Advertisement

ರಾಜ್ಯಸಭೆ ಚುನಾವಣೆ; ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ

12:24 AM Feb 16, 2024 | Team Udayavani |

ಬೆಂಗಳೂರು: ರಾಜ್ಯಸಭೆಗೆ ಫೆ. 27ರಂದು ನಡೆಯುವ ಚುನಾವಣೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ  ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಗೆಲ್ಲಲು ನಾಲ್ಕು ಮತಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆ ಗಳ ನಡುವೆ ಅಡ್ಡ ಮತದಾನ ಭೀತಿಯಿಂದ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ನತ್ತ ತೆರಳುವ ಸಾಧ್ಯತೆ ಇದೆ.

Advertisement

ಬೆಂಗಳೂರು, ಫೆ. 15: ರಾಜ್ಯಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಇಡೀ ದೇಶ ಮತ್ತೆ ಕರ್ನಾಟಕದತ್ತ ದೃಷ್ಟಿ ಹರಿಸುವಂತಾಗಿದ್ದು, ಕೊನೇ ಕ್ಷಣದಲ್ಲಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದರೊಂದಿಗೆ ಅಖಾಡ ರಂಗೇರಿದೆ. ಯಾರ ಮತ ಬುಟ್ಟಿಗೆ ಯಾರು ಕನ್ನ ಹಾಕಬಹುದೆಂಬ ಭೀತಿ ಈಗ ಮೂರು ಪಕ್ಷಗಳನ್ನೂ ಕಾಡುತ್ತಿದ್ದು, ಕಾಂಗ್ರೆಸ್‌ ತನ್ನ ಶಾಸಕರೊಂದಿಗೆ ರೆಸಾರ್ಟ್‌ನತ್ತ ಮುಖ ಮಾಡಲು ಮುಂದಾಗಿದೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿಗಳಾದ ಅಜಯ್‌ ಮಾಕೆನ್‌, ನಾಸಿರ್‌ ಹುಸೇನ್‌ ಹಾಗೂ ಜಿ.ಸಿ.ಚಂದ್ರಶೇಖರ್‌ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುಜೇìವಾಲಹಾಗೂ ಹಿರಿಯ ಸಚಿವರ ಜತೆ ನಾಮಪತ್ರ ಸಲ್ಲಿಸಿದರು. ವಿಪಕ್ಷ ನಾಯಕ ಆರ್‌.ಅಶೋಕ್‌, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌ ಜತೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಕೆ.ಭಾಂಡಗೆ ನಾಮಪತ್ರ ಸಲ್ಲಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆಗೆ ಆಗಮಿಸುವುದರೊಂದಿಗೆ ಅಚ್ಚರಿ ಸೃಷ್ಟಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜತೆಗಿದ್ದರು.

ಒಟ್ಟು ನಾಲ್ಕು ಸ್ಥಾನಗಳಿಗಾಗಿ ಏಳು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಈಗ ಮೂರು ಪಕ್ಷಗಳಿಗೂ ಅಡ್ಡಮತದಾನದ ಆತಂಕ ಪ್ರಾರಂಭವಾಗಿದೆ. ಬಿಜೆಪಿಯಲ್ಲಿ ಇಬ್ಬರು ಹಾಗೂ ಜೆಡಿಎಸ್‌ನಲ್ಲಿ ನಾಲ್ವರು ಈಗಾಗಲೇ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಇವರನ್ನು ಸೆಳೆಯುವುದಕ್ಕೆ ಕಾಂಗ್ರೆಸ್‌ ಪ್ರಯತ್ನಿಸುವ ಸಾಧ್ಯತೆ ಇದೆ. ಆ ಮೂಲಕ ಎನ್‌ಡಿಎ ಮೈತ್ರಿ ಕೂಟಕ್ಕೆ ಮುಖಭಂಗ ಮಾಡುವ ಸಾಹಸಕ್ಕೆ ಕಾಂಗ್ರೆಸ್‌ ಕೈ ಹಾಕಬಹುದು ಎಂಬ ಮಾತು ಕೇಳಿ ಬಂದಿದೆ. ಆದರೆ ಯಾವ ಲೆಕ್ಕಾಚಾರದ ಆಧಾರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿದೆ ಎಂಬುದು ಇನ್ನೂ ಕುತೂಹಲವಾಗಿದ್ದು, ಐದನೇ ಅಭ್ಯರ್ಥಿ ಗೆಲ್ಲುತ್ತಾರೆಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿರುವುದು ಕಾಂಗ್ರೆಸ್‌ನಲ್ಲಿ “ಕಪ್ಪು ಬೆಕ್ಕು’ ಇರುವ ಅನುಮಾನವನ್ನು ಹುಟ್ಟು ಹಾಕಿದೆ.

ಇಂದು ಸುಳಿವು
ಬಿಜೆಪಿ ಮೂಲಗಳ ಪ್ರಕಾರ ಕುಪೇಂದ್ರ ರೆಡ್ಡಿಯವರನ್ನು ಹೇಗೆ ಗೆಲುವಿನ ದಡ ಹತ್ತಿಸುತ್ತಾರೆಂಬ ಲೆಕ್ಕಾಚಾರದ ಬಗ್ಗೆ ಶುಕ್ರವಾರ ಸುಳಿವು ಸಿಗಲಿದೆ. ಇದು ಸಾಂಕೇತಿಕ ಸ್ಪರ್ಧೆಯಂತೂ ಅಲ್ಲ. ಮೂಲಗಳ ಪ್ರಕಾರ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಪಕ್ಷೇತರರ ಮತಗಳನ್ನು ಕುಪೇಂದ್ರ ರೆಡ್ಡಿ ಮೊದಲು ಅಲುಗಾಡಿಸಬಹುದು ಎನ್ನಲಾಗುತ್ತಿದೆ.

Advertisement

ಆತ್ಮಸಾಕ್ಷಿಯ ಮತ
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಗೆ ಇರುವ ಹೆಚ್ಚುವರಿ ಮತವನ್ನ ಎನ್‌ಡಿಎ ಅಭ್ಯರ್ಥಿಗೆ ಹಾಕಬೇಕೆಂದು ವರಿಷ್ಠರು ತೀರ್ಮಾನಿಸಿದ್ದಾರೆ. ನಮ್ಮ ಮತ ನಷ್ಟ ಆಗಬಾರದೆಂಬುದು ಒಂದು ಭಾಗವಾದರೆ, ರಾಜ್ಯ ರಾಜಕೀಯ ವಿದ್ಯಮಾನ ಇನ್ನೊಂದು ಭಾಗ. ಆತ್ಮಸಾಕ್ಷಿಯ ಮತಗಳ ಮೂಲಕ ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

-ಅವರ ಪ್ರಯತ್ನ ಅವರು ಮಾಡಲಿ, ನಮ್ಮ ಒಗ್ಗಟ್ಟಿನ ರಾಜಕಾರಣ ಏನು ಎಂಬುದನ್ನು 27ನೇ ತಾರೀಕಿ
ನಂದು ನೋಡಿ. ರಾಜ್ಯದಲ್ಲಿ ಜೆಡಿಎಸ್‌ ವಿಫ‌ಲ ಆಗಿರುವುದಕ್ಕೆ ಬಿಜೆಪಿ ಜತೆ ಹೋಗಿ ನಂಟಸ್ತಿಕೆ ಮಾಡಿಕೊಂಡಿದೆ. ನಮಗೆ ಎಲ್ಲ ಪಕ್ಷದಲ್ಲಿ ಸ್ನೇಹಿತರಿದ್ದಾರೆ. ಅಲ್ಲಿರುವವರು ಅವರ ಆತ್ಮಸಾಕ್ಷಿಯ ಮತ ಹಾಕುತ್ತಾರೆಂಬ ಭರವಸೆ ಇದೆ. ನಮ್ಮ ಪಕ್ಷಕ್ಕೆ ಅಜಯ್‌ ಮಾಕೆನ್‌ ಆಧಾರ ಸ್ತಂಭ. ಅದಕ್ಕಾಗಿ ನಾವು ಆಯ್ಕೆ ಮಾಡಿದ್ದೇವೆ.
ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ಒಂದು ಮತವೂ ವರ್ಗಾವಣೆಯಾಗಲ್ಲ
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಏಜೆಂಟ್‌ಗೆ ತೋರಿಸಿ ಮತ ಹಾಕಬೇಕು. ಒಂದು ಮತವೂ ವರ್ಗಾವಣೆಯಾಗುವುದಿಲ್ಲ. ಪ್ರಾಶಸ್ತ್ಯದ ಮತಗಳು ನಮಗೆ ಹೆಚ್ಚು ಸಿಗಲಿದೆ. ಗೆಲ್ಲುವ ಸಮಯದಲ್ಲಿ ಕುಪೇಂದ್ರ ರೆಡ್ಡಿಗೆ ಜೆಡಿಎಸ್‌ ಟಿಕೆಟ್‌ ಕೊಡಬೇಕಿತ್ತು. ಸೋಲುತ್ತಾರೆಂಬ ಕಾರಣಕ್ಕೆ ಈಗ ಕೊಟ್ಟಿದ್ದಾರೆ.
-ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

ನಮ್ಮ ಕೇಂದ್ರದ ವರಿಷ್ಠರು ಹಾಗೂ ಜೆಡಿಎಸ್‌ನ ಹಿರಿಯ ನಾಯಕರು ಚರ್ಚೆ ನಡೆಸಿಯೇ ಐದನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ತೀರ್ಮಾನ ಮಾಡಿದ್ದಾರೆ. ಎರಡು ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ. ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನು ನಡೆಸುತ್ತೇವೆ.
-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

ರಾಷ್ಟ್ರೀಯ ನಾಯಕರು ನಾಮಪತ್ರ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸ್ಪರ್ಧಿಸಿದ್ದೇನೆ. ನಾಮಪತ್ರ ಸಲ್ಲಿಸುವಂತೆ ರಾತ್ರಿ ಸೂಚನೆ ಬಂತು. ಗೆಲ್ಲುವ ವಿಶ್ವಾಸವಿದೆ ನೋಡೋಣ.  –ಕುಪೇಂದ್ರ ರೆಡ್ಡಿ, ಅಭ್ಯರ್ಥಿ

 

Advertisement

Udayavani is now on Telegram. Click here to join our channel and stay updated with the latest news.

Next