ಬಾಲಿವುಡ್ ನಲ್ಲಿ ದಿಲೀಪ್ ಕುಮಾರ್, ಅಶೋಕ್ ಕುಮಾರ್, ರಾಜ್ ಕಪೂರ್ , ದೇವ್ ಆನಂದ್ ರಂತಹ ಘಟಾನುಘಟಿಗಳು ಇದ್ದ ಸಂದರ್ಭದಲ್ಲಿ ಯುವ ನಟ ಜತಿನ್ ಖನ್ನಾ ತನ್ನ ನಟನೆಯ ಪ್ರತಿಭೆ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲೇಬೇಕಾಗಿತ್ತು. ಅಲ್ಲದೇ ಖನ್ನಾ ಬೆಳ್ಳಿಪರದೆಗೆ ಕಾಲಿಟ್ಟಾಗ ದಿಲೀಪ್, ರಾಜ್ ಕಪೂರ್, ಅಶೋಕ್ ಕಪೂರ್, ಸಂಜೀವ್ ಕುಮಾರ್ ಜಮಾನಾ ಮುಗಿಯುತ್ತಾ ಬಂದಿತ್ತು. 1966ರಲ್ಲಿ “ಆಖರಿ ಖತ್” ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಜತಿನ್ ಖನ್ನಾ ರಾಜೇಶ್ ಖನ್ನಾ ಆಗಿ ಬದಲಾಗಿದ್ದರು!
ಹೌದು ಬಾಲಿವುಡ್ ನ ಮೊತ್ತ ಮೊದಲ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆ ರಾಜೇಶ್ ಖನ್ನಾ ಅವರದ್ದಾಗಿದೆ. ಆದರೆ ಅರೇ ಇದೇನು ಎಂದು ಹುಬ್ಬೇರಿಸಬೇಡಿ. ಯಾಕೆ ರಾಜೇಶ್ ಖನ್ನಾ ಸೂಪರ್ ಸ್ಟಾರ್? ದೇವ್ ಆನಂದ್, ಅಮಿತಾಬ್ ಬಚ್ಚನ್ ಅಥವಾ ಶಮ್ಮಿ ಕಪೂರ್ ಯಾಕೆ ಸೂಪರ್ ಸ್ಟಾರ್ ಅಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ.
ಸಿನಿಮಾ ನಟರಾಗಿ, ನಿರ್ಮಾಪಕರಾಗಿ ಹಾಗೂ ರಾಜಕಾರಣಿಯಾಗಿ ಛಾಪು ಮೂಡಿಸಿದ್ದ ರಾಜೇಶ್ ಖನ್ನಾ ಅವರು 1969ರಿಂದ 1971ರವರೆಗೆ ಒಂದರ ಮೇಲೊಂದರಂತೆ ಸತತ 15 ಸೂಪರ್ ಹಿಟ್ ಸಿನಿಮಾ ನೀಡಿದ್ದ ಖನ್ನಾಗೆ ಮೊದಲ ಸೂಪರ್ ಸ್ಟಾರ್ ಎಂಬ ಬಿರುದು ದೊರಕಿತ್ತು, ಆದರೆ 1970ರ ದಶಕದಲ್ಲಿ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಮಿತಾಬ್ ಬಚ್ಚನ್ ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜ್ ಮೂಲಕ ಬೆಳೆದು ಬಿಟ್ಟಿದ್ದರು. ಹೀಗಾಗಿ ಬಚ್ಚನ್ ಮಾಸ್ ಆಗಿ ಸೂಪರ್ ಸ್ಟಾರ್ ಎನ್ನಿಸಿಕೊಂಡಿದ್ದಾರೆ.
ರಾಜೇಶ್ ಖನ್ನಾ ಆ ಕಾಲಕ್ಕೆ ನಿರ್ದೇಶಕರು, ನಿರ್ಮಾಪಕರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದ್ದರು. ತಮ್ಮ ಹಣಕ್ಕೆ ಮೋಸ ಇಲ್ಲ ಎಂಬುದು ನಿರ್ಮಾಪಕರ ಪಾಲಿಗೆ ಗೋಚರಿಸಿತ್ತು. ಅಂದು ಯುವಪೀಳಿಗೆಯ ತರುಣಿಯರ ಮೇಲೆ ಅಪಾರ ಪ್ರಭಾವ ಬೀರಿದ್ದರಂತೆ. ಕ್ರೇಜಿ, ಪ್ರೀತಿಯ ಹುಚ್ಚಿನಲ್ಲಿ ರಕ್ತದಲ್ಲಿ ಖನ್ನಾಗೆ ಪತ್ರ ಬರೆಯುತ್ತಿದ್ದರಂತೆ!
1967ರಿಂದ 2013ರವರೆಗೆ ಹೀರೋ ಆಗಿ ಬರೋಬ್ಬರಿ 106 ಸಿನಿಮಾಗಳಲ್ಲಿ ನಟಿಸಿದ್ದರು. ಇದರಲ್ಲಿ 97 ಚಿತ್ರಗಳು ಬಿಡುಗಡೆಯಾಗಿದ್ದವು. ಕೇವಲ 22 ಸಿನಿಮಾಗಳಲ್ಲಿ ಮಾತ್ರ ಖನ್ನಾ ಮಲ್ಟಿ ಸ್ಟಾರ್ ಜತೆ ನಟಿಸಿದ್ದರು. ಒಟ್ಟು 168 ಸಿನಿಮಾ ಹಾಗೂ 12 ಕಿರು ಚಿತ್ರಗಳಲ್ಲಿ ನಟಿಸಿದ್ದರು. 1966ರಲ್ಲಿ ತೆರೆಕಂಡಿದ್ದ ಮೊದಲ ಚಿತ್ರ ಆಖ್ರಿ ಖತ್ ಭಾರತದಿಂದ ಆಸ್ಕರ್ ಗೆ ಎಂಟ್ರಿ ಪಡೆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಮೂರು ಬಾರಿ ಅತ್ಯುತ್ತಮ ನಟ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು. ಮರಣೋತ್ತರವಾಗಿ 2013ರಲ್ಲಿ ದೇಶದ ಪ್ರತಿಷ್ಠಿತ ಪದ್ಮಭೂಷಣ್ ಪ್ರಶಸ್ತಿ ನೀಡಲಾಗಿತ್ತು. 1970ರಿಂದ 1987ರವರೆಗೆ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟರಲ್ಲಿ ಖನ್ನಾ ಒಬ್ಬರಾಗಿದ್ದರು. ಬಳಿಕ 1980ರಿಂದ 1987ರವರೆಗೆ ಬಚ್ಚನ್ ಕೂಡಾ ಅತೀ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಚಿತ್ರರಂಗದಿಂದ ರಾಜಕೀಯಕ್ಕೆ ಪ್ರವೇಶ;
ನಟನೆಯ ಜೊತೆ, ಜೊತೆಗೆ 1984ರಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. 1991ರಲ್ಲಿ ನವದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಎದುರು ರಾಜೇಶ್ ಖನ್ನಾ ಅವರು ಸ್ಪರ್ಧಿಸಿ ಕೇವಲ 1589 ಮತಗಳ ಅಂತರದಿಂದ ಸೋತಿದ್ದರು. ಫಲಿತಾಂಶದಲ್ಲಿ ತನಗೆ ಮೋಸವಾಗಿದೆ ಎಂದು ಖನ್ನಾ ಈ ಸಂದರ್ಭದಲ್ಲಿ ಆರೋಪಿಸಿದ್ದರು. 1992ರಲ್ಲಿ ಎಲ್ ಕೆ ಅಡ್ವಾಣಿ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಖನ್ನಾ ಮತ್ತೆ ಸ್ಪರ್ಧಿಸಿದ್ದರು. ಅಂದು ಬಿಜೆಪಿ ಅಭ್ಯರ್ಥಿ, ನಟ ಶತ್ರುಘ್ನ ಸಿನ್ನಾ ವಿರುದ್ಧ ಖನ್ನಾ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದ ಖನ್ನಾ 1996ರವರೆಗೂ ಜನಪ್ರತಿನಿಧಿಯಾಗಿದ್ದರು. ನಂತರ ಅವರು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ತೋರಿಸಿರಲಿಲ್ಲವಾಗಿತ್ತು. ನಂತರ ಸಿನಿಮಾಗಳಲ್ಲಿ ಮತ್ತೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ 2012ರ ಪಂಜಾಬ್ ಚುನಾವಣೆವರೆಗೂ ಪಕ್ಷದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು.
ಪ್ರಿಯತಮೆಗೆ ಕೈಕೊಟ್ಟಿದ್ದ ಖನ್ನಾ, 17 ವರ್ಷ ಮಾತುಬಿಟ್ಟಿದ್ದ ಅಂಜು!
ಸೂಪರ್ ಸ್ಟಾರ್ ಆಗಿದ್ದ ರಾಜೇಶ್ ಖನ್ನಾಗೆ ಹಲವು ಪ್ರೇಯಸಿಯರಿದ್ದರು. ಇದರಲ್ಲಿ ನಟಿ, ಫ್ಯಾಶನ್ ಡಿಸೈನರ್ ಅಂಜು ಮಹೇಂದ್ರು ಒಬ್ಬರು. 1970ರ ದಶಕದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಗ ಖನ್ನಾಗೆ 26 ವರ್ಷ, ಅಂಜುಗೆ 13ವರ್ಷ! ಹೀಗೆ ಸುಮಾರು ಏಳು ವರ್ಷಗಳ ಕಾಲ ಇಬ್ಬರು ಅನ್ಯೋನ್ಯವಾಗಿದ್ದರು. ಖನ್ನಾಗೆ ಸ್ಟಾರ್ ಪಟ್ಟ ಸಿಕ್ಕ ನಂತರ ಬಲವಂತದಿಂದ ಅಂಜುವನ್ನು ನಟನೆಯನ್ನು ಬಿಡುವಂತೆ ಹೇಳಿದ್ದರು. ಏತನ್ಮಧ್ಯೆ ರಾಜೇಶ್ ಖನ್ನಾ ಬದುಕಿನಲ್ಲಿ ಪ್ರವೇಶಿಸಿದ್ದಾಕೆ ಡಿಂಪಲ್ ಕಪಾಡಿಯಾ!
ಖನ್ನಾ ಹಾಗೂ ಡಿಂಪಲ್ ನಡುವಿನ ಸ್ನೇಹ ಗಾಢವಾಗುತ್ತ ಹೋದ ಹಾಗೆ ಇಬ್ಬರು ಮದುವೆಯಾಗಲು ನಿಶ್ಚಯಿಸಿದ್ದರು. ಪೋಷಕರ ಜತೆ ಮಾತನಾಡಿ ವಿವಾಹಕ್ಕೆ ಸಮ್ಮತಿ ಪಡೆದಿದ್ದರು. ಆಗ ಖನ್ನಾಗೆ 31 ವರ್ಷ, ಡಿಂಪಲ್ ಗೆ 15 ವರ್ಷ! ಹೀಗೆ ಈ ಜೋಡಿ ಒಂದಾಗುತ್ತಿದ್ದಂತೆಯೇ ಅಂಜು ದೂರಾಗಿಬಿಟ್ಟಿದ್ದರು. ಅದು ಬರೋಬ್ಬರಿ 17 ವರ್ಷಗಳವರೆಗೆ ಇಬ್ಬರೂ ಮಾತು ಬಿಟ್ಟುಬಿಟ್ಟಿದ್ದರು.
ಖನ್ನಾ ಮತ್ತು ಡಿಂಪಲ್ ದಂಪತಿಗೆ ಟ್ವಿಂಕಲ್ ಹಾಗೂ ರಿಂಕೆ ಸೇರಿ ಇಬ್ಬರು ಪುತ್ರಿಯರು (ಟ್ವಿಂಕಲ್ ಅಕ್ಷಯ ಕುಮಾರ್ ಪತ್ನಿ). ಖನ್ನಾ ಒಂಥರಾ ಮಾಡರ್ನ್, ಸಾಂಪ್ರದಾಯಿಕವಲ್ಲದ ಅತಂತ್ರ ಮನಸ್ಥಿತಿ ಹೊಂದಿರುವುದಾಗಿ ಅಂಜು ಸಂದರ್ಶನವೊಂದರಲ್ಲಿ ದೂರಿದ್ದರು. ಅಂಜುಗೆ ಹೇಳಿದಂತೆ, ಖನ್ನಾ ಡಿಂಪಲ್ ಗೂ ಸಿನಿಮಾರಂಗ ಬಿಡುವಂತೆ ಸೂಚಿಸಿದ್ದರು. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಡಿಂಪಲ್ ನಟಿಸಲು ಮುಂದಾದಾಗ ಇಬ್ಬರ ನಡುವೆ ಮನಸ್ತಾಪ ಬಂದು ಖನ್ನಾ ಮತ್ತು ಡಿಂಪಲ್ 1984ರಲ್ಲಿ ಬೇರೆ, ಬೇರೆಯಾಗುತ್ತಾರೆ.
ನಂತರ ಖನ್ನಾ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದಾಗ ಅವರ ಬಾಳಿನಲ್ಲಿ ಟೀನಾ ಮುನಿಮ್ ಪ್ರವೇಶವಾಗುತ್ತದೆ. ಕಾಲೇಜು ದಿನಗಳಲ್ಲಿಯೇ ಖನ್ನಾ ಅವರನ್ನು ಟೀನಾ ಪ್ರೀತಿಸುತ್ತಿದ್ದರಂತೆ. ಆದರೆ ಖನ್ನಾ ಆಕೆಯನ್ನು ವಿವಾಹವಾಗಲು ನಿರಾಕರಿಸಿದ್ದರಂತೆ! ಕೊನೆಗೆ ಅಂಜು ಮಹೇಂದ್ರು ಖನ್ನಾಗೆ ಹತ್ತಿರವಾಗಿದ್ದರು. ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ನೋಡಿಕೊಂಡಿದ್ದು ಅಂಜು ಮಹೇಂದ್ರು! 2012ರ ಜುಲೈ 18ರಂದು ಖನ್ನಾ ಇಹಲೋಕ ತ್ಯಜಿಸಿದ್ದರು. ತನ್ನೆಲ್ಲಾ ಪ್ರೀತಿಯ ನೆನಪುಗಳ ಜತೆ ಅಂಜು ಮಹೇಂದ್ರು ಅವಿವಾಹಿತರಾಗಿಯೇ ಉಳಿದುಬಿಟ್ಟಿದ್ದರು.