Advertisement

Rajayoga movie review; ರಾಜಯೋಗ ಜಾತಕದಿಂದಲ್ಲ, ಪ್ರಯತ್ನದಿಂದ

01:16 PM Nov 18, 2023 | Team Udayavani |

ಆತ ಗ್ರಾಮೀಣ ಪ್ರದೇಶದ ಕೆಳಮಧ್ಯಮ ಕುಟುಂಬದ ಬಿ. ಎ ಪದವಿಧರ ಪ್ರಾಣೇಶ. ಕೆಎಎಸ್‌ ಪಾಸ್‌ ಮಾಡಿ ತಹಶೀಲ್ದಾರ್‌ ಆಗಬೇಕೆಂಬುದು ಪ್ರಾಣೇಶನ ಜೀವನದ ಏಕೈಕ ಗುರಿ. ಪ್ರತಿ ಬಾರಿ ಪರೀಕ್ಷೆಯಲ್ಲಿ ಫೇಲ್‌ ಆದರೂ ಮತ್ತೆ ಮತ್ತೆ ಪರೀಕ್ಷೆ ಕಟ್ಟಿ ಬರೆಯುವ “ಛಲದಂಕ ಮಲ್ಲ’. ಊರಿನವರ ಕಣ್ಣಲ್ಲಿ ಅಪಶಕುನ, ಅಪ್ರಯೋಜಕ, ಅಯೋಗ್ಯ ಎಂದೆಲ್ಲ ಹತ್ತಾರು ವಿಶೇಷಣಗಳನ್ನು ಮುಡಿಗೇರಿಸಿಕೊಂಡ ಪ್ರಾಣೇಶನಿಗೆ, ಬಾಲ್ಯದಿಂದಲೂ ಮನೆಯಲ್ಲಿ ತಂದೆ-ಬಂಧುಗಳೇ ಹಿತಶತ್ರುಗಳು. ಇಂಥ ವಾತಾವರಣದಲ್ಲಿರುವ ಪ್ರಾಣೇಶನಿಗೆ ಎದುರಾಗುವ ಅನೇಕ ಅನಿರೀಕ್ಷಿತ ಸವಾಲುಗಳನ್ನು ಆತ ಹೇಗೆ ಎದುರಿಸುತ್ತಾನೆ? ಅಂತಿಮವಾಗಿ ಪ್ರಾಣೇಶ ಕೆಎಎಸ್‌ ಪಾಸ್‌ ಮಾಡಿ ತಹಶೀಲ್ದಾರ್‌ ಆಗುತ್ತಾನಾ? ಅಥವಾ ಆಡಿಕೊಳ್ಳುವವರ ಮುಂದೆ ಮಂಡಿಯೂರುತ್ತಾನಾ? ಇದು ಈ ವಾರ ತೆರೆಗೆ ಬಂದಿರುವ “ರಾಜಯೋಗ’ ಸಿನಿಮಾದ ಕಥಾಹಂದರ.

Advertisement

ಸಿನಿಮಾದ ಹೆಸರೇ ಹೇಳುವಂತೆ, “ರಾಜಯೋಗ’ವನ್ನು ನಿರೀಕ್ಷಿಸುವವರ ಮತ್ತು ಅದರ ಬೆನ್ನುಹತ್ತುವವರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಔಟ್‌ ಆ್ಯಂಡ್‌ ಔಟ್‌ ಕಾಮಿಡಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಗಂಭೀರ ವಿಷಯವನ್ನು ಮನಮುಟ್ಟುವಂತೆ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕರು. ಪ್ರೀತಿ, ಪ್ರೇಮ, ಸ್ನೇಹ, ಬಾಂಧವ್ಯ, ಆಸೆ, ಅಸೂಯೆ ಹೀಗೆ ಜನಸಾಮಾನ್ಯನ ಮನಸ್ಸಿನ ಎಲ್ಲ ಗುಣಾವಗುಣಗಳನ್ನು ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿರುವುದು ಸಿನಿಮಾದ ದೊಡ್ಡ ಹೈಲೈಟ್‌.

ನಟ ಧರ್ಮಣ್ಣ ಕಡೂರು, ನಾಯಕಿ ನಿರೀಕ್ಷಾ ಜೋಡಿ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್‌ ಆಗಿದೆ. ನಾಗೇಂದ್ರ ಶಾ, ಶ್ರೀನಿವಾಸ ಗೌಡರ ಪಾತ್ರಗಳು ಮನಮುಟ್ಟುತ್ತವೆ. ಹಾಡು, ಕಾಮಿಡಿ, ಲವ್‌, ಸೆಂಟಿಮೆಂಟ್‌ ಹೀಗೆ ಎಲ್ಲಾ ಥರದ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳಿರುವ “ರಾಜಯೋಗ’ ಇಡೀ ಕುಟುಂಬ ಕೂತು ಆಸ್ವಾಧಿಸಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next