ಪಾಲಿ: ರಾಜಸ್ಥಾನದ ಪಾಲಿ ಜಿಲ್ಲೆಯ ಸಕ್ದಾರ ಗ್ರಾಮದ 19 ವರ್ಷದ ಪ್ರವೀಣಾ ಸಣ್ಣ ವಯಸ್ಸಿನಲ್ಲೇ ಏಳು ಗ್ರಾಮಗಳಿಗೆ ಸರ್‌ಪಂಚ್ ಆಗಿದ್ದಾರೆ.
ಮದ್ಯಕ್ಕೆ ದಾಸನಾಗಿದ್ದ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ಪ್ರವೀಣಾ, ಕಡು ಬಡತನದಿಂದಾಗಿ ಶಾಲೆಯಿಂದಲೂ ಹೊರಗುಳಿಯಬೇಕಾಯಿತು. ಜೀವನದಲ್ಲಿ ಅನೇಕ ಹೋರಾಟಗಳನ್ನು ಎದುರಿಸಿದ ಆಕೆ, ಈಗ ಸರ್‌ಪಂಚ್ ಆಗಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಯಾವುದೇ ಅಡೆ-ತಡೆ ಇಲ್ಲದೇ ಬಡ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಂತಾಗಲು ಶ್ರಮಿಸುತ್ತಿದ್ದಾರೆ.
“ನನಗೆ ಬಾಲ್ಯದಲ್ಲೇ ಮದುವೆ ಮಾಡಲು ಮುಂದಾಗಿದ್ದರು. ಮದುವೆಯಾಗಿದ್ದರೆ, ಹಸು ಮೇಯಿಸಿಕೊಂಡು, ಮನೆಗೆಲಸ ಮಾಡಿಕೊಂಡು ಇಡೀ ಜೀವನ ಕಳೆಯಬೇಕಾಗಿತ್ತು. ಮನೆಯಲ್ಲಿ ತೀವ್ರ ಬಡತನವಿತ್ತು. ಮದ್ಯಕ್ಕೆ ದಾಸನಾಗಿದ್ದ ತಂದೆ, ನಾಲ್ವರು ಮಕ್ಕಳನ್ನು ನೋಡಿಕೊಳ್ಳಬೇಕಿತ್ತು. ಹೀಗಾಗಿ ಮೂರನೇ ತರಗತಿಯಲ್ಲಿದ್ದಾಗಲೇ ನಾನು ಶಾಲೆ ತೊರೆಯಬೇಕಾಯಿತು’ ಎಂದು ಪ್ರವೀಣಾ ಹೇಳಿದ್ದಾರೆ.
“ಹಣ ಸಂಪಾದನೆಗಾಗಿ ಬೇರೆಯವರ ಹಸುಗಳನ್ನು ಮೇಯಿಸುತ್ತಿದ್ದೆ. ಮನೆ ಕೆಲಸಗಳನ್ನೂ ಮಾಡುತ್ತಿದೆ. 2 ವರ್ಷ ಹೀಗೆ ಕಳೆದ ನಂತರ ಎನ್‌ಜಿಒವೊಂದರ ಸದಸ್ಯರು ಮನೆಗೆ ಬಂದು, ಶಿಕ್ಷಣದ ಮಹತ್ವವನ್ನು ಹೇಳಿ, ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಕೊಡಿಸಿದರು,” ಎಂದು ವಿವರಿಸಿದ್ದಾರೆ. “ಶಾಲಾ ವಿದ್ಯಾಭ್ಯಾಸದ ನಂತರ 18 ವರ್ಷಗಳಿದ್ದಾಗ ನನ್ನ ಮದುವೆ ಆಯಿತು. ಪತಿಯ ಕುಟುಂಬದವರ ಸಹಾಯದಿಂದ ಚುನಾವಣೆಯಲ್ಲಿ ನಿಂತು ಸರಪಂಚ್ ಆಗಿದ್ದೇನೆ. ಬಜೆಟ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಭಾಗವನ್ನು ಮೀಸಲಿಟ್ಟಿದ್ದು, ಶಿಕ್ಷಣದಿಂದ ಅವರು ವಂಚಿತರಾಗದಂತೆ ಖಾತ್ರಿ ಪಡಿಸಿಕೊಳ್ಳುತ್ತೇನೆ” ಎಂದು ಗ್ರಾಮಸ್ಥರಿಂದ “ಪಪಿತಾ” ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಪ್ರವೀಣಾ ಹೇಳುತ್ತಾರೆ.