Advertisement

Ayodhya: ರಾಮಮಂದಿರ ಪ್ರಾಣ ಪ್ರತಿಷ್ಠೆ- ಕಾರ್ಯಕ್ರಮ ಆಹ್ವಾನ ತಿರಸ್ಕರಿಸಿದ ಎಡಪಕ್ಷಗಳು

09:55 PM Dec 26, 2023 | Team Udayavani |

ಅಯೋಧ್ಯೆ/ನವದೆಹಲಿ: ಮುಂದಿನ ತಿಂಗಳ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಮುಂದುವರಿದಿದೆ. ಅದರ ಬೆನ್ನಲ್ಲಿಯೇ ಕಾರ್ಯಕ್ರಮದ ಆಹ್ವಾನವನ್ನು ಸಿಪಿಎಂ, ಸಿಪಿಐ ನಾಯಕರು ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್‌ ವತಿಯಿಂದ ಆಹ್ವಾನ ನೀಡಲಾಗುತ್ತಿದೆ. ಅದರಂತೆಯೇ ಸಿಪಿಎಂ ಮತ್ತು ಸಿಪಿಐ ನಾಯಕರಿಗೂ ವಿಧ್ಯುಕ್ತ ಆಹ್ವಾನ ನೀಡಲಾಗಿತ್ತು. ಆದರೆ, ಆಹ್ವಾನವನ್ನು ತಿರಸ್ಕರಿಸಿರುವ ಸಿಪಿಎಂ ನಾಯಕರಾದ ಸೀತಾರಾಮ್‌ ಯೆಚೂರಿ ಮತ್ತು ಬೃಂದಾ ಕಾರಟ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ ಸಿಪಿಎಂ “ಧರ್ಮ ಎನ್ನುವುದು ವೈಯಕ್ತಿಕ ಆಯ್ಕೆ. ನಾವು ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ. ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಬಾರದು. ಈ ಹಿನ್ನೆಲೆಯಲ್ಲಿ ನಮ್ಮ ನಾಯಕ ಸೀತಾರಾಮ್‌ ಯೆಚೂರಿ ಜ.22ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ’ ಎಂದು ಸಮರ್ಥನೆ ನೀಡಿದೆ. ಸಿಪಿಎಂ ನಾಯಕಿ ಬೃಂದಾ ಕಾರಟ್‌ ಮಾತನಾಡಿ “ನಾವು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎನ್ನುವುದು ಸ್ಪಷ್ಟ. ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಕ್ಕೆ ನಂಟು ಮಾಡಿಕೊಳ್ಳಬಾರದು ಎನ್ನುವುದು ನಮ್ಮ ಅಭಿಪ್ರಾಯ’ ಎಂದು ಹೇಳಿದ್ದಾರೆ. ಸಿಪಿಐ ನಾಯಕರೂ ಕೂಡ ಇದೇ ಧ್ವನಿಯಲ್ಲಿ ಮಾತನಾಡಿದ್ದಾರೆ.

ನಾನು ಹೋಗುವುದಿಲ್ಲ:
ಕೇಂದ್ರದ ಮಾಜಿ ಸಚಿವ, ಎಸ್‌ಪಿ ನಾಯಕ ಕಪಿಲ್‌ ಸಿಬಲ್‌ ಜ.22ರ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ರಾಮನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು. ಕಾಂಗ್ರೆಸ್‌ ನಾಯಕರಾಗಿರುವ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧಿರ್‌ ರಂಜನ್‌ ಚೌಧರಿ ಸೇರಿದಂತೆ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಆದರೆ, ಅವರು ಅಯೋಧ್ಯೆಗೆ ತೆರಳಲಿದ್ದಾರೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.

ನಿಲುವಿಗೆ ಬಿಜೆಪಿ ಕೋಪ:
ಎಡ ಪಕ್ಷಗಳ ನಾಯಕರು ಮತ್ತು ಕಪಿಲ್‌ ಸಿಬಲ್‌ ಹೊಂದಿರುವ ನಿಲುವಿನ ಬಗ್ಗೆ ಬಿಜೆಪಿ ನಾಯಕರು ಕಟುವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ಖಾತೆ ಸಹಾಯಕ ಸಚಿವೆ ಮೀನಾಕ್ಷಿ ಲೇಖೀ ಮಾತನಾಡಿ “ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಶ್ರೀರಾಮನು ಜ.22ರಂದು ಯಾರನ್ನು ಅಯೋಧ್ಯೆಗೆ ಕರೆಯಿಸಿಕೊಳ್ಳಲು ಇಚ್ಛಿಸಿದ್ದಾನೋ ಅವರನ್ನು ಮಾತ್ರ ಬರುವಂತೆ ಮಾಡುತ್ತಾನೆ’ ಎಂದಿದ್ದಾರೆ. ಅಯೋಧ್ಯೆಗೆ ಬರುವುದಿಲ್ಲ ಎಂದವರೇ ಧರ್ಮವನ್ನು ರಾಜಕೀಯಕ್ಕಾಗಿ ಆಯುಧದಂತೆ ಬಳಕೆ ಮಾಡುತ್ತಿದ್ದಾರೆ ಎಂದು ಲೇಖೀ ಟೀಕಿಸಿದ್ದಾರೆ.

Advertisement

ಶ್ರೀರಾಮ ಎನ್ನುವುದು ನಂಬಿಕೆಯ ಸಂಕೇತ. ಅದನ್ನು ನಮ್ಮ ಹಿರಿಯರೂ ನಂಬಿಕೊಂಡಿದ್ದರು. ಜತೆಗೆ ದೇಶದಲ್ಲಿಯೂ ಆ ಭಾವನೆ ಇದೆ ಎಂದು ಲೇಖೀ ಹೇಳಿದ್ದಾರೆ.

ಧೈರ್ಯವಿದ್ದರೆ ಬನ್ನಿ:
ಅಯೋಧ್ಯೆಗೆ ಜ.22ರ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂಬ ಎಡಪಕ್ಷಗಳ ನಾಯಕ ಹೇಳಿಕೆಯನ್ನು ಟೀಕಿಸಿರುವ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ “ಧೈರ್ಯವಿದ್ದರೆ ಜ.22ರಂದು ಅಯೋಧ್ಯೆಗೆ ಬನ್ನಿ. ಆ ದಿನ ನಾವು ಅವರಿಗೆ ಅಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರವನ್ನು ತೋರಿಸುತ್ತೇವೆ’ ಎಂದು ಸವಾಲು ಹಾಕಿದ್ದಾರೆ.

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು?
ಅಯೋಧ್ಯೆಯಲ್ಲಿ ಡಿ.30ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಳ್ಳಲಿರುವ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇರಿಸುವ ಸಾಧ್ಯತೆಗಳು ಇವೆ. ಸದ್ಯ ಅದಕ್ಕೆ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರು ಇರಿಸಲಾಗಿದೆ. ಬದಲಾಗಿರುವ ಸನ್ನಿವೇಶದಲ್ಲಿ ಉತ್ತರ ಪ್ರದೇಶ ಸರ್ಕಾರ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಹೆಸರನ್ನು ಇರಿಸಲು ಚಿಂತನೆ ನಡೆಸಿದೆ. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿಯೇ ಪ್ರಸ್ತಾವನೆ ಕಳುಹಿಸುವ ಸಾಧ್ಯತೆಗಳು ಇವೆ.

ಜ.16ರಿಂದ ಅಯೋಧ್ಯೆ ಬೆಂಗಳೂರು ನಡುವೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ
ಟಾಟಾ ಮಾಲೀಕತ್ವದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಜ.16ರಿಂದ ಅಯೋಧ್ಯೆಯಿಂದ ಬೆಂಗಳೂರು ನಡುವೆ ವಿಮಾನ ಸೇವೆಗಳನ್ನು ಆರಂಭಿಸಲಿದೆ. ಆ ದಿನ ಬೆಳಗ್ಗೆ 5.10 ನಿಮಿಷಕ್ಕೆ ಅಯೋಧ್ಯೆಯಿಂದ ಹೊರಟು ಗ್ವಾಲಿಯರ್‌ ಮೂಲಕ ಬೆಂಗಳೂರನ್ನು ಸಂಜೆ 6.10 ನಿಮಿಷಕ್ಕೆ ತಲುಪಲಿದೆ. ಅದೇ ದಿನ ಬೆಂಗಳೂರು, ನವದೆಹಲಿ, ಗ್ವಾಲಿಯರ್‌, ಕಲ್ಲಿಕೋಟೆ ನಡುವೆ ಹೊಸ ಯಾನಗಳನ್ನೂ ಶುರು ಮಾಡಲಿದೆ.

ಮಂದಿರಲ್ಲಿ ಇರಲಿದೆ ಬೃಹತ್‌ ಜಟಾಯುವಿನ ಪ್ರತಿಮೆ
ರಾಮ ಮಂದಿರ ಆವರಣದಲ್ಲಿ ಜಟಾಯುವಿನ ಬೃಹತ್‌ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ. ಅದನ್ನು ಅಯೋಧ್ಯೆಯ “ಕುಬೇರ ತಿಲ’ ಎಂಬಲ್ಲಿ ಸ್ಥಾಪಿಸಲಾಗುತ್ತದೆ ಎಂದಿದ್ದಾರೆ. ಇದರ ಜತೆಗೆ ನಿರ್ಮಾಣ ಹಂತದಲ್ಲಿ ಇರುವ ರಾಮ ಮಂದಿರ ಆತ್ಮನಿರ್ಭರದ ಪ್ರತೀಕ ಆಗಲಿದೆ. ತ್ಯಾಜ್ಯ ಮತ್ತು ಕೊಳಚೆ ನೀರಿನ ನಿರ್ವಹಣೆಯಲ್ಲಿ ಸ್ವದೇಶಿ ತಂತ್ರಜ್ಞಾನ ಅನುಷ್ಠಾನಗೊಳಿಸಲಾಗುತ್ತದೆ ಎಂದು ಒಟ್ಟು ಎರಡು ತ್ಯಾಜ್ಯ ಸಂಸ್ಕರಣಾ ಘಟಕಗಳು ಇವೆ. ಒಟ್ಟು 70 ಎಕರೆ ಇರುವ ದೇಗುಲ ಆವರಣದಲ್ಲಿ ಶೇ.70 ಹಸರು ವಾತಾವರಣವೇ ಇರಲಿದೆ ಎಂದರು.

ಭಗವಾನ್‌ ಶ್ರೀರಾಮ ನನ್ನ ಹೃದಯದಲ್ಲಿಯೇ ಇದ್ದಾನೆ ಎಂದು ನಂಬುತ್ತೇನೆ. ಹೀಗಾಗಿಯೇ ಆತ ನನಗೆ ಯೋಗ್ಯ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾನೆ ಎಂಬ ನಂಬಿಕೆ ನನಗಿದೆ. ಹೀಗಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನಾನು ತಿಳಿಯುತ್ತಿಲ್ಲ.
ಕಪಿಲ್‌ ಸಿಬಲ್‌, ಮಾಜಿ ಸಚಿವ

ನಮ್ಮ ಪಕ್ಷದ ನಾಯಕರಿಗೆ ಆಹ್ವಾನ ಸಿಕ್ಕಿದೆ. ಅಯೋಧ್ಯೆಗೆ ಹೋಗುವುದೋ ಬಿಡುವುದೋ ಎಂಬ ವಿಚಾರ ಜ.22ರಂದು ಗೊತ್ತಾಗಲಿದೆ.
ಕೆ.ಸಿ.ವೇಣುಗೋಪಾಲ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಶ್ರೀರಾಮನು ಜ.22ರಂದು ಯಾರನ್ನು ಅಯೋಧ್ಯೆಗೆ ಕರೆಯಿಸಿಕೊಳ್ಳಲು ಇಚ್ಛಿಸಿದ್ದಾನೋ ಅವರನ್ನು ಮಾತ್ರ ಬರುವಂತೆ ಮಾಡುತ್ತಾನೆ. ಅಯೋಧ್ಯೆಗೆ ಬರುವುದಿಲ್ಲ ಎಂದವರೇ ಧರ್ಮವನ್ನು ರಾಜಕೀಯಕ್ಕಾಗಿ ಆಯುಧದಂತೆ ಬಳಕೆ ಮಾಡುತ್ತಿದ್ದಾರೆ.
ಮೀನಾಕ್ಷಿ ಲೇಖೀ, ಕೇಂದ್ರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next