Advertisement

ಮೋದಿ ಮುಕ್ತ ಭಾರತಕ್ಕೆ ರಾಜ್‌ ಠಾಕ್ರೆ ಕರೆ

11:59 AM Mar 20, 2018 | Team Udayavani |

ಮುಂಬಯಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ  ತೀವ್ರ ವಾಗ್ಧಾಳಿ ಆರಂಭಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್‌ ಠಾಕ್ರೆ, 2019ರೊಳಗೆ ವಿಪಕ್ಷಗಳ ಏಕತೆ ಹಾಗೂ ಮೋದಿ ಮುಕ್ತ ಭಾರತದ ನಿರ್ಮಾಣಕ್ಕಾಗಿ ಕರೆ ನೀಡಿದ್ದಾರೆ.

Advertisement

ರವಿವಾರ ಮಧ್ಯ ಮುಂಬಯಿಯ ಶಿವಾಜಿ ಪಾರ್ಕ್‌ನಲ್ಲಿ  ಜರಗಿದ ರ್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,  ಜನರು ನರೇಂದ್ರ ಮೋದಿ ಮತ್ತು ಅವರ ಸರಕಾರದ ಹುಸಿ ಆಶ್ವಾಸನೆಗಳು ಮತ್ತು ಭರವಸೆಗಳಿಂದ ಬೇಸತ್ತು ಹೋಗಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯ ಕಾಂಗ್ರೆಸ್‌ ಮುಕ್ತ ಭಾರತದ ಘೋಷಣೆಯನ್ನು ನೆನಪಿಸಿದ ಠಾಕ್ರೆ ಅವರು, ಮೋದಿ ಮುಕ್ತ ಭಾರತವನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಬುಡ ಸಮೇತ ಕಿತ್ತೆಸೆಯಲು ಎಲ್ಲಾ ವಿಪಕ್ಷಗಳು ಒಂದಾಗಬೇಕು ಎಂದರು.

ಭಾರತವು 1947ರಲ್ಲಿ ಮೊದಲ ಸ್ವಾತಂತ್ರÂ ವನ್ನು ಪಡೆದುಕೊಂಡಿತು, 1977ರಲ್ಲಿ (ತುರ್ತು ಪರಿಸ್ಥಿತಿಯ ಅನಂತರ ನಡೆದ ಚುನಾವಣೆಯಲ್ಲಿ) ಎರಡನೇಯದು ಹಾಗೂ 2019ರಲ್ಲಿ ಒಂದೊಮ್ಮೆ ಭಾರತವು ಮೋದಿ ಮುಕ್ತವಾದಲ್ಲಿ ಮೂರನೇ ಸ್ವಾತಂತ್ರವನ್ನು ಪಡೆದುಕೊಂಡಂತಾಗಲಿದೆ ಎಂದವರು ನುಡಿದಿದ್ದಾರೆ.

ಮೋದಿ ಸರಕಾರವನ್ನು ಉಚ್ಚಾಟಿಸಿ, ನೋಟು ಅಪಮೌಲ್ಯ ನಿರ್ಣಯದ ತನಿಖೆಗೆ ಆದೇಶಿಸಿದರೆ, ಅದು 1947ರಿಂದೀಚೆಗೆ ನಡೆದ ದೇಶದ ಅತಿ ದೊಡ್ಡ ಹಗರಣವಾಗಿ ಮೂಡಿಬರಲಿದೆ ಎಂದು ಠಾಕ್ರೆ ಪ್ರತಿಪಾದಿಸಿದ್ದಾರೆ.

Advertisement

ಅಂತರ್ಜಲ ಮಟ್ಟದ ಕುಸಿತದಿಂದಾಗಿ ಮಹಾರಾಷ್ಟ್ರದ ಬೃಹತ್‌ ಭಾಗವು ಮರು ಭೂಮಿಯಾಗಿ ಮಾರ್ಪಡುತ್ತಿದೆ. ದೇಶದಲ್ಲಿ ರಾಜಸ್ಥಾನದ ಅನಂತರ, ನಮ್ಮ ರಾಜ್ಯದಲ್ಲಿ ಮರುಭೂಮೀಕರಣದ ಎರಡನೇ ಅತ್ಯಧಿಕ ಪ್ರಮಾಣವು ವರದಿಯಾಗಿದೆ ಎಂದರು.  ಇದೇ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ 56,000 ಬಾವಿಗಳನ್ನು ಅಗೆಯುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪ್ರತಿಪಾದನೆಯನ್ನು ಪ್ರಶ್ನಿಸಿದರು.

ನಾನು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿದ್ದೇನೆ. ಆದರೆ,  ಇದನ್ನು ಚುನಾವಣಾ ವಿಷಯವನ್ನಾಗಿ ಬಳಸಿ ಕೊಳ್ಳಬಾರದು ಎಂದು ಠಾಕ್ರೆ ತಿಳಿಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೆ, ಮುಂಬರುವ ದಿನಗಳಲ್ಲಿ ಕೋಮು ಗಲಭೆ ಪ್ರಚೋದಿಸಲು ಈ ವಿಷಯದ ಮೇಲೆ ಉದ್ದೇಶಪೂರ್ವಕ ಚರ್ಚೆ ನಡೆಯಲಿದೆ ಎಂದವರು ಪ್ರತಿಪಾದಿಸಿದ್ದಾರೆ.

ಮೋದಿಯವರ ವಿದೇಶ ಪ್ರವಾಸಗಳ ವಿರುದ್ಧ ಟೀಕಾಪ್ರಕಾರ ನಡೆಸಿದ ಅವರು, ಮೋದಿಯವರು ಪಕೋಡಾಗೆ ಹಿಟ್ಟು ಪಡೆಯಲು ವಿದೇಶಗಳಿಗೆ ಹೋಗುತ್ತಿದ್ದಾರೆಯೇ ಹೊರತೂ ದೇಶಕ್ಕೆ ಹೂಡಿಕೆಗಳನ್ನು ತರಲು ಅಲ್ಲ ಎಂದು ವ್ಯಂಗ್ಯವಾಡಿದರು. ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಮತ್ತು ಪ್ಯಾಡ್‌ಮ್ಯಾನ್‌ ಮುಂತಾದ ಚಿತ್ರಗಳು ಸರಕಾರಿ ಯೋಜನೆಗಳ ರಹಸ್ಯ ಪ್ರಚಾರವಾಗಿವೆ ಎಂದೂ ಅವರು ಟೀಕಿಸಿದ್ದಾರೆ.

ಇತ್ತೀಚೆಗೆ ನದಿ ಸಂರಕ್ಷಣೆ ಕುರಿತ ವೀಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸಿಎಂ ಫಡ್ನವೀಸ್‌ ಮೇಲೆ ಗುರಿ ಸಾಧಿಸಿದ ಅವರು, ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ, ಆದರೆ ಸಿಎಂ ಹಾಡುಗಳನ್ನು ಹಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next