ಹೊಸದಿಲ್ಲಿ : ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್‌ಲೋಟ್ ಅವರು ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಿಕಟ ಮೂಲಗಳನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.
ಈ ಬಗ್ಗೆ ಅಧಿಕೃತ ಪ್ರಕಟನೆಯನ್ನು ಅಖೀಲ ಭಾರತ ಕಾಂಗ್ರೆಸ್ ಸಮಿತಿಯು ಇಂದು ಸಂಜೆ 4.30ಕ್ಕೆ ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಮಾಡಲಿದೆ ಎಂದು ಎಎನ್‌ಐ ತಿಳಿಸಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮತ್ತು ಮಿತ್ರ ಪಕ್ಷಗಳ ನೆರವಿನಿಂದ ಸರಕಾರ ರಚಿಸುವುದು ಖಚಿತವೇ ಇದ್ದರೂ ಮುಖ್ಯಮಂತ್ರಿ ಆಯ್ಕೆ ಪ್ರಶ್ನೆ ಅಧ್ಯಕ್ಷ ರಾಹುಲ್ ಗಾಂಧಿಗೆ ಜಿಗುಟಿನ ವಿಷಯವಾಗಿತ್ತು. ಹಾಗಾಗಿ ಕಾಂಗ್ರೆಸ್ ವಿಜಯಿಯಾಗಿ ಮೂಡಿ ಬಂದ ಮೂರು ದಿನಗಳ ಬಳಿಕ ಇದೀಗ ರಾಜಸ್ಥಾನದ ಸಿಎಂ ಯಾರೆಂಬುದನ್ನು ನಿರ್ಧರಿಸಲು ಸಾಧ್ಯವಾಗಿದೆ ಎಂದು ಮೂಲಗಳು ಹೇಳಿವೆ.
ರಾಜಸ್ಥಾನ ಸಿಎಂ ಹುದ್ದೆಗೆ ಗೆಹ್‌ಲೋಟ್ ಮತ್ತು ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ನಡುವೆ ತೀವ್ರ ಪೈಪೋಟಿ ಇತ್ತು. ನಿಜಕ್ಕಾದರೆ ರಾಹುಲ್ ಒಲವು ಯುವ ನಾಯಕ ಸಚಿನ್ ಪೈಲಟ್ ಕಡೆಗೇ ಇತ್ತು. ಆದರೆ ಗೆಹಲೋಟ್ ಅವರು ಸೋನಿಯಾ ಮತ್ತು ಪ್ರಿಯಾಂಕಾ ಅವರ ಆಯ್ಕೆಯಾಗಿದ್ದರು.
ಇಂದು ದಿನಪೂರ್ತಿ ರಾಹುಲ್ ಗಾಂಧಿ, ಪಕ್ಷದ ನಾಯಕರು, ಶಾಸಕರು, ಕಾರ್ಯಕರ್ತರೊಂದಿಗೆ ಬಿರುಸಿನ ಸಮಾಲೋಚನೆ ನಡೆಸಿದರು. ಇದೇ ವೇಳೆ ಪೈಲಟ್ ಅವರೇ ಸಿಎಂ ಆಗಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ರೈಲು ಮತ್ತು ರಸ್ತೆ ತಡೆ ನಡೆಸಿದರು.
ಗೆಹ್‌ಲೋಟ್ ಅವರು ಈ ಹಿಂದೆ ಎರಡು ಬಾರಿ ರಾಜಸ್ಥಾನದ ಸಿಎಂ ಆಗಿದ್ದವರು. ಮುಂದಿನ ಸಿಎಂ ಆಯ್ಕೆಯಲ್ಲಿ ಯಾವುದೇ ವಿಳಂಬ ಆಗುತ್ತಿಲ್ಲ; ಅವೆಲ್ಲವೂ ಬಿಜೆಪಿಯವರು ಹರಡುತ್ತಿರುವ ವದಂತಿ ಎಂದು ಗೆಹಲೋಟ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಬಿಜೆಪಿ 7 ದಿನ ತೆಗೆದುಕೊಂಡಿತ್ತು; ಮಹಾರಾಷ್ಟ್ರ ಸಿಎಂ ಆಯ್ಕೆ ಮಾಡುವಾಗ ಬಿಜೆಪಿಗೆ 9 ದಿನ ತಗುಲಿದ್ದವು ಎಂದು ಗೆಹ್‌ಲೋಟ್ ಹೇಳಿದರು.