ಬೆಂಗಳೂರು : ಬಿಜೆಪಿ-ಜೆಡಿಎಸ್ ಒಳ ಮೈತ್ರಿ ತಡೆಯಲು ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಕಣಕ್ಕಿಳಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆ ನೀಡುತ್ತಿದ್ದರೂ ಒಳರಾಜಕೀಯ ಬೇರೆಯದೇ ಇದೆ ಎಂಬುದು ಈಗ ಬಹಿರಂಗಗೊಂಡಿದೆ.
ವಾಸ್ತವದಲ್ಲಿ ಜೆಡಿಎಸ್- ಕಾಂಗ್ರೆಸ್ ಮಧ್ಯೆ ನಡೆಯಬಹುದಾದ ಒಳಮೈತ್ರಿಯನ್ನು ತಡೆಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಲಹೆಯನ್ನು ವರಿಷ್ಠರಿಗೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶಾಕ್ ನೀಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಫಾರ್ಮ್ ಪಡೆದಿದ್ದ ಕುಪ್ಪೇಂದ್ರ ರೆಡ್ಡಿ , ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಹೆಚ್ಚುವರಿ ಮತವನ್ನು ತಮಗೆ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಡಿಕೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಈ ಮಾಹಿತಿ ಲಭಿಸುತ್ತಿದ್ದಂತೆ ಕೆಂಡಾಮಂಡಲವಾದ ಸಿದ್ದರಾಮಯ್ಯ ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದು ಟ್ವೀಟ್ ಮಾಡಿದ್ದರು. ಸಾಲದಕ್ಕೆ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜತೆ ದೂರವಾಣಿಯಲ್ಲಿ ಚರ್ಚೆ ನಡೆಸಿ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವುದಕ್ಕೆ ಒಪ್ಪಿಗೆ ಪಡೆದರು. ಹೀಗಾಗಿ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ರಾಜ್ಯಸಭಾ ಚುನಾವಣಾ ಕಣ ಪ್ರವೇಶಿಸುವಂತಾಗಿದೆ.
ಇದನ್ನೂ ಓದಿ : ಕನ್ನಡದ ಡಿಂಡಿಮವನ್ನು ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ: ನಟ ಜಗ್ಗೇಶ್
ಈ ಬೆಳವಣಿಗೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ಮಧ್ಯೆ ಭಾರಿ ಕಂದಕ ಸೃಷ್ಟಿಸಿದೆ.