ಮುಂಬಯಿ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರ ಪ್ರಧಾನಿ ಮೋದಿ ವಿರೋಧಿ ಅಭಿಯಾನ ರ್ಯಾಲಿಗಳಿಂದ ನಗರದಲ್ಲಿ ನೆಲೆಸಿರುವ ಉತ್ತರ ಭಾರತೀಯ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಲಾಗುತ್ತಿದೆ.
ಉತ್ತರ ಭಾರತೀಯರ ವಿರುದ್ಧ ಸದಾ ಒಂದಲ್ಲ ಒಂದು ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದಲ್ಲದೆ, ಉತ್ತರ ಭಾರತೀಯರ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ನಡೆಸುತ್ತಿರುವ ಹಲ್ಲೆಗಳಿಗೆ ಸಂಬಂಧಿಸಿದಂತೆ ಎಂಎನ್‌ಎಸ್ ಪಕ್ಷದ ವಿರುದ್ಧ ಉತ್ತರ ಭಾರತೀಯರು ಈಗಾಗಲೇ ಅಷ್ಟೊಂದು ಒಲವನ್ನು ಹೊಂದಿಲ್ಲ ಎನ್ನಲಾಗುತ್ತಿದೆ.
ದೇಶದಲ್ಲೇ ಮೋದಿ ಅಲೆ ಇರುವುದರಿಂದ ರಾಜ್‌ಠಾಕ್ರೆಯವರ ಮೋದಿ ವಿರೋಧಿ ಅಭಿಯಾನದಿಂದ ಮರಾಠಿ ಮತದಾರರು ವಿಚಲಿತರಾದಂತೆ ಕಂಡು ಬರುತ್ತಿಲ್ಲ. ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಭಾರತೀಯರು ಕಾಂಗ್ರೆಸ್-ಎನ್‌ಸಿಪಿ ಪಕ್ಷಗಳಿಗೆ ಕರುಣೆ ತೋರದಿರುವುದು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ – ಶಿವಸೇನೆಯನ್ನೊಳಗೊಂಡ ಮಹಾಯುತಿಯ ಅಭ್ಯರ್ಥಿಗಳಿಗೆ ಸಹಕಾರಿಯಾಗಲಿದೆ.
ವಡಾಲ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತೀಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಕ್ಷೇತ್ರದಲ್ಲಿ ರಾಜ್ ಠಾಕ್ರೆಯವರ ರ್ಯಾಲಿಗಳಿಂದ ಕಾಂಗ್ರೆಸ್ ಅಭ್ಯರ್ಥಿಗೆ ಯಾವುದೇ ರೀತಿಯ ಲಾಭವಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಅದೇ ರೀತಿಯ ಧಾರಾವಿಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಉತ್ತರ ಭಾರತೀಯ ಮತದಾರರು ನೆಲೆಸಿದ್ದು, ಈ ಬಾರಿ ಎನ್‌ಸಿಪಿ-ಕಾಂಗ್ರೆಸ್‌ಗೆ ಬಹಳಷ್ಟು ಹಿನ್ನೆಡೆ ಲಭಿಸಲಿದೆ. ಘಾಟ್‌ಕೋಪರ್‌ನಲ್ಲಿ ಅಧಿಕ ಸಂಖ್ಯೆಯಲ್ಲಿ ಉತ್ತರ ಭಾರತೀಯರು ನೆಲೆಸಿದ್ದು, ಸೋಮವಾರ ನಡೆದ ಮತದಾನದಲ್ಲಿ ಬೆಳಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತೀಯರು ಮತದಾನ ಮಾಡಿದ್ದು, ಬಿಜೆಪಿಗೆ ವರದಾನವಾಗಲಿದೆ ಎನ್ನಲಾಗಿದೆ. ಅಸಲ್ಫಾದಲ್ಲೂ ಹೆಚ್ಚಿನ ಸಂಖ್ಯೆಯ ಉತ್ತರ ಭಾರತೀಯರು ನೆಲೆಸಿದ್ದು, ಒಟ್ಟಿನಲ್ಲಿ ರಾಜ್‌ಠಾಕ್ರೆ ರ್ಯಾಲಿಯಿಂದ ಇವರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ ಎಂದು ವರದಿಯಾಗಿದೆ.
ಅಭಿವೃದ್ಧಿಯ ಸಂಕೇತ
ಕಾಂಗ್ರೆಸ್-ಎನ್‌ಸಿಪಿಯ ಪ್ರಸಿದ್ಧ ನಾಯಕರು ಈಗಾಗಲೇ ಪಕ್ಷಗಳಿಗೆ ಗುಡ್‌ಬೈ ಹೇಳಿರುವುದು ಮಹಾಯುತಿಗೆ ಮತ್ತೂಂದು ಕೊಡುಗೆಯಾಗಿದೆ. ಮೋದಿ ಸರಕಾರದ ಮಹತ್ವದ ಯೋಜನೆಗಳು, ಅಭಿವೃದ್ಧಿಯ ಸಂಕೇತಗಳಿಂದ ನಗರದ ಮತದಾರರ ಒಲವು ಮೋದಿಯತ್ತ ವಾಲಿದೆ ಎನ್ನಬಹುದು. ದಕ್ಷಿಣ ಮುಂಬಯಿ ಕ್ಷೇತ್ರದಲ್ಲಿ ಜೋಪಡಿ ನಿವಾಸಿ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು, ಈ ಕ್ಷೇತ್ರದಲ್ಲಿ ಶಿವಸೇನೆಯ ರಾಹುಲ್ ಶೇವಾಲೆ ಮತ್ತು ಕಾಂಗ್ರೆಸ್ ಏಕನಾಥ್ ಗಾಯಕ್ವಾಡ್ ಕಣದಲ್ಲಿದ್ದಾರೆ.