“ರಾಜಮಾರ್ತಾಂಡ’ ಸಿನಿಮಾವನ್ನು ಚಿರು ಕೊನೆಯ ಸಿನಿಮಾ ಅಂತ ನಾವ್ಯಾರು ಭಾವಿಸಿಲ್ಲ. ನಾನು ಮತ್ತು ನಮ್ಮ ಫ್ಯಾಮಿಲಿಯಲ್ಲಿ “ರಾಜಮಾರ್ತಾಂಡ’ ಸಿನಿಮಾವನ್ನ ಚಿರು ಮೊದಲನೇ ಸಿನಿಮಾ ಅಂತಾನೇ ಭಾವಿಸಿದ್ದೇವೆ. ಇದನ್ನು ಚಿರು ಮೊದಲ ಸಿನಿಮಾ ಅಂತಾನೇ ನೋಡೋಣ. ಯಾಕಂದ್ರೆ, ಇದು ಹೊಸ ಅಧ್ಯಾಯ ಆಗಿರಲಿ…’ ಇದು ಈ ವಾರ ಬಿಡುಗಡೆಯಾಗುತ್ತಿರುವ ಚಿರಂಜೀವಿ ಸರ್ಜಾ ಅಭಿನಯದ “ರಾಜಮಾರ್ತಾಂಡ’ ಸಿನಿಮಾದ ಬಗ್ಗೆ ಚಿರು ಪತ್ನಿ ಮೇಘನಾ ರಾಜ್ ಮಾತು.
ಅಂದಹಾಗೆ, ಮೇಘನಾ ರಾಜ್ ಇಂಥದ್ದೊಂದು ಮಾತನಾಡಲು ಬಲವಾದ ಕಾರಣವಿದೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ 2017ರಲ್ಲಿ ಆರಂಭವಾಗಿದ್ದ ನಟ ಚಿರಂಜೀವಿ ಸರ್ಜಾ ಅಭಿನಯದ “ರಾಜಮಾರ್ತಾಂಡ’ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ವರ್ಷಗಳೇ ಕಳೆದಿರುತ್ತಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. “ರಾಜಮಾರ್ತಾಂಡ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದರೂ, ಅದು ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೋಗುವುದರ ಒಳಗಾಗಿ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದರು. ಹೀಗಾಗಿ ಸಿನಿಮಾವನ್ನು ಥಿಯೇಟರಿಗೆ ತರುವುದು “ರಾಜಮಾರ್ತಾಂಡ’ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತು.
ಆಗ “ರಾಜಮಾರ್ತಾಂಡ’ನಿಗೆ ಸಾಥ್ ನೀಡಿದವರು ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಮತ್ತು ಸೋದರ ಧ್ರುವ ಸರ್ಜಾ. ಅರ್ಧಕ್ಕೆ ನಿಂತ “ರಾಜಮಾರ್ತಾಂಡ’ನ ಕೆಲಸಗಳನ್ನು ಪೂರೈಸಲು ಮೇಘನಾ ರಾಜ್ ಚಿತ್ರತಂಡ ಬೆಂಬಲವಾದರೆ, ಚಿರು ಸೋದರ ಧ್ರುವ ಸರ್ಜಾ ಅಣ್ಣನ ಪಾತ್ರಕ್ಕೆ ಸ್ವತಃ ತಾನೇ ಧ್ವನಿಯಾಗುವ ಮೂಲಕ ಬಾಕಿಯಿದ್ದ ಸಿನಿಮಾದ ಡಬ್ಬಿಂಗ್ ಕೆಲಸಗಳನ್ನು ಪೂರ್ಣಗೊಳಿಸಿದರು. ಈಗ ತನ್ನೆಲ್ಲ ಕೆಲಸಗಳನ್ನು ಮುಗಿಸಿ “ರಾಜಮಾರ್ತಾಂಡ’ ಈ ವಾರ ತೆರೆಗೆ ಬರುತ್ತಿದೆ.
ಇದೇ ವೇಳೆ ಸಿನಿಮಾದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಚಿತ್ರತಂಡದ ಜೊತೆ ಬಂದಿದ್ದ ಮೇಘನಾ, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
“ನಾವು ಫ್ಯಾಮಿಲಿಯವರಾಗಿರುವುದರಿಂದ, ಚಿರು ಈ ಸಿನಿಮಾದಲ್ಲಿ ಚಿರು ಅಭಿನಯಿಸಿರುವುದರಿಂದ ಈ ಸಿನಿಮಾದ ಬಗ್ಗೆ ನಮಗೊಂದು ಒಲವಿದೆ. ಆದರೆ, ನಿರ್ದೇಶಕ ರಾಮ್ ನಾರಾಯಣ್ ಹಾಗೂ ನಿರ್ಮಾಪಕ ಶಿವಕುಮಾರ್ ಅವರು ಸತತವಾಗಿ 2017ಯಿಂದ ಇವತ್ತಿನವರೆಗೂ ಈ ಸಿನಿಮಾದ ಮೇಲೆ, ಚಿರು ಮೇಲೆ ಅದೆಷ್ಟು ಅಭಿಮಾನ ಇಟ್ಟಿದ್ದಾರೆ ಅಂದರೆ, ಏನೇ ಆಗಲಿ ಈ ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ರಿಲೀಸ್ ಮಾಡಲೇಬೇಕು ಅಂತಾನೇ ಇದ್ದರು. ಅದೇ ರೀತಿ ಮಾಡುತ್ತಿದ್ದಾರೆ. ಸ್ವಲ್ಪ ತಡವಾದರೂ ಪರ್ವಾಗಿಲ್ಲ. ಜನರು ಈ ಸಿನಿಮಾವನ್ನು ಚಿರುಗೋಸ್ಕರ ನೋಡಲೇಬೇಕು ಅನ್ನೋ ಒಳ್ಳೆಯ ಹಠ ದಲ್ಲಿ ಇದ್ದರು’ ಎಂದು ಮೇಘನಾ ರಾಜ್ ಹೇಳಿದ್ದಾರೆ.