ಯಲ್ಲಾಪುರ: ”ನನಗೆ ಆರೋಗ್ಯದ ತೊಂದರೆಯಿಂದ ರಾಜ್ಯಸಭಾ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ,ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೆ”ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಬುಧವಾರ ಕಾರಣ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆ ಪ್ರವಾಸಿಗ್ರಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಪಲಾಯನ ಗೈದಿದ್ದೇನೆ,ತಪ್ಪಿಸಿಕೊಂಡು ಹೋಗಿದ್ದೇನೆ ಎಂದೆಲ್ಲ ಮಾದ್ಯಮದಲ್ಲಿ ಪ್ರಕಟವಾಗಿದೆ.ಆದರೆ ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದರು.
ಜೆಡಿ ಎಸ್- ಬಿಜೆಪಿ ಸಂಬಂಧದ ಕಾರಣಕ್ಕಾಗಿ ನಾನು ಹೋಗಿಲ್ಲ.ಆರೋಗ್ಯ ಸರಿ ಇರಲಿಲ್ಲ ಎಂಬ ದ್ವಂದ್ವದ ಹೇಳಿಕೆಯನ್ನೂ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.ವಿಪ್ ಉಲ್ಲಂಘನೆ ಬಗ್ಗೆ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಂಡರೂ ಎದುರಿಸುತ್ತೇನೆ. ಜಿಲ್ಲೆ ಮತ್ತು ತಾಲೂಕಿನ ಬಿಜೆಪಿ ನಡೆಯ ಬಗ್ಗೆ ಚುನಾವಣೆ ಆದಾಗಿನಿಂದಲೂ ಬೇಸರ ವ್ಯಕ್ತಪಡಿಸುತ್ತಲೇ ಬಂದಿದ್ದೇನೆ.ಅಮಾನತು ಮಾಡಿ,ಅವರಿಗೇ ಮತ್ತೆ ಹುದ್ದೆ ನೀಡಿದ್ದಾರೆ.ಪದಾಧಿಕಾರಿಗಳೇ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದ ಬಗ್ಗೆ ಬೇಸರ ಇದೆ ಎಂದು ಪುನರುಚ್ಚಿಸಿದ ಅವರು ನನಗೆ ಪಲಾಯನ ಮಾಡಬೇಕಾದ ಅವಶ್ಯಕತೆಯೂ ಇಲ್ಲ.ಊಹಾಪೋಹಗಳಿಗೆ ಉತ್ತರ ಕೊಡಬೇಕಾದ ಅವಶ್ಯಕತೆಯೂ ಇಲ್ಲ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜತೆಗೆ ಹೊದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಕಾಂಗ್ರೆಸ್ ಗೆಲುವು ನಿಶ್ಚಿತ ಇದ್ದಾಗ ನಮ್ಮ ಅವಶ್ಯಕತೆ ಅವರಿಗಿಲ್ಲ.ರಾತ್ರಿ ಕದ್ದುಮುಚ್ಚಿ ಹೋಗ ಬೇಕಾದ ಅಗತ್ಯತೆಯೂ ಇಲ್ಲ.ಅಭಿವೃದ್ಧಿ ವಿಚಾರಕ್ಕೆ ಮಾತ್ರ ಹಿಂದೆ ಭೇಟಿ ಆಗಿದ್ದೆ ಅಷ್ಟೇ ಎಂದರು.ಆರೋಗ್ಯ ಸರಿ ಇರಲಿಲ್ಲ.ಬೆಂಗಳೂರಿನಲ್ಲೇ ಇದ್ದೆ.ನಾನು ಬಿಜೆಪಿ ಯಲ್ಲೇ ಇದ್ದೇನೆ.ಯಾರಿಗೂ ಯಾವುದೇ ಸಂಶಯ ಬೇಡ.ಆಸ್ಪತ್ರೆ ವಿಚಾರ ಪ್ರಚಾರ ಮಾಡಲಿಕ್ಕಾಗುವುದಿಲ್ಲ.ಕ್ಷೇತ್ರದ ಅಭಿವೃದ್ಧಿ ಗೆ ಕಿಂಚಿತ್ತೂ ತೊಂದರೆ ಆಗಲು ಬಿಡುವುದಿಲ್ಲ ಎಂದರು.
ಇದೆ ವೇಳೆ ಸಿದ್ದಿ ಯುವಕನ ಕೊಲೆ ಘಟನೆ ಶೋಭೆ ತರದು.ತಪ್ಪಿತಸ್ಥರಿಗೆ ಕ್ರಮ ಆಗಬೇಕು. ಆರೋಪಿಗಳ ರಕ್ಷಣೆ ಮಾಡಬೇಕಾದ ಹಂಗೂ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.