ಬೆಂಗಳೂರು: ಶಾಸಕ ವೆಂಕಟಪ್ಪ ನಾಯಕ ಅವರು ಬಹಳ ಸಂಭಾವಿತ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆಯೇ ಹೆಚ್ಚೆಚ್ಚು ಕಾಳಜಿ ವಹಿಸಿದ್ದರು. ಸೋತಾಗಲೂ ಜನರ ನಡುವೆಯೇ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ವೆಂಕಟಪ್ಪ ನಾಯಕ ಅವರು ವೇರ್ ಹೌಸಿಂಗ್ ಕಾರ್ಪೊರೇಷನ್ ಅಧ್ಯಕ್ಷರಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ನನಗಿದೆ. ಮೊನ್ನೆ ಸ್ವಲ್ಪ ಗುಣಮುಖರಾಗುತ್ತಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದರು.
ಶಾಸಕರ ನಿಧನದ ಹಿನ್ನೆಲೆಯಲ್ಲಿ ಸೋಮವಾರದ ಅಧಿವೇಶನವನ್ನು ಸಂತಾಪ ಸೂಚಕವಾಗಿ ಒಂದು ದಿನ ಮುಂದೂಡಲಾಗುವುದು. ಮಂಗಳವಾರ ರಾಜ್ಯಸಭಾ ಚುನಾವಣೆ ಇರುವುದರಿಂದ ಬುಧವಾರಕ್ಕೆ ಅಧಿವೇಶನ ಮುಂದೂಡಬೇಕಾಗುತ್ತದೆ ಎಂದು ಸಿಎಂ ತಿಳಿಸಿದರು.
ಕಂದಕೂರ ಸಂತಾಪ: ಸುರಪುರ ಮತಕ್ಷೇತ್ರದ ಹಿರಿಯ ಶಾಸಕ ರಾಜಾವೆಂಕಟಪ್ಪ ನಾಯಕ್ ಅವರ ನಿಧನದಿಂದ ತೀವ್ರ ದುಃಖ ತಂದಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಹಿರಿಯ ರಾಜಕಾರಣಿಗಳಾದ ರಾಜಾವೆಂಕಟಪ್ಪ ನಾಯಕರು ಜನಾನುರಾಗಿಗಳಾಗಿ, ಸಮಾಜಮುಖಿಯಾಗಿ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ, ಶ್ರೀಯುತರ ಕುಟುಂಬ ವರ್ಗಕ್ಕೆ ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.