Advertisement

ದೇಶದಲ್ಲಿ ರಾಹುಲ್, ಕಲಬುರಗಿಯಲ್ಲಿ ಪ್ರಿಯಾಂಕ್ ಬಿಜೆಪಿ ಗೆಲ್ಲಿಸುತ್ತಾರೆ: ರಾಜುಗೌಡ

04:50 PM Feb 24, 2024 | |

ಕಲಬುರಗಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ದಿನಕ್ಕೊಂದು ಅಸಂಬದ್ಧ ಹೇಳಿಕೆಗಳನ್ನು ನೀಡುವ ಮುಖಾಂತರ ದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಿದರೆ ಈತ್ತ ಸಚಿವ ಪ್ರಿಯಾಂಕ್ ಖರ್ಗೆ ಅವರು ತನ್ನ ಇತಿ‌ ಮಿತಿ ಮರೆತ ನಡವಳಿಕೆಯಿಂದ ಕಲಬುರಗಿಯಲ್ಲಿ ಬಿಜೆಪಿ ಗೆಲ್ಲಿಸಲಿದ್ದಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿ, ಮಾಜಿ ಸಚಿವ ರಾಜುಗೌಡ ವ್ಯಂಗ್ಯವಾಡಿದರು.‌

Advertisement

ಶನಿವಾರ ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಕ್ಷೇತ್ರದ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕ್ಷುಲ್ಲಕವಾಗಿ ಮಾತನಾಡುವ ಮುಖಾಂತರ ದೇಶದಲ್ಲಿ ಬಿಜೆಪಿ 400 ಸೀಟು ಪಡೆಯುವತ್ತ ನಿಲ್ಲಿಸಲಿದ್ದಾರೆ. ಇದಕ್ಕೆ ಇವರ ಅಸಂಬದ್ದ ಮಾತುಗಳೇ ಸಾಕ್ಷಿಯಾಗಿವೆ. ಅದೇ ತೆರನಾಗಿ ಎಲ್ಲದಕ್ಕೂ ಅಡ್ಡ ಬರುವ ಪ್ರಿಯಾಂಕ್ ಖರ್ಗೆ ಅವರ ನಡೆ- ನುಡಿಯಿಂದ ಕಲಬುರಗಿಯಲ್ಲಿ ಬಿಜೆಪಿ ಗೆಲ್ಲಿಸಲಿದೆ ಎಂದರು.‌

ಎಲ್ಲರನ್ನು ಟೀಕೆ ಮಾಡುವುದೇ ಕೆಲಸ
ಸಚಿವ ಪ್ರಿಯಾಂಕ್ ಖರ್ಗೆ ಸಚಿವರಾಗಿ ತಮ್ಮ ಖಾತೆ ನಿಭಾಯಿಸುವುದು ಬಿಟ್ಟು ಎಲ್ಲದಕ್ಕೂ ಮೂಗು ತೂರಿಸುತ್ತಾರೆ. ಮೋದಿ- ಬಿಜೆಪಿ ಬಗ್ಗೆ ಮಾತಾಡಿದರೆ ಆಗದು ಎಂಬುದನ್ನು ಮತದಾರರು ಮತ್ತೆ ತೋರಿಸುತ್ತಾರೆಂದು ರಾಜುಗೌಡ ವಾಗ್ದಾಳಿ ನಡೆಸಿದರು.

ಬಿಜೆಪಿ ಕಾರ್ಯ ಕರ್ತರಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದ ರಾಜುಗೌಡ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದ ಹಲವು ರಾಷ್ಟ್ರಗಳೇ ಹೆದರುವಾಗ ನಾವು ಅಂಜುವ ಪ್ರಮೇಯೇ ಇಲ್ಲ ಎಂದರು.

ಜಿಲ್ಲೆಯ ಸೇಡಂ ಕ್ಷೇತ್ರದಿಂದ ಡಾ. ಶರಣಪ್ರಕಾಶ ಪಾಟೀಲ್ ನಾಲ್ಕು ಸಲ ಶಾಸಕರಾಗಿ ಹಿರಿಯ ಸಚಿವರಾಗಿದ್ದರೂ ಬೇರೆ ( ರಾಯಚೂರು) ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಕ್ಕೆ ಆ ಸಮಾಜದವರು ಸುಮ್ಮನೇ ಕೂರುವುದಿಲ್ಲ. ಲೋಕಸಭೆ ಚುನಾವಣೆ ತಕ್ಕ ಉತ್ತರ ನೀಡ್ತಾರೆ ಎಂದು ರಾಜುಗೌಡ ಹೇಳಿದರು.

Advertisement

ಬಿಜೆಪಿ ವಿಭಾಗೀಯ ಪ್ರಭಾರಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮಾತನಾಡಿ, ಬಿಜೆಪಿ ಅಭ್ಯರ್ಥಿ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಮಲದ ಹೂ ಅಭ್ಯರ್ಥಿ ಎಂದು ತಿಳಿದುಕೊಳ್ಳಬೇಕು. ಇಂದಿನಿಂದ ಚುನಾವಣೆ ಯಲ್ಲಿ ಗೆಲ್ಲುವವರೆಗೂ ವಿಶ್ರಮಿಸುವುದಿಲ್ಲ‌ ಎಂದು ಎಲ್ಲರೂ ಶಪಥ ಮಾಡಬೇಕೆಂದರು.

ಸಂಸದ ಡಾ. ಉಮೇಶ ಜಾಧವ್ ಮಾತನಾಡಿ, ಚುನಾವಣೆಗೆ ಬಹಳ ಸಮಯವಿಲ್ಲ. 51 ದಿನಗಳಲ್ಲಿ ಸಂಪೂರ್ಣ ಚುನಾವಣೆ ಮುಗಿಯುತ್ತದೆ. ನಿನ್ನೆ ನಡೆದ ಸಮೀಕ್ಷೆ ಪ್ರಕಾರ ಬಿಜೆಪಿ 375 ಕ್ಕೂ ಹೆಚ್ಚು ಎಂಬುದಾಗಿ ವರದಿ ಬಂದಿದೆ. ಏನೇ ಆದರೂ ನಾವು ಮೈ ಮರೆಯುವಂತಿಲ್ಲ. ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲೋದು ನಮ್ಮೆಲ್ಲರಿಗೂ ಪ್ರತಿಷ್ಠೆ ಪ್ರಶ್ನೆಯಾಗಿದೆ. ಮೆಗಾ ಟೆಕ್ಸಟೈಲ್ ಪಾರ್ಕ್ ದಿಂದ ಲಕ್ಷಾಂತರ ಉದ್ಯೋಗಾವಕಾಶ, ಭಾರತ ಮಾಲಾ ಹೆದ್ದಾರಿ ಕಲಬುರಗಿ ‌ಮೂಲಕ ಹಾದು ಹೋಗುತ್ತಿರುವುದು ಸೇರಿ ಇತರೆ ಸಾಧನೆಗಳನ್ನು ಹಾಗೂ ಕೇಂದ್ರದ ಸಾಧನೆಗಳನ್ನು ಮನೆ- ಮನೆಗೆ ಮುಟ್ಟಿಸಿ ಮತ ಕೇಳೋಣ. ಏನೇ ಸಣ್ಣ ಪುಟ್ಟ ವ್ಯತ್ಯಾಸಗಳಾದರೂ ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತೊಮ್ಮೆ ಕಲಬುರಗಿಯಲ್ಲಿ ಇತಿಹಾಸ ನಿರ್ಮಿಸೋಣ ಎಂದು ಡಾ. ಜಾಧವ್ ಹೇಳಿದರು.

ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಹಾಗೂ ನಗರಾಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಈ ಸಲ ಕಾಂಗ್ರೆಸ್ ನಿಂದ ಯಾರೇ ಅಭ್ಯರ್ಥಿಯಾದರೂ ಕಲಬುರಗಿಯಲ್ಲಿ ಬಿಜೆಪಿ 1.50 ಲಕ್ಷ ಅಧಿಕ ಮತಗಳಿಂದ ಗೆಲ್ಲಿಸುವುದು ನಮ್ಮೆಲ್ಲರ ಕಾರ್ಯವಾಗಿದೆ ಎಂದರು.‌

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮುಖಂಡರಾದ ಅರುಣ ಬಿನ್ನಾಡೆ, ಅವ್ವಣ್ಣ ಮ್ಯಾಕೇರಿ, ಶೋಭಾ ಬಾಣಿ, ಅಂಬಾರಾಯ ಅಷ್ಟಗಿ ಸೇರಿದಂತೆ ಮುಂತಾದವರಿದ್ದರು.

ಇದನ್ನೂ ಓದಿ: Police Constable ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ರದ್ದುಗೊಳಿಸಿದ ಸಿಎಂ ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next