Advertisement

ರಾಜ್ಯಸಭಾ ಚುನಾವಣೆ: ಯಾವುದೇ ಹೆಸರು ಶಿಫಾರಸು ಇಲ್ಲ-ರಾಜೀವ್‌ ಚಂದ್ರಶೇಖರ್‌ ಮುಂದುವರಿಕೆ ಖಚಿತ

12:33 AM Feb 03, 2024 | Team Udayavani |

ಬೆಂಗಳೂರು: ಮುಂಬರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಪಟ್ಟಂತೆ ಬಿಜೆಪಿ ಕೋರ್‌-ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮುಂದುವರಿಯುವುದು ಬಹುತೇಕ ಅಂತಿಮವಾಗಿದೆ. ಆದರೆ ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಅಳೆದು-ತೂಗಿ ನಿರ್ಧಾರ ತೆಗೆದುಕೊಳ್ಳಲು ಸಭೆ ನಿರ್ಣಯಿಸಿದೆ.

Advertisement

ಖಾಲಿಯಾಗುವ ನಾಲ್ಕು ಸ್ಥಾನಗಳ ಪೈಕಿ ಒಂದು ಮಾತ್ರ ಬಿಜೆಪಿಗೆ ಯಾವುದೇ ಆತಂಕವಿಲ್ಲದೇ ಲಭಿಸುತ್ತದೆ. ಆದರೆ ಅಭ್ಯರ್ಥಿ ಇಳಿಸಿದರೆ ಹೆಚ್ಚುವರಿ ಮತವನ್ನು ಯಾರು, ಹೇಗೆ ತರುವುದು? ಅಥವಾ ಆ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದೋ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಲಭಿಸುವುದು ಕಷ್ಟವಾದ್ದರಿಂದ ಹೊಣೆಯನ್ನು ಹೈಕಮಾಂಡ್‌ ಹೆಗಲಿಗೆ ಒಪ್ಪಿಸಲು ನಿರ್ಧರಿಸಲಾಗಿದೆ. ಒಂದೊಮ್ಮೆ ರಾಜೀವ್‌ ಚಂದ್ರಶೇಖರ್‌ ಅವರೇ ಮುಂದುವರಿಯುವುದಾದರೆ ಇಲ್ಲಿ ಚರ್ಚೆ ಬೇಡ, ಬೇರೆ ಹೆಸರನ್ನು ಕಳುಹಿಸಿ ಎಂಬ ಸೂಚನೆ ಬಂದರೆ ಮತ್ತೆ ಸಭೆ ಸೇರಿ ದಿಲ್ಲಿಗೆ ಹೆಸರು ಕಳುಹಿಸಿಕೊಡೋಣ ಎಂದು ಸಭೆ ನಿರ್ಧರಿಸಿದೆ.

ಎಚ್ಚರಿಕೆಯ ಹೆಜ್ಜೆ
ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಜೆಡಿಎಸ್‌ನಿಂದ ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅಥವಾ ಬಿಜೆಪಿಯಿಂದ ವಿ. ಸೋಮಣ್ಣ ಹೆಸರು ಪ್ರಸ್ತಾವವಾಗಿದೆ. ಆದರೆ ಯಾವುದೇ ಹೆಸರು ಕಳುಹಿಸುವ ನಿರ್ಣಯ ತೆಗೆದುಕೊಂಡಿಲ್ಲ. ಈ ಹಿಂದೆ ರಾಜ್ಯ ಕೋರ್‌ ಕಮಿಟಿ ಶಿಫಾರಸು ಮಾಡಿದ ಹೆಸರುಗಳಿಗೆ ವರಿಷ್ಠರು ಮನ್ನಣೆ ನೀಡದ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲಾಗಿದೆ.

ಎರಡನೇ ಅಭ್ಯರ್ಥಿ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ, ಎರಡು ಸ್ಥಾನ ಗೆಲ್ಲುವುದಕ್ಕೆ ಒಟ್ಟು 96 ಮತಗಳು ಬೇಕಾಗುತ್ತವೆ. ಬಿಜೆಪಿ, ಜೆಡಿಎಸ್‌ ಸೇರಿದರೆ 85 ಮತಗಳಾಗುತ್ತವೆ. ಇನ್ನು 6 ಮತಗಳ ಕೊರತೆ ಇದೆ. ಹೀಗಾಗಿ ಕೇಂದ್ರ ನಾಯಕರ ಜತೆ ಚರ್ಚೆ ನಡೆಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.
ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿಯವರು ತಮ್ಮ ವಿರುದ್ಧ ಬಳಕೆ ಮಾಡಿರುವ ಅವಹೇಳನಕಾರಿ ಶಬ್ದಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ ಪಕ್ಷ ನರೇಂದ್ರ ಸ್ವಾಮಿಯವರಿಂದ ಈ ಹೇಳಿಕೆ ಕೊಡಿಸಿದೆ. ನಾನು ಯಾವುದೇ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ನಾವೇನು ತಾಲಿಬಾನ್‌ ಧ್ವಜ ಹಾಕಿದ್ದೇವಾ ಎಂದು ಕೇಳಿದ್ದೇನೆ. ಇದರಲ್ಲಿ ಅಪಮಾನ ಏನಿದೆ ? ನರೇಂದ್ರಸ್ವಾಮಿಯವರು ನನ್ನ ಬಗ್ಗೆ ಆಡಿರುವ ಮಾತು ಅವರಿಗೆ ಸೇರಲಿ. ಯಾರಿಗೆ ಯಾವುದರ ಬಗ್ಗೆ ಅನುಮಾನ ಇರುತ್ತದೋ, ಆಗ ಇನ್ನೊಬ್ಬರ ಬಗ್ಗೆ ಆ ರೀತಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಕಚೇರಿಗೆ ಬಂದ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್‌
ವಿಧಾನಪರಿಷತ್‌ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ ಎ.ಪಿ. ರಂಗನಾಥ್‌ ಬಿಜೆಪಿ ಕಚೇರಿಗೆ ಬಂದು ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರ ಜತೆಗೆ ಚರ್ಚೆ ನಡೆಸಿದ್ದಾರೆ. ಈ ಕ್ಷೇತ್ರದ ಚುನಾವಣ ಉಸ್ತುವಾರಿಯಾಗಿ ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರನ್ನು ಈಗಾಗಲೇ ನೇಮಕ ಮಾಡಲಾಗಿದ್ದು, ಚುನಾವಣೆ ಗೆಲ್ಲುವ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next