Advertisement

ರಜನೀಕಾಂತ್‌ ಹೃದಯವಂತಿಕೆಗೆ ಸಾಕ್ಷಿ ಹೆರ್ಗದಲ್ಲಿರುವ ಗುರು ರಾಯರ ಚಿತ್ರ

12:37 AM Apr 03, 2021 | Team Udayavani |

ಉಡುಪಿ: ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡಿಗ, ಹಿರಿಯ ಚಲನಚಿತ್ರ ನಟ ರಜನೀಕಾಂತರಿಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ.

Advertisement

ರಜನೀಕಾಂತ್‌ ಮತ್ತವರ ಸ್ನೇಹಿತರು 1975ರಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೋದಾಗ ತುಂಬಾ ಕಷ್ಟದಲ್ಲಿದ್ದರು. ಆಗ ಅವರಿಗೆ ವುಡ್‌ಲ್ಯಾಂಡ್ಸ್‌ ಹೊಟೇಲ್‌ನಲ್ಲಿ ಕೆಲಸಕ್ಕಿದ್ದ ಹೆರ್ಗದ ನಾರಾಯಣ ಪಾಟೀಲ್‌ ನೆರವು ನೀಡಿದ್ದರು. ಹೊಟೇಲ್‌ ಮೆದ್ರಾಸ್‌ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಸಮೀಪವಿದ್ದ ಕಾರಣ ರಜನೀಕಾಂತ್‌, ನಟ ದಿಲೀಪ್‌, ನಿರ್ದೇಶಕ ರಾದ ಸತೀಶ್‌, ರವೀಂದ್ರನಾಥ್‌ ಮೊದಲಾ¨ ‌ವರು ಹೊಟೇಲ್‌ಗೆ ಬರುತ್ತಿದ್ದರು. ಕನ್ನಡದಲ್ಲಿ ಮಾತನಾಡುತ್ತಿದ್ದ ಕಾರಣ ಪಾಟೀಲರ ಪರಿಚಯ ವಾಗಿದ್ದು, ರಜನೀಕಾಂತ್‌ ತಂಡ ತಮ್ಮ ಕಷ್ಟಗಳನ್ನು ಪಾಟೀಲರ ಬಳಿ ಹಂಚಿಕೊಂಡಿತ್ತು. ಆಗ ಸಣ್ಣ ರೂಮನ್ನು ಬಾಡಿಗೆಗೆ ಕೊಡಿಸಿದ ಪಾಟೀಲರು ಊಟಕ್ಕೂ ಸಹಾಯ ಮಾಡಿದ್ದರು.

ಡ್ಯಾಡಿ ಆಗಿದ್ದರು
ಇವರಿಬ್ಬರ ಗಾಢ ಸ್ನೇಹದಿಂದಾಗಿ ರಜನೀ ತಂಡದ ಸದಸ್ಯರು ಪಾಟೀಲರನ್ನು “ಡ್ಯಾಡಿ’ ಎಂದು ಕರೆಯುತ್ತಿದ್ದರು. ಪಾಟೀಲರು 1991ರಲ್ಲಿ ಹೆರ್ಗಕ್ಕೆ ಬಂದು ನೆಲೆ ನಿಂತ ಬಳಿಕ 1994ರಲ್ಲಿ ಚಿತ್ರ ನಟ ಸತೀಶ್‌ ದೂರವಾಣಿ ಕರೆ ಮಾಡಿ ಚೆನ್ನೈಗೆ ಬರಲು ಹೇಳಿದರು.

ರಜನಿಯ ತಂದೆ ನೆನಪು: ಪುತ್ರನ ಕೃತಜ್ಞತೆ
ಪಾಟೀಲರು 2018ರಲ್ಲಿ ನಿಧನ ಹೊಂದುವ ನಾಲ್ಕು ತಿಂಗಳು ಮುನ್ನ ರಜನೀಕಾಂತ್‌ ಅವರ ಆಪ್ತ ಕಾರ್ಯದರ್ಶಿ ವಿಟuಲ್‌ ದೂರವಾಣಿ ಮೂಲಕ ವಿಚಾರಿಸಿದ್ದರು ಎನ್ನುತ್ತಾರೆ ನಾರಾಯಣ ಪಾಟೀಲರ ಪುತ್ರ, ಮಣಿಪಾಲದಲ್ಲಿ ಆಟೋ ರಿಕ್ಷಾ ವೃತ್ತಿ ನಡೆಸುತ್ತಿರುವ ಪ್ರದೀಪ್‌. “ಅವರು ನನ್ನ ತಂದೆಯನ್ನು ನಾರಾಯಣ ರಾವ್‌ ಎಂದು ಕರೆಯುತ್ತಿದ್ದರು. ಫಾಲ್ಕೆ ಪ್ರಶಸ್ತಿ ಬಂದಾಗ ಅವರು ತಂದೆಯನ್ನು ಸ್ಮರಿಸಿಕೊಂಡದ್ದನ್ನು ಮಾಧ್ಯಮಗಳಲ್ಲಿ ನೋಡಿದೆ. ಅದು ತುಂಬಾ ಖುಷಿಯ ಸಂಗತಿ’ ಎನ್ನುತ್ತಾರೆ ಪ್ರದೀಪ್‌.

1.4 ಲ.ರೂ. ಠೇವಣಿ ಇಟ್ಟ ರಜನೀ
ಚೆನ್ನೈಗೆ ಹೋದ ಪಾಟೀಲ್‌ ರಜನೀಕಾಂತರನ್ನು ಭೇಟಿ ಮಾಡಿದರು. ಪಾಟೀಲರ ಬಳಿ ಏನು ಸಹಾಯ ಮಾಡಬೇಕು, ತಿಂಗಳಿಗೆ ಎಷ್ಟು ಖರ್ಚು ಬರುತ್ತದೆ ಎಂದು ಕೇಳಿದಾಗ “ಗಂಡ ಹೆಂಡತಿಗೆ ತಿಂಗಳಿಗೆ 2,000 ರೂ. ಸಾಕು’ ಎಂದರು. ತತ್‌ಕ್ಷಣ ರಜನಿ ಅವರು ಚೆನ್ನೈಯ ಕರ್ಣಾಟಕ ಬ್ಯಾಂಕ್‌ನಲ್ಲಿ 1.4 ಲ.ರೂ. ಠೇವಣಿ ಇರಿಸಿದರು. “ವಲ್ಲೀ’ ತಮಿಳು ಸಿನೆಮಾ ಹೊರಬರುತ್ತಿದೆ. ಇದರ ಲಾಭವನ್ನು ಎಲ್ಲ ಸ್ನೇಹಿತರಿಗೆ ಹಂಚಬೇಕೆಂದಿದ್ದೇನೆ. ಮತ್ತೆ ಬನ್ನಿ’ ಎಂದು ರಜನೀಕಾಂತ್‌ ಹೇಳಿದರೂ ಪಾಟೀಲ್‌ ಆ ಬಳಿಕ ಹೋಗಲಿಲ್ಲ. ರಜನೀಕಾಂತ್‌ ಆಗಷ್ಟೇ ಹೊರಬಂದ ರಾಘವೇಂದ್ರ ಸ್ವಾಮಿಗಳ ಚಲನ ಚಿತ್ರದ ಸ್ಮರಣಾರ್ಥ ನೀಡಿದ್ದ ರಾಯರ ಚಿತ್ರ ಹೆರ್ಗದ ಮನೆಯಲ್ಲಿ ರಾರಾಜಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next