Advertisement

ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್‌ನಲ್ಲೇ ಭಿನ್ನಮತ ; ಬೇರೆ ದಾರಿ ಕಂಡುಕೊಳ್ಳಲು ಹಲವರ ಸಲಹೆ

03:50 AM Jul 27, 2020 | Hari Prasad |

ಜೈಪುರ: ರಾಜಸ್ಥಾನದಲ್ಲಿನ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಇದನ್ನು ಕಾನೂನಾತ್ಮಕ ದಾರಿಯಲ್ಲಿ ಬಗೆಹರಿಸಿಕೊಳ್ಳುವ ಕುರಿತು ಕಾಂಗ್ರೆಸ್‌ನೊಳಗೇ ಭಿನ್ನಮತ ಉಂಟಾಗಿದೆ.

Advertisement

ಸಚಿನ್‌ ಪೈಲಟ್‌ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್‌ ಪಡೆದು, ರಾಜಕೀಯ ಮಟ್ಟದಲ್ಲೇ ಚರ್ಚಿಸಿ ವಿವಾದ ಬಗೆಹರಿಸಿಕೊಳ್ಳುವುದು ಉತ್ತಮ ಎನ್ನುವುದು ಕಾಂಗ್ರೆಸ್‌ನೊಳಗಿನ ಒಂದು ಬಣದ ವಾದ.

ಆದರೆ, ಇನ್ನೊಂದು ಬಣವು ಈ ಬಿಕ್ಕಟನ್ನು ಕಾನೂನಾತ್ಮಕವಾಗಿಯೇ ಪರಿಹರಿಸಿಕೊಳ್ಳಬೇಕು ಎಂದು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪೈಲಟ್‌ ಬಣಕ್ಕೆ ರಿಲೀಫ್ ನೀಡಿ ರಾಜಸ್ಥಾನ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ ಈಗಾಗಲೇ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಸೋಮವಾರ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.

31ರಂದು ಅಧಿವೇಶನ?
ವಿಧಾನಸಭೆ ಅಧಿವೇಶನ ನಡೆಸುವಂತೆ ಕೋರಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಮತ್ತೆ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರ ಮೊರೆಹೋಗಿದ್ದಾರೆ. ಎರಡನೇ ಬಾರಿಗೆ ಮನವಿ ಸಲ್ಲಿಸಿರುವ ಅವರು, ಜು.31ರಂದು ವಿಶೇಷ ಅಧಿವೇಶನ ಕರೆಯುವಂತೆ ಕೋರಿದ್ದಾರೆ. ಆದರೆ, ಅವರು ಎಲ್ಲೂ ವಿಶ್ವಾಸಮತ ಯಾಚನೆ ಕುರಿತು ಪ್ರಸ್ತಾವಿಸಿಲ್ಲ. ಬದಲಾಗಿ, ಕೋವಿಡ್ 19ವೈರಸ್‌ ಕುರಿತ ಚರ್ಚೆಯೇ ಅಧಿವೇಶನದ ಪ್ರಮುಖ ಅಜೆಂಡಾ ಎಂದು ಹೇಳಿದ್ದಾರೆ.

Advertisement

ಡಿಜಿಟಲ್‌ ಅಭಿಯಾನ ಆರಂಭ
ಬಿಜೆಪಿ ವಿರುದ್ಧ ಕಾಂಗ್ರೆಸ್‌ ರವಿವಾರ ದೇಶವ್ಯಾಪಿ ಆನ್‌ಲೈನ್‌ ಅಭಿಯಾನ ಆರಂಭಿಸಿದೆ. ಪ್ರಜಾಪ್ರಭುತ್ವಕ್ಕಾಗಿ ಧ್ವನಿಯೆತ್ತಿ(ಸ್ಪೀಕ್‌ ಅಪ್‌ ಫಾರ್‌ ಡೆಮಾಕ್ರಸಿ) ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅಭಿಯಾನ ಆರಂಭಿಸಲಾಗಿದ್ದು, ದೇಶದ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಸಂಪ್ರದಾಯವನ್ನು ಬಿಜೆಪಿ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.
ಆರೋಗ್ಯ ತುರ್ತು ಪರಿಸ್ಥಿತಿಯ ಈ ಕಾಲದಲ್ಲಿ ಸರಕಾರವನ್ನು ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದೂ ಕಾಂಗ್ರೆಸ್‌ ನಾಯಕರು ದೂರಿದ್ದಾರೆ.

ರಾಜ್ಯಪಾಲರ ವಿರುದ್ಧ ಕಿಡಿ
ರಾಜಸ್ಥಾನದ ರಾಜ್ಯಪಾಲರು ಪ್ರಜಾತಂತ್ರಕ್ಕೆ ಅತ್ಯಂತ ಕೀಳುಮಟ್ಟದಲ್ಲಿ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ನಮ್ಮ ಪಕ್ಷವು ರಾಜ್ಯ ವಿಧಾನಸಭೆ ಅಧಿವೇಶನ ನಡೆಸುವಂತೆ ಬೇಡಿಕೊಳ್ಳುತ್ತಿದ್ದರೂ, ರಾಜ್ಯಪಾಲರು ಒಪ್ಪಿಗೆ ನೀಡುತ್ತಿಲ್ಲ. ಕೇಂದ್ರ ಸರಕಾರದ ಆಜ್ಞೆಯನುಸಾರ ವಿಶ್ವಾಸಮತ ಯಾಚನೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next