Advertisement

ರಾಹುಲ್‌ ಹೇಳಿಕೆ ಕಲಾಪ ಆಪೋಶನ; ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ

12:34 AM Mar 14, 2023 | Team Udayavani |

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಎರಡನೇ ಭಾಗದ ಮೊದಲ ದಿನವಾಗಿರುವ ಸೋಮವಾರ ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿದೆ. ಇತ್ತೀಚೆಗೆ ಲಂಡನ್‌ನಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಮಾಡಿದ್ದ ಭಾಷಣದ ವಿರುದ್ಧ 2 ಸದನಗಳಲ್ಲಿ ಬಿಜೆಪಿ ಹಾಗೂ ಪ್ರತಿಪಕ್ಷಗಳ ಸದಸ್ಯರು ಪರ ವಿರೋಧ ವಾಗ್ವಾದ ನಡೆಸಿದ್ದರಿಂದ ಕಲಾಪ ನಡೆಸಲು ಅನನುಕೂಲವಾಗಿತ್ತು. ದೇಶದ ವಿರುದ್ಧ ವಯನಾಡ್‌ ಸಂಸದ ಮಾತನಾಡಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿದೆ. ಲೋಕಸಭೆಯಲ್ಲಿ ಕಲಾಪ ಶುರುವಾಗುತ್ತಲೇ ಸಂಸದ ರಾಹುಲ್‌ ಮಾತುಗಳನ್ನು ವಿರೋಧಿಸಿ ಆಡಳಿತಾರೂಢ ಬಿಜೆಪಿ ಸದಸ್ಯರು ಕೋಲಾಹಲ ಎಬ್ಬಿಸಿದರು. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಸದಸ್ಯರು ಅದಾನಿ ಗ್ರೂಪ್‌ ವಿರುದ್ಧ ಹಿಂಡನ್‌ಬರ್ಗ್‌ ರೀಸರ್ಚ್‌ ನೀಡಿದ ವರದಿ ವಿರುದ್ಧ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಒತ್ತಾಯಿಸಿದರು.

ಕ್ಷಮೆಗೆ ಒತ್ತಾಯ: ಸದನದಲ್ಲಿ ಅಸುನೀಗಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ತಮ್ಮ ಇತ್ತೀಚಿನ ಲಂಡನ್‌ ಪ್ರವಾಸದ ವೇಳೆ, ದೇಶಕ್ಕೆ ಅಗೌರವ ತರುವ ರೀತಿ ಮಾತನಾಡಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ನಾಶವಾಗಿದೆ ಎಂದು ದೂರಿದ್ದರು. ಅದನ್ನು ಕಾಪಾಡುವ ನಿಟ್ಟಿನಲ್ಲಿ ವಿದೇಶಿ ಸರ್ಕಾರಗಳು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದು ನಾಚಿಕೆಗೇಡು. ಈ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಸ್ಪೀಕರ್‌ ಅವರು ರಾಹುಲ್‌ ಗಾಂಧಿ ಅವರು ಮಾಡಿದ ಭಾಷಣ ಖಂಡಿಸಬೇಕು ಎಂದು ರಕ್ಷಣಾ ಸಚಿವರು ಆಗ್ರಹಪಡಿಸಿದರು. ಆ ಸಂದರ್ಭದಲ್ಲಿ ಎನ್‌ಡಿಎ ಸದಸ್ಯರು ರಾಹುಲ್‌ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಲೋಕಸಭೆಯ ಮುಂಗಟ್ಟೆಗೆ ಬಂದು ಗದ್ದಲ ಎಬ್ಬಿಸಿದರು.

ಪ್ರಜಾಪ್ರಭುತ್ವ ಎಲ್ಲಿತ್ತು?
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಕಾಂಗ್ರೆಸ್‌ ಅವಧಿಯಲ್ಲಿ ಪ್ರಜಾಪ್ರಭುತ್ವ ಎಲ್ಲಿತ್ತು ಎಂದು ಪ್ರಶ್ನಿಸಿದರು. ಅವರ ಆಡಳಿತದ ಅವಧಿಯಲ್ಲಿಯೇ ತುರ್ತು ಪರಿಸ್ಥಿತಿ ಜಾರಿಯಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಂಪುಟವೇ ಅಂಗೀಕರಿಸಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ರಾಹುಲ್‌ ಗಾಂಧಿಯವರೇ ಹರಿದು ಎಸೆದಿದ್ದರು. ಪ್ರಧಾನಮಂತ್ರಿಗಳೇ ಅಸಹಾಯಕ ವ್ಯವಸ್ಥೆಯಲ್ಲಿ ಇದ್ದಾಗ ಪ್ರಜಾಪ್ರಭುತ್ಲ ಎಲ್ಲಿತ್ತು ಎಂದು ಸದನದಲ್ಲಿ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

Advertisement

ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ವಿದೇಶಿ ರಾಷ್ಟ್ರಗಳು ಬರಬೇಕು ಎಂದು ರಾಹುಲ್‌ ಒತ್ತಾಯಿಸಿದ್ದನ್ನು ಖಂಡಿಸುವುದಾಗಿ ಸಚಿವ ಜೋಶಿ ಹೇಳಿದ್ದಾರೆ. ಗದ್ದಲ ಮಿತಿ ಮೀರಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಸ್ಪೀಕರ್‌ ಮಂಗಳವಾರಕ್ಕೆ ಮುಂದೂಡಿದರು.

ರಾಜ್ಯಸಭೆಯಲ್ಲಿ: ರಾಜ್ಯಸಭೆಯಲ್ಲಿ ಕೂಡ ರಾಹುಲ್‌ ಭಾಷಣ ಕುರಿತಾಗಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರವೇ ನಡೆಯಿತು. ಒಂದು ಹಂತದಲ್ಲಿ ಮಧ್ಯಾಹ್ನ 12 ಗಂಟೆಗೆ ವರೆಗೆ ಕಲಾಪ ಮುಂದೂಡಿಕೆ ಮಾಡಲಾಗಿತ್ತು. ಕೇಂದ್ರ ವಾಣಿಜ್ಯ ಸಚಿವ ಮತ್ತು ಸದನ ನಾಯಕ ಪೀಯೂಷ್‌ ಗೋಯಲ್‌ ರಾಹುಲ್‌ ಮಾಡಿದ ಭಾಷಣಕ್ಕೆ ಆಕ್ಷೇಪ ಮಾಡಿದರು. ಅದಕ್ಕೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ಮಾಡಿದಾಗ ಕೋಲಾಹಲ ಉಂಟಾಯಿತು. ಸಭಾಪತಿ ಮತ್ತು ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಮಂಗಳವಾರಕ್ಕೆ ಕಲಾಪ ಮುಂದೂಡಿದರು.

ನೀವು ಚೀನದಲ್ಲಿ ಮಾತಾಡಿದ್ದು ಮರೆತಿರಾ?
-ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿರೋಧಪಕ್ಷಗಳಿಂದ ಪ್ರತಿಭಟನಾ ಮೆರವಣಿಗೆ
ಪ್ರಧಾನಿ ನರೇಂದ್ರ ಮೋದಿಯವರು ಕೂಡ ಚೀನ, ದಕ್ಷಿಣ, ಕೊರಿಯಾ, ಕೆನಡಾ, ಯುಎಇ ಪ್ರವಾಸದ ವೇಳೆ ದೇಶದ ವರ್ಚಸ್ಸು ಕುಗ್ಗಿಸುವಂತೆ ಮಾತಾಡಿದ್ದರು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಕಾಂಗ್ರೆಸ್‌, ಬಿಆರ್‌ಎಸ್‌, ಆಪ್‌ ಜತೆಗೆ ಹಲವು ಪ್ರತಿಪಕ್ಷಗಳು ನವದೆಹಲಿಯ ವಿಜಯ ಚೌಕ್‌ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು “ಈ ದೇಶದಲ್ಲಿ ಜನಿಸಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿಕೊಂಡದ್ದು ನೆನಪು ಇದೆಯೇ? ಈಗ ನೀವು ಈ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ ಎಂದಾಗ ನಿಮಗೆ ಹೆಮ್ಮೆಯಾಗುತ್ತಿದೆ ಅಲ್ಲವೇ’? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಕಾನೂನು ವ್ಯವಸ್ಥೆಯೇ ಇಲ್ಲ. ನಿರಂಕುಶಾಧಿಕಾರದಿಂದಲೇ ವ್ಯವಸ್ಥೆ ನಡೆಯುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಬಿಜೆಪಿಯವರು ದೇಶದಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಇದರ ಹೊರತಾಗಿಯೂ ಅವರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ನಾಟಕದ ಮಾತುಗಳನ್ನಾಡುತ್ತಿದ್ದಾರೆ. ಮೋದಿ ಅವರ ಆಡಳಿತದಲ್ಲಿ ಸಂವಿಧಾನಕ್ಕೆ ಬೆಲೆ ಇಲ್ಲವೆಂದು ಟೀಕಿಸಿದ್ದಾರೆ.

ಪ್ರತಿಪಕ್ಷಗಳ ಸದಸ್ಯರು ಮಾತನಾಡುವ ವೇಳೆ ಸದನದಲ್ಲಿ ಮೈಕ್‌ಗಳ ಸ್ವಿಚ್‌ ಆಫ್ ಮಾಡಲಾಗುತ್ತದೆ ಎಂದು ದೂರಿದ್ದಾರೆ. ಇದಕ್ಕಿಂತ ಮೊದಲು ಕಾಂಗ್ರೆಸ್‌ ನೇತೃತ್ವದಲ್ಲಿ 16 ಪ್ರತಿಪಕ್ಷಗಳ ನಾಯಕರ ಸಭೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next