ಧಾರವಾಡ: ಕೇವಲ ಆರ್ಥಿಕ ಅನುಕೂಲಗಳಿಗೆ ತಮ್ಮ ಹೋರಾಟವನ್ನು ಸೀಮಿತಗೊಳಿಸದೆ ಆಶಾ ಕಾರ್ಯಕರ್ತೆಯರು ಸಮಾಜದಲ್ಲಿರುವ ಅಸಮಾನತೆ, ಎಲ್ಲಾ ರೀತಿಯ ಶೋಷಣೆಗಳ ವಿರುದ್ಧವೂ ತಮ್ಮ ದ್ವನಿ ಎತ್ತಲು ವೈಚಾರಿಕವಾಗಿ ಸಜ್ಜಾಗಬೇಕು ಎಂದು ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ನಗರದ ಕವಿಸಂನಲ್ಲಿ ಹಮ್ಮಿಕೊಂಡಿದ್ದ ಅರ್ಬನ್ ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜೀರಹಿತ ಹೋರಾಟದಿಂದ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ. ರಾಜೀರಹಿತ ಕ್ರಾಂತಿಕಾರಿ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಅಡಿಯಲ್ಲಿ ಆಶಾ ಕಾರ್ಯಕರ್ತೆಯರೆಲ್ಲರೂ ಒಗ್ಗೂಡಿ ಇನ್ನು ಮುಂದೆ ಕೂಡಾ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟವನ್ನು ಗಟ್ಟಿಗೊಳಿಸಬೇಕು ಎಂದರು.
ಆಶಾ ಸಂಘದ ರಾಜ್ಯ ಉಪಾಧ್ಯಕ್ಷ ವೀರೇಶ್.ಎನ್.ಎಸ್ ಮಾತನಾಡಿ, ಬಹುತೇಕ ಕಡೆ ಇಲಾಖೆಯ ಸಿಬ್ಬಂದಿಗಳಾದ ಆರೋಗ್ಯ ಸಹಾಯಕರು, ವೈದ್ಯಾಧಿಕಾರಿಗಳು ಆಶಾಗಳನ್ನು ಅಧಿಕಾರಶಾಹಿ ಧೋರಣೆ, ದರ್ಪಗಳಿಂದ ನಡೆಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅರ್ಬನ್ ಆಶಾ ಕಾರ್ಯಕರ್ತೆಯರು ಒಗ್ಗೂಡಿ ತಮ್ಮ ಪ್ರಜಾತಾಂತ್ರಿಕ ಹಕ್ಕುಗಳಿಗೋಸ್ಕರ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಬಲ ಹೋರಾಟ ಕಟ್ಟಲು ಮುಂದಾಗಬೇಕು ಎಂದರು.
ಆಶಾ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿದರು. ಆಶಾ ಸಂಘದ ಜಿಲ್ಲಾ ಉಪಾಧ್ಯಕ್ಷ ಭುವನಾ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ, ಅರ್ಬನ್ ಆಶಾ ಮುಖಂಡರಾದ ಕವಿತಾ ಪವಾರ್ ಇದ್ದರು. ಇದೇ ಸಂದರ್ಭದಲ್ಲಿ ಅರ್ಬನ್ ಆಶಾಗಳ ಸಂಚಾಲನಾ ಸಮಿತಿಯನ್ನು ರಚಿಸಲಾಯಿತು. ಸಂಚಲನಾ ಸಮಿತಿಯ ಅಧ್ಯಕ್ಷರಾಗಿ ಭುವನಾರವರು ಆಯ್ಕೆಯಾದರು. ನಂತರ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾ ಆರೋಗ್ಯಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.