Advertisement
ಒಟ್ಟು ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ದಲಿತ, ಒಕ್ಕಲಿಗ, ಮುಸ್ಲಿಂ ಸಂಯೋಜನೆ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ದಲಿತ ಸಮುದಾಯದಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ, ಒಕ್ಕಲಿಗ ಸಮುದಾಯದಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ಮತ್ತು ಮುಸ್ಲಿಂ ಸಮುದಾಯದಿಂದ ಎಐಸಿಸಿ ವಕ್ತಾರ ಸೈಯದ್ ನಸೀರ್ ಹುಸೈನ್ ಅವರನ್ನು ಆಯ್ಕೆ ಮಾಡಿದೆ.ಇನ್ನು ಒಂದು ಸ್ಥಾನ ಪಡೆಯುವ ಶಕ್ತಿ ಹೊಂದಿರುವ ಬಿಜೆಪಿ ಉದ್ಯಮಿ ಹಾಗೂ ಹಾಲಿ ಸಂಸದ ರಾಜೀವ್ ಚಂದ್ರಶೇಖರ್ ಹೆಸ ರನ್ನು ಅಂತಿಮಗೊಳಿಸಿದೆ. ಇನ್ನೊಂದೆಡೆ ಜೆಡಿಎಸ್ ಬಿ.ಎಂ.ಫಾರೂಕ್ ಅವರನ್ನು ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಅಂತಿಮ ದಿನವಾಗಿದ್ದು, ಈಗಾಗಲೇ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಒಟ್ಟು ಸ್ಥಾನಗಳು- 218 (ನಾಮ ನಿರ್ದೇಶಿತ ಸದಸ್ಯರು ಸೇರಿ)
ಕಾಂಗ್ರೆಸ್- 122 (ಸ್ಪೀಕರ್, ನಾಮ ನಿರ್ದೇಶಿತ ಸದಸ್ಯರು ಸೇರಿ- 124)
ಬಿಜೆಪಿ- 43
ಜೆಡಿಎಸ್- 37
ಬಿಎಸ್‌ಆರ್ ಕಾಂಗ್ರೆಸ್- 3
ಕೆಜೆಪಿ- 2
ಕರ್ನಾಟಕ ಮಕ್ಕಳ ಪಕ್ಷ- 1
ಪಕ್ಷೇತರರು- 8 ಗೆಲ್ಲಲು ಬೇಕಾದ ಮತಗಳು- 45
– ಕಾಂಗ್ರೆಸ್‌ಗೆ 124 ಸ್ಥಾನಗಳ ಜತೆಗೆ ಜೆಡಿಎಸ್‌ನ ಏಳು ಬಂಡಾಯ ಶಾಸಕರು, ಕರ್ನಾಟಕ ಮಕ್ಕಳ ಪಕ್ಷದ ಒಂದು, ಕೆಜೆಪಿಯ ಒಂದು ಸ್ಥಾನಗಳು ಸೇರಿ 133 ಸದಸ್ಯರ ಬೆಂಬಲವಿದೆ.
– ಬಿಜೆಪಿಗೆ 43 ಸ್ಥಾನಗಳ ಜತೆಗೆ ಬಿಎಸ್‌ಆರ್ ಕಾಂಗ್ರೆಸ್‌ನ 3, ಕೆಜೆಪಿಯ 1 ಶಾಸಕರು ಸೇರಿ 47 ಸದಸ್ಯರ ಬೆಂಬಲವಿದ್ದು, ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸಹಕರಿಸಿದರೆ ಒಟ್ಟು ಬೆಂಬಲ 48ಕ್ಕೇರುತ್ತದೆ.
– ಜೆಡಿಎಸ್‌ನಲ್ಲಿ 37 ಸ್ಥಾನಗಳಿದ್ದರೂ ಏಳು ಶಾಸಕರು ಬಹಿರಂಗವಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವುದರಿಂದ 30 ಸದಸ್ಯರ ಬೆಂಬಲ ಮಾತ್ರ ಉಳಿದುಕೊಳ್ಳುತ್ತದೆ.
– ಕಾಂಗ್ರೆಸ್ ಮೂರನೇ ಸ್ಥಾನ ಗೆಲ್ಲಲು ಇನ್ನು ಇಬ್ಬರು ಶಾಸಕರ ಬೆಂಬಲ ಬೇಕಾಗುತ್ತದೆ. ಬಿಜೆಪಿ ಒಂದು ಸ್ಥಾನ ಗೆಲ್ಲಿಸಿಕೊಳ್ಳುವಷ್ಟು ಸಮರ್ಥವಾಗಿದ್ದು, ಜೆಡಿಎಸ್‌ಗೆ 15 ಮತಗಳ ಕೊರತೆ ಕಂಡುಬಂದಿದೆ.
Related Articles
ಕಾಂಗ್ರೆಸ್– ಡಾ.ಎಲ್.ಹನುಮಂತಯ್ಯ, ಸೈಯದ್ ನಸೀರ್ ಹುಸೈನ್, ಜಿ.ಸಿ.ಚಂದ್ರಶೇಖರ್
ಬಿಜೆಪಿ– ರಾಜೀವ್ ಚಂದ್ರಶೇಖರ್
ಜೆಡಿಎಸ್– ಬಿ.ಎಂ. ಫಾರೂಕ್
Advertisement
ಕಾಂಗ್ರೆಸ್‌ನಲ್ಲಿ ಅಚ್ಚರಿಯ ಅಭ್ಯರ್ಥಿಗಳುಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ದಲಿತ ವರ್ಗಕ್ಕೆ ಸೇರಿರುವ ಎಚ್.ಹನುಮಂತಪ್ಪ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ ಮಾಜಿ ಸಚಿವ ನಜೀರ್ ಅಹಮದ್ ಅಥವಾ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಸಲೀಂ ಅಹಮದ್, ಸಿ.ಕೆ. ಜಾಫರ್ ಷರೀಫ್ ಹೆಸರು ಕೇಳಿಬರುತ್ತಿತ್ತು. ಆದರೆ, ಈ ಎಲ್ಲಾ ಹೆಸರುಗಳನ್ನು ಕೈಬಿಟ್ಟು ದಲಿತ ಕೋಟಾದಲ್ಲಿ ಡಾ.ಎಲ್.ಹನುಮಂತಯ್ಯ ಹಾಗೂ ಅಲ್ಪಸಂಖ್ಯಾತ ಕೋಟಾದಲ್ಲಿ ಸೈಯದ್ ನಸೀರ್ ಹುಸೈನ್ ಅವರಿಗೆ ಮಣೆ ಹಾಕಿದೆ. ಮೂರನೇ ಸ್ಥಾನಕ್ಕೆ ಹೊರಗಿನಿಂದ ಸ್ಯಾಮ್ ಪಿತ್ರೋಡಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ, ಮೀರಾ ಕುಮಾರ್ ಹೀಗೆ ಹಲವು ಹೆಸರುಗಳು ಕೇಳಿಬರುತ್ತಿದ್ದವಾದರೂ ಅಂತಿಮವಾಗಿ ರಾಜ್ಯದವರೇ ಆದ ಜಿ.ಸಿ.ಚಂದ್ರಶೇಖರ್ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಿದೆ. ಬಿಜೆಪಿಯಲ್ಲೂ ನಾಲ್ವರ ಹೆಸರು ಪರಿಗಣನೆ
ಬಿಜೆಪಿಯಲ್ಲಿ ಮೊದಲು ಹಾಲಿ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಮತ್ತು ಉದ್ಯಮಿ ವಿಜಯ ಸಂಕೇಶ್ವರ ಅವರ ಹೆಸರನ್ನು ದೆಹಲಿಗೆ ಕಳುಹಿಸಲಾಗಿತ್ತು. ಆದರೆ, ಪಕ್ಷಕ್ಕಾಗಿ ದುಡಿಯುತ್ತಿರುವ ಒಬ್ಬರ ಹೆಸರನ್ನು ಕಳುಹಿಸಿಕೊಡುವಂತೆ ವರಿಷ್ಠರು ಸೂಚಿಸಿದ್ದರಿಂದ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಮತ್ತು ಈ ಹಿಂದೆ ಡಿವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾದಾಗ ಅವರನ್ನು ಆಯ್ಕೆ ಮಾಡುವ ಸಲುವಾಗಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿಂದುಳಿದ ವರ್ಗದ ಮುಖಂಡ ಶಂಕರಪ್ಪ ಅವರ ಹೆಸರನ್ನು ಕಳುಹಿಸಿಕೊಡಲಾಗಿತ್ತು. ಈ ನಾಲ್ವರ ಪೈಕಿ ವರಿಷ್ಠರು ರಾಜೀವ್ ಚಂದ್ರಶೇಖರ್ ಅವ ರನ್ನು ಆಯ್ಕೆ ಮಾಡಿ ದ್ದಾ ರೆ. ಕೇರಳದ ಮೇಲೆ ಕಣ್ಣಿಟ್ಟು ಆರ್‌ಸಿ ಆಯ್ಕೆ?
ರಾಜೀವ್ ಚಂದ್ರಶೇಖರ್ ಆಯ್ಕೆ ಹಿಂದೆ ಕೇರಳ ರಾಜ್ಯದಲ್ಲಿ ಬಿಜೆಪಿಯನ್ನು ಬಲಗೊಳಿಸುವ ಉದ್ದೇಶವಿದೆ ಎಂದು ಹೇಳಲಾಗಿದೆ. ಉದ್ಯಮಿಯಾಗಿರುವ ರಾಜೀವ್ ಚಂದ್ರಶೇಖರ್ ಕೇರಳ ಮೂಲದವರಾಗಿದ್ದು, ಅಲ್ಲಿ ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ ಹೆಸರಿನಲ್ಲಿ ಬೃಹತ್ ಡಿಜಿಟಲ್ ಕೇಬಲ್ ನೆಟ್‌ವರ್ಕ್ ಉದ್ಯಮವನ್ನು ಹೊಂದಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ತನ್ನ ಸಂಘಟನೆ ಬಲಪಡಿಸಲು ಆದ್ಯತೆ ನೀಡುತ್ತಿರುವ ಬಿಜೆಪಿ, ಅದಕ್ಕೆ ರಾಜೀವ್ ಚಂದ್ರಶೇಖರ್ ನೆರವು ಪಡೆಯಲು ಮುಂದಾಗಿದೆ. ಮೇಲಾಗಿ ರಾಜ್ಯದಲ್ಲೂ ಅವರ ಏಷ್ಯಾನೆಟ್ ಜಾಲವಿದ್ದು, ಈ ಹಿನ್ನೆಲೆಯಲ್ಲಿ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ರಾಜ್ಯಸಭೆ ಅಭ್ಯರ್ಥಿಯಾಗಿ ಪರಿಗಣಿಸಿದೆ ಎಂದು ಹೇಳಲಾಗಿದೆ.