ಬೆಂಗಳೂರು: ಈ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್‌ಗಾಗಿ ಈಗ ಕೈಪಡೆಯಲ್ಲಿ ಒಳಗೊಳಗೇ ಲಾಬಿ ಆರಂಭವಾಗಿದೆ.
ರಾಜ್ಯಸಭಾ ಸದಸ್ಯರಾಗಿರುವ ಜಿ.ಸಿ.ಚಂದ್ರಶೇಖರ್, ಎಲ್. ಹನುಮಂತಯ್ಯ ಹಾಗೂ ನಸೀರ್ ಹುಸೇನ್ ಅವರು ಈ ಎಪ್ರಿಲ್‌ನಲ್ಲಿ ನಿವೃತ್ತಿಯಾಗಲಿದ್ದು, ಈ ಮೂರು ಸ್ಥಾನಗಳ ಮೇಲೆ ಹಲವರು ಕಣ್ಣು ಹಾಕಿದ್ದಾರೆ. ಜತೆಗೆ ನಿವೃತ್ತಿಯಾಗಲಿರುವ ಈ ಮೂವರೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಹಲವು ಬಗೆಯ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕೆಂಬ ಲಾಬಿ ಜೋರಾಗಿದೆ.
ನಿವೃತ್ತಿಯಾಗಲಿರುವ ಸದಸ್ಯರಲ್ಲಿ ಒಬ್ಬರು ಒಕ್ಕಲಿಗ, ಮತ್ತೂಬ್ಬರು ದಲಿತ (ಎಡಗೈ) ಹಾಗೂ ಮೂರನೆಯವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಇದೇ ಸಮುದಾಯಕ್ಕೆ ಮತ್ತೆ ಅವಕಾಶ ಕೊಡಬೇಕೆಂಬ ಕೂಗು ಇದ್ದರೆ ಮತ್ತೂಂದೆಡೆ ಈಗಾಗಲೇ ಈ ಸಮುದಾಯಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಬೇರೆ ಸಮುದಾಯಗಳಿಗೂ ಪ್ರಾತಿನಿಧ್ಯ ಕೊಡಬೇಕು ಎಂಬ ಬೇಡಿಕೆ ಇದೆ. ಈ ಮಧ್ಯೆ ಮಹಿಳೆಯರಿಗೆ ಯಾಕೆ ಅವಕಾಶ ಕೊಡುತ್ತಿಲ್ಲ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹಾಗೂ ಎನ್‌ಆರ್‌ಐ ಘಟಕದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ಹೆಸರು ಮುಂಚೂಣಿಗೆ ಬಂದಿದೆ. ಕಾಂಗ್ರೆಸ್ ಸೇರಿದ ಬಳಿಕ ಶಂಕರ್ ಅವರಿಗೆ ಇದುವರೆಗೆ ಯಾವುದೇ ಅಧಿಕಾರ ದೊರೆತಿಲ್ಲ. ಕೆಪಿಸಿಸಿಯಲ್ಲಿ ಯಾರೇ ಅಧ್ಯಕ್ಷರಾಗಿದ್ದರೂ ಅವರು ಮಾರ್ಗದರ್ಶಿ, ಚಿಂತಕರ ಚಾವಡಿಯಲ್ಲಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಸಮಾಜದಲ್ಲಿ ಪ್ರಗತಿಪರ ಚಿಂತಕ, ವಿಭಿನ್ನ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಸಲ ಅವರಿಗೆ ಅವಕಾಶ ಕೊಡಬೇಕೆಂದು ಪಕ್ಷದೊಳಗಿನ ಒಂದು ಗುಂಪು ಶಂಕರ್ ಪರ ಲಾಬಿ ಮಾಡತೊಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶಂಕರ್ ಪರ ಒಲವಿದ್ದರೂ ಹೈಕಮಾಂಡ್ ಚಿತ್ತ ಯಾರ ಕಡೆ ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.
ಹೀಗಿದ್ದರೂ ಮತ್ತೆ ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ ಜಿ.ಸಿ.ಚಂದ್ರಶೇಖರ್ ಹಾಗೂ ಹನುಮಂತಯ್ಯ.