ಗದಗ: ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಪಂ ವಿಡಿಯೋ ಕಾನ್ಫೆರೆನ್ಸ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತ ನಾಡಿದರು. ಸೋಂಕು ನಿಯಂತ್ರಣಕ್ಕೆ ಈಗಾಗಲೇ ರಚಿಸಲಾದ ವಾರ್ಡ್‌ವಾರು ಸಮಿತಿ ಸದಸ್ಯರಿಗೆ ಹಾಗೂ ಪೌರಕಾರ್ಮಿಕರಿಗೆ ನಿಯಮಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಪೂರೈಸಲು ತಿಳಿಸಿದರು. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿ ರ್ಯಾಪಿಡ್ ಟೆಸ್ಟ್ ಮೂಲಕ ಪರೀಕ್ಷಿಸಬೇಕು. ಈ ಪರೀಕ್ಷೆಯಲ್ಲಿ ವರದಿಯು ನಕಾರಾತ್ಮಕವಾಗಿ ಬಂದು, ಸೋಂಕಿನ ಲಕ್ಷಣಗಳು ಕಂಡುಬಂದರೆ ಅಂತಹ ಪ್ರಕರಣಗಳನ್ನು ಕೂಡಲೇ ಜಿಲ್ಲೆಯ ಜಿಮ್ಸ್ ಆಸ್ಪತ್ರೆಗೆ ವರ್ಗಾಯಿಸಬೇಕು. ಜಿಲ್ಲೆಯಲ್ಲಿ ತೆರೆಯಲಾದ ಕೋವಿಡ್ ಕೇರ್ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಹೆಚ್ಚಿನ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಂಟೈನ್ಮೆಂಟ್ ಪ್ರದೇಶಗಳಿಗೆ ನೇಮಿಸಲಾದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಇತ್ತೀಚಿಗೆ ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಬೀತಿ ಎದುರಾಗುವ ಸಾಧ್ಯತೆಗಳಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿಪತ್ತು ನಿರ್ವಹಣೆ ಕುರಿತಂತೆ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಜರುಗಿಸಿ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಜಿಪಂ ಸಿಇಓ ಡಾ| ಆನಂದ ಕೆ. ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಗೃಹದಿಗ್ಬಂಧನದಲ್ಲಿರುವವರನ್ನು ಭೇಟಿ ಮಾಡಿ, ಸಂಬಂ ಧಿಸಿದವರಿಗೆ ವರದಿ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣ ಕುರಿತಂತೆ ಜಾಗೃತಿ ಜಾಥಾಗಳನ್ನು ಆಯೋಜಿಸುವಂತೆ ಸೂಚಿಸಿದರು. ಸೋಂಕು ನಿಯಂತ್ರಣಕ್ಕೆ ವಿವಿಧ ಕಾರ್ಯಗಳಿಗೆ ನಿಯೋಜಿಸಲಾದ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಎಸ್‌ಪಿ ಯತೀಶ್ ಎನ್. ಮಾತನಾಡಿ, ಗೃಹ ದಿಗ್ಬಂಧನ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಬಕ್ರೀದ್ ಹಬ್ಬದ ಪ್ರಯುಕ್ತ ಐವತ್ತಕ್ಕಿಂತಲೂ ಹೆಚ್ಚು ಜನ ಸೇರಿ ಪ್ರಾರ್ಥನೆ ಸಲ್ಲಿಸಿದಂತೆ ನಿಗಾವಹಿಸಲು ಸೂಚನೆ ನೀಡಿದರು.