ಬೆಳಗಾವಿ: ನಗರದ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕನ್ನಡ ನಾಡಗೀತೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮೈತ್ರಿ ಲೇಡೀಸ್ ಆಫೀಸರ್ಸ್ ಕ್ಲಬ್ ಅಧ್ಯಕ್ಷರಾದ ಮೈತ್ರೇಯಿ ಬಿಸ್ವಾಸ ಅವರು ಮಕ್ಕಳನ್ನು ಸಮಾಜಮುಖೀಯಾಗಿ ಬೆಳೆಸುವಲ್ಲಿ ತಂದೆ-ತಾಯಿಯರ, ಗುರುವಿನ ಪಾತ್ರ ಮಹತ್ವದ್ದಾಗಿದೆ ಎಂದು ತಮ್ಮ ಜೀವನಾನುಭವದ ಉದಾಹರಣೆಗಳೊಂದಿಗೆ ವಿವರಿಸಿದರು.
ಮಕ್ಕಳು ದೇಶದ ಸಂಪತ್ತು ಹಾಗೂ ಭವಿಷ್ಯದ ಪ್ರಜೆಗಳು. ಕಾರಣ ಅವರು ವಿಶೇಷ ಸಾಮರ್ಥ್ಯಉಳ್ಳವರಾಗಿದ್ದು ಅವರಲ್ಲಿರುವ ಜಾಣ್ಮೆ, ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಬಜಂತ್ರಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿದಿನದ ಆಚರಣೆಯಾಗಬೇಕು ಎಂದರು.
ಆರ್ಷ ವಿದ್ಯಾ ಆಶ್ರಮದ ಚಿತ್‌ಪ್ರಕಾಶಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಗೋಲ್ಡನ್ ವ್ಹಾಯಿಸ್ ಬೆಳಗಾವಿ ಸಂಗೀತ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಪ್ರಣೀತ ಕಲ್ಯಾಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾಣಿ ಜಂತಿ, ಅಶ್ವಿನಿ ನವಲೆ ಪ್ರಾರ್ಥನಾಗೀತೆ ಹಾಡಿದರು. ಮಂಡಳಿಯ ಅಧ್ಯಕ್ಷರಾದ ಮಂಗಲ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ರತ್ನಶ್ರೀ ಗುಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಕ್ಷತಾ ಪಾಟೀಲ ಪರಿಚಯಿಸಿದರು. ದೀಪ್ತಿ ಕಾಗವಾಡ ವಂದಿಸಿದರು. ಪ್ರೇಮಾ ಉಪಾಧ್ಯೆ ನಿರೂಪಿಸಿದರು. ಅಹನಾ ಕಾಗತಿಕರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.