Advertisement

ಮಂಗಳವಾರವೇ ಹೊರಬಂತು “ರಜಾದಿನ’ದ ಟ್ರೇಲರ್‌

09:09 AM Mar 05, 2020 | Lakshmi GovindaRaj |

“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ, ನಂತರ ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾಗಿದ್ದ ನಟ ಚಂದನ್‌ ಆಚಾರ್‌, ಶೀಘ್ರದಲ್ಲಿಯೇ “ಮಂಗಳವಾರ ರಜಾದಿನ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ “ಮಂಗಳವಾರ ರಜಾದಿನ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ತೆರೆಗೆ ಬರಲು ಸಿದ್ಧತೆ ಆರಂಭಿಸಿದೆ.

Advertisement

ಸದ್ಯ “ಮಂಗಳವಾರ ರಜಾದಿನ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮಂಗಳವಾರ ಚಿತ್ರದ ಟ್ರೇಲರ್‌ ಅನ್ನು ಯೂ-ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಯುವಿನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಕ್ಷೌರಿಕನೊಬ್ಬನ ಜೀವನದ ಕಥೆಯನ್ನು ತೆರೆದಿಡುತ್ತಿದೆ. ಚಿತ್ರದಲ್ಲಿ ನಾಯಕ ಚಂದನ್‌ ಆಚಾರ್‌ ಕ್ಷೌರಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕ್ಷೌರಿಕ ವೃತ್ತಿ ಆರಂಭಿಸಿದಾಗಿನಿಂದಲೂ, ನಾಯಕನಿಗೆ ಕಿಚ್ಚ ಸುದೀಪ್‌ ಅವರಿಗೆ ಹೇರ್‌ಸ್ಟೈಲ್‌ ಮಾಡಬೇಕೆಂಬ ಆಸೆ ಇರುತ್ತದೆ.

ಕೊನೆಗೆ ಆತನ ಆಸೆ ಏನಾಗುತ್ತದೆ ಎಂಬುದು ಚಿತ್ರದ ಕಥೆಯ ಒಂದು ಎಳೆ ಎನ್ನುತ್ತದೆ ಚಿತ್ರತಂಡ. ಸಂಪೂರ್ಣ ಹಾಸ್ಯಭರಿತ, ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಜಹಂಗೀರ್‌, ರಜನಿಕಾಂತ್‌, ಗೋಪಾಲಕೃಷ್ಣ ದೇಶಪಾಂಡೆ, ನಂದನ್‌ ರಾಜ್‌, ಲಾಸ್ಯಾ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ತ್ರಿವರ್ಗ ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಮಂಗಳವಾರ ರಜಾದಿನ’ ಚಿತ್ರದ ನಾಲ್ಕು ಹಾಡುಗಳಿಗೆ ಪ್ರಜೋತ್‌ ಡೇಸಾ ಸಂಗೀತ ಸಂಯೋಜಿಸಿದ್ದಾರೆ.

ಯೋಗರಾಜ್‌ ಭಟ್‌, ಡಾ. ವಿ.ನಾಗೇಂದ್ರ ಪ್ರಸಾದ್‌, ಯುವಿನ್‌ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಋತ್ವಿಕ್‌ ಮುರಳಿಧರ್‌ ಹಿನ್ನಲೆ ಸಂಗೀತ, ಉದಯ್‌ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್‌ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಮಾರ್ಚ್‌ 10ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ತಿಂಗಳ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next