ಹುಬ್ಬಳ್ಳಿ: ರಾಜಗೋಪಾಲ ನಗರದ ವಸತಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಶುಕ್ರವಾರ ರಾಜಗೋಪಾಲನಗರ ಕಾಲೋನಿಯಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ “ನಮ್ಮ ನಡೆ ಸಮಾನತೆ ಕಡೆಗೆ’ ಕಾರ್ಯಕ್ರಮದ ನಿಮಿತ್ತ ದಲಿತರ ಮನೆಗಳಿಗೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.
ಸಂಸದ ಪ್ರಹ್ಲಾದ ಜೋಶಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಸುರೇಶ ಪ್ರಭು ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ರಾಜಗೋಪಾಲನಗರ ಕಾಲೋನಿಯ ಸಮೀಕ್ಷೆ ಮಾಡಿಸಿ ಹಕ್ಕುಪತ್ರ ಕೊಡಿಸಲಾಗುವುದು ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ 2020ರ ವೇಳೆಗೆ ಗುಡಿಸಲು ಮುಕ್ತ ದೇಶವನ್ನಾಗಿ ರೂಪಿಸುವ ಗುರಿ ಹೊಂದಿದ್ದಾರೆ. ದೇಶದಲ್ಲಿ ಎಲ್ಲರಿಗೂ ಸೂರು ಕಲ್ಪಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಸ್ವಾತಂತ್ರ್ಯ ಸಿಕ್ಕು 7 ದಶಕಗಳಾದರೂ ಎಲ್ಲರಿಗೂ ಸೂರು ಸಿಗದಿರುವುದು ದುರ್ದೈವದ ಸಂಗತಿ.
ಇದಕ್ಕೆ ಹಿಂದೆ ಐದು ದಶಕಗಳ ಕಾಲ ದೇಶವನ್ನಾಳಿದ ಸರ್ಕಾರವೇ ಕಾರಣ. ಕೇವಲ ಮತಬ್ಯಾಂಕ್ ರಾಜಕಾರಣ ಮಾಡಿದ್ದೇ ಅವರು ಮಾಡಿದ ದೊಡ್ಡ ಸಾಧನೆ ಎಂದು ಹೇಳಿದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ರಾಜಗೋಪಾಲ ನಗರದ ನಿವಾಸಿಗಳು ಹಲವು ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಅವರಿಗೆ ಇಲ್ಲಿ ಖಾಯಂ ಆಗಿ ನೆಲೆಸಲು ಕೇಂದ್ರ ಸರ್ಕಾರ ಅವಕಾಶ ನೀಡಬೇಕು.
ಬಡ ಜನರಿಗೆ ನ್ಯಾಯ ದೊರಕಿಸಬೇಕು ಎಂದರು. ಹರ್ಷದೇವರ ಮಠದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾಪೌರ ಡಿ.ಕೆ.ಚವ್ಹಾಣ, ಮಾ. ನಾಗರಾಜ, ನಾಗೇಶ ಕಲಬುರ್ಗಿ, ಮಹೇಂದ್ರ ಕೌತಾಳ, ಶಿವಾನಂದ ಮುತ್ತಣ್ಣವರ ಇದ್ದರು. ಶರಣು ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.