತ್ಯವನ್ನು ಕೂಡ ಪ್ರಿಯವಾಗಿ ಹೇಳುವ ಕಲೆ ರಾಮಯ್ಯ ಅವರಿಗೆ ಸಿದ್ಧಿಸಿತ್ತು. ಅವರ ಬದುಕಿನಲ್ಲಿ ಹೇಳ ಬೇಕಾಗಿರುವ ಘಟನೆಗಳು ಇನ್ನೂ ಬಹಳಷ್ಟಿವೆ. ಆದರೆ ಅವುಗಳನ್ನು ಎಲ್ಲೂ ಹೇಳಿಲ್ಲ. ಬೇರೆ ಯಾರಾದರೂ ಆಗಿದ್ದರೆ ತಮ್ಮ ಅಭಿಪ್ರಾಯನ್ನು ಸೇರಿಸಿ ಪ್ರಶಸ್ತಿಗೆ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ರಾಮಯ್ಯ ಅವರು ಹೇಗೆ ಮುಗ್ದರಾಗಿದ್ದಾರೋ ಅದೇ ರೀತಿಯಲ್ಲಿ
ಬರಹದಲ್ಲಿ ಮುಗ್ದ ತೆ ಕಾಪಾಡಿಕೊಂಡಿದ್ದಾರೆ ಎಂದು ಹೇಳಿದರು.

ಕೃತಿ ಕುರಿತು ಮಾತನಾಡಿದ ಸಂಯುಕ್ತ ಕರ್ನಾಟಕ ಪ್ರಧಾನ ಸಂಪಾದಕ ಹುಣಸವಾಡಿ ರಾಜನ್‌, ಪಿ.ರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗಿನ ಅನುಭವವನ್ನು ಕೇಳುವಾಗ ಸಮಗ್ರ ದೃಷ್ಟಿಯಿಂದ ಅವರು ವ್ಯಕ್ತಿ ನೋಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಒಡನಾಟ ಮತ್ತು ಸಂಬಂಧದ ಬಗ್ಗೆಯೂ ಸುದೀರ್ಘ‌ವಾಗಿ ಉಲ್ಲೇಖಿಸಿದ್ದಾರೆ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ, ಅಭಿಮಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ವೆಂಕಟೇಶ್‌, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಸ್‌ ಕ್ಲಬ್‌ ಆಫ್ ಬೆಂಗಳೂರು ಅಧ್ಯಕ್ಷ ಆರ್‌.ಶ್ರೀಧರ್‌, ವಾರ್ತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ದಿನೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

ಎಲ್ಲರ ಜೊತೆಗಿನ ಪ್ರೀತಿ ವಿಶ್ವಾಸವೇ ನನ್ನ ದೊಡ್ಡ ಆಸ್ತಿ
ಪಿ.ರಾಮಯ್ಯ ಮಾತನಾಡಿ, 45 ವರ್ಷಗಳ ಸುದೀರ್ಘ‌ ಪತ್ರಿಕಾ ವೃತ್ತಿಯಲ್ಲಿ ಸಮಾಜದ ಎಲ್ಲ ವರ್ಗಗಳ ಪ್ರೀತಿ-ವಿಶ್ವಾಸ ಗಳಿಸಿರುವುದೇ ನನ್ನ ದೊಡ್ಡ ಆಸ್ತಿ. ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾ ವಲಯದಲ್ಲಿ ಮರೆಯಲಾರದಂತಹ ಕ್ಷಣಗಳನ್ನು ನಾನು ಸಾಕಷ್ಟು ನೋಡಿದ್ದೇನೆ. ವಿಧಾನಸೌಧದ 4ನೇ ದರ್ಜೆ ನೌಕರನಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೂ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದೇನೆ ಎಂದು ಭಾವುಕರಾದರು.

Advertisement

Udayavani is now on Telegram. Click here to join our channel and stay updated with the latest news.

Next