Advertisement

ಸುಡುಬೇಸಿಗೆಯ ಸಂಜೆ ಮಳೆಸುರಿಸಿದ: ಮೇಘಮಲ್ಹಾರ

08:15 AM Feb 18, 2018 | |

ಮನುಷ್ಯನ ಶರೀರದ ಮತ್ತು ಮನಸ್ಸಿನ ಪ್ರಕೃತಿಯಂತೆ ರಾಗಕ್ಕೂ ಒಂದು ಪ್ರಕೃತಿಯಿರುತ್ತದೆ. ನಮ್ಮ ಸುತ್ತಲಿನ ಪ್ರಕೃತಿಯ ಬದಲಾವಣೆಗಳು ನಮ್ಮ ಮನಸ್ಸಿನ ಮತ್ತು ಶರೀರದ ಪ್ರಕೃತಿಯ ಮೇಲೆ ಪರಿಣಾಮವನ್ನು ಬೀರುವಂತೆ ನಮ್ಮ ಶಾಸ್ತ್ರೀಯ ಸಂಗೀತದ ರಾಗಗಳ ಮೇಲೂ ಬೀರುತ್ತವೆ. ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತದ ಕಛೇರಿಗಳನ್ನು ನಿರಂತರವಾಗಿ ಕೇಳುವ ಸಂಗೀತದ ಆರಾಧಕರಲ್ಲಿ ಇಂಥ ವಿಷಯವನ್ನು ಗಂಟೆಗಟ್ಟಲೆ ಚರ್ಚಿಸಬಹುದು. ರಾಗಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಂಡ, ರಾಗವೊಂದರ ಲಕ್ಷಣವನ್ನು ಘರಾನೆಯಿಂದ ಘರಾನೆಗೆ ಕೊಂಡೊಯ್ದು ಆ ರಾಗಕ್ಕೊಂದು ಲಕ್ಷಣಗೀತೆಯನ್ನು ಕಟ್ಟುವ ಸಂಪ್ರದಾಯಕ್ಕೆ ಮತ್ತು ಶಾಸ್ತ್ರಕ್ಕೆ ಯಾವಾಗಲೂ ಆತುಕೊಂಡೇ ಇರುವ ಸಂಗೀತ ವಿಮರ್ಶಕರಿಗಿಂತ ಇಂಥ ಕೇಳುಗವರ್ಗಕ್ಕೆ ರಾಗ ಮತ್ತು ರಾಗದ ಪ್ರಕೃತಿ, ಪ್ರಕೃತಿ ಮತ್ತದರ ರಾಗಗಳ ನಡುವಿನ ಆನಂದದ ಸಂಬಂಧದ ಕಲ್ಪನೆ ನಿಜಕ್ಕೂ ಆಳವಾಗಿರುತ್ತದೆ. 

Advertisement

ರಾಗವೊಂದರ ವಿನ್ಯಾಸ ಎಂಬುದೇ ಒಂದು ಮಹತ್ತಿನ ಕಲ್ಪನೆ. ಈ ಮಹತ್‌ ಎನ್ನುವಂಥದ್ದು ಶಾಸ್ತ್ರವನ್ನು ಓದಿ ಯಾವುದೇ ಕಾರಣಕ್ಕೂ ಕಲಿಯಲು ಅಥವಾ ಅರಗಿಸಿಕೊಳ್ಳಲು ಸಾಧ್ಯವಾಗದಿರುವಂಥಾದ್ದು. ಎಷ್ಟೋ ಬಾರಿ ರಾಗಕ್ಕೆ ಇಂಥದೊಂದು ಲಕ್ಷಣವಿರುತ್ತದೆ ಎಂದು ಆರಂಭದ ಅಭ್ಯಾಸಕ್ಕೆ, ಆರಂಭದ ಪಾಠಕ್ಕಾಗಿ ಬರೆದಿಡಬಹುದೇ ಹೊರತು, ಸಂತರಂಥ ಕಲಾವಿದರಲ್ಲಿ ಆ ರಾಗದ ಲಕ್ಷಣವನ್ನು ಲಕ್ಷಣಗೀತೆಯಲ್ಲಿ ಬರೆದಿಟ್ಟಂತೆ ಕಾಣುವುದು ನಿಜಕ್ಕೂ ಕಷ್ಟ. ಜೀವಿತದ ಉದ್ದಕ್ಕೂ ಸಂಗೀತವನ್ನು ಸಾಧನೆಯ ಕ್ಷೇತ್ರವನ್ನಾಗಿ ಆರಿಸಿಕೊಳ್ಳುವ ಇಂಥ ಕಲಾವಿದರ ಶಾರೀರ ಮತ್ತು ಮಾನಸಿಕ ಪ್ರಕೃತಿಗೆ ರಾಗಗಳ ಪ್ರಕೃತಿಯು ಅದೆಷ್ಟು ತೀವ್ರವಾಗಿ ಹೊಂದಿಕೊಂಡಿರುತ್ತದೆಂದರೆ, ಕಲಾವಿದರು ಹಾಡುತ್ತಿರುವ ರಾಗವು ಸಂತೋಷದ ಭಾವದ್ದಾಗಿದ್ದರೆ ಯಾವುದೋ ತೀವ್ರವಾದ ದುಃಖದಲ್ಲಿರುವ ಕೇಳುಗ ತನ್ನ ಎಲ್ಲ ದುಃಖವನ್ನು ನಿರಾಯಾಸವಾಗಿ ಮರೆಯುತ್ತಾನೆ. ಹೊರಗೆ ಮಳೆಯಿದ್ದು ಕಛೇರಿಯಲ್ಲಿ ಮಳೆಯ ರಾಗದ ಆಲಾಪವು ಶುರುವಾಗುತ್ತಿದ್ದರೆ ಕೇಳುತ್ತ ಕುಳಿತಿರುವ ಆ ಹುಡುಗಿಗೆ ಮಳೆಯಲ್ಲಿ ಕುಣಿಯುವ ಹಂಬಲವಾಗುತ್ತದೆ ಅಥವಾ ಕೇಳುವ ತೀವ್ರತೆಯನ್ನು ಅನುಸರಿಸಿ ಆಕೆ ಮಾನಸಿಕವಾಗಿ ಮಳೆಯಲ್ಲಿ  ತೋಯುತ್ತ ಕುಣಿಯುತ್ತಲೂ ಇರಬಹುದು.

ಸಂಗೀತದ ರಾಗಗಳು ಮತ್ತು ಪ್ರಕೃತಿಗೆ ಸಂಬಂಧಿಸಿದ ಇಂಥ ಅನುಭವಗಳನ್ನು ದಾಖಲಿಸುವ ಪ್ರಕ್ರಿಯೆ ಹೊಸದೇನಲ್ಲ. 
ಕವಿಯೊಬ್ಬ ಮಳೆಯ ಅಂಗಳದ ಒ¨ªೆಕಟ್ಟೆಯ ಮೇಲೆ ಕುಳಿತು ಬರೆದ ಅದೇ ಕವಿತೆಯನ್ನು ಬೇಸಿಗೆಯ ಸುಡುವ ಅಂಗಳದ ಬದಿಯ ಕಟ್ಟೆಯ ಮೇಲೆ ಕುಳಿತು ಬರೆಯಲು ಸಾಧ್ಯವಿಲ್ಲ. ಹಾಗಂತ ಬರೆಯಲು ಸಾಧ್ಯವೇ ಇಲ್ಲವೆಂದೇನಿಲ್ಲ. ಆದರೆ, ಸುತ್ತಲಿನ ಪ್ರಕೃತಿಯ ಪ್ರಭಾವದಿಂದ ಹೊರಬಂದು ಕಾವ್ಯದ ಲಾಲಿತ್ಯವನ್ನು ತನಗೆ ಬೇಕಾದಂತೆ ಕಾಪಾಡಿಕೊಂಡು ಪೋಷಿಸುವುದು ನಿಜಕ್ಕೂ ಕಷ್ಟಸಾಧ್ಯವಾದ ವಿಷಯ.ಕಾವ್ಯರಚನೆಗೆ ಪೋಷಕವಾದ ಸಾಮಗ್ರಿಗಳೇನು ಎಂದು ಕವಿಯಲ್ಲಿ ಕೇಳುವುದಕ್ಕಿಂತ ಕವಿಯ ಕಾವ್ಯವನ್ನು ಅಭ್ಯಾಸ ಮಾಡುವುದು ಕಾವ್ಯಜಿಜ್ಞಾಸುವಿಗೆ ಎಷ್ಟು ಮಹತ್ವವಾದ¨ªೋ ಹಾಗೆಯೇ ರಾಗದ ಛಾಯೆಯನ್ನು, ಧಾಟಿಯನ್ನು ಮತ್ತು ಮುಖ್ಯವಾಗಿ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಕಲಾವಿದರೊಬ್ಬರ ಹಾಡುಗಾರಿಕೆಯನ್ನೋ ಅಥವಾ ವಾದನವನ್ನೋ ಮತ್ತೆ ಮತ್ತೆ ಕೇಳಬೇಕಾಗುತ್ತದೆ.  

ಅತೀ ಪ್ರಸಿದ್ಧವಾದ ಯಮನ್‌ ರಾಗವನ್ನಿಟ್ಟುಕೊಂಡು ಹಳೆಯ ಹಿಂದೀ ಚಿತ್ರಗೀತೆಗಳನ್ನು ಗಮನಿಸಿದರೆ ಕೆಲವೊಂದು ಆಸಕ್ತಿದಾಯಕ ವಿಷಯಗಳು ಕಾಣಿಸುತ್ತವೆ. ಅನುರೋಧ್‌ ಚಿತ್ರದ ಆಪ್‌ ಕೇ ಅನುರೋಧ್‌ ಪೆ ಎಂಬ ಸ್ಫೂರ್ತಿ ಮತ್ತು ಆನಂದವೇ ಮುಖ್ಯವಾದ ಗುಣವುಳ್ಳ ಹಾಡು ಯಮನ್‌ ರಾಗದಲ್ಲಿ ರಚನೆಯಾಗಿದೆ. ಅದೇ ಯಮನ್‌ನಲ್ಲಿ ಪರ್ವರಿಶ್‌ ಚಿತ್ರದ ಆಸೂ ಭರೀ ಹೈ, ಯೆಹ್‌ ಜೀವನ್‌ ಕೀ ರಾಹೇ ಎಂಬ ಪರಮದುಃಖದ ಹಾಡೂ ರಚನೆಯಾಗಿದೆ ಮತ್ತು ಈ ಎರಡೂ ಹಾಡಿನ ಸಾಹಿತ್ಯಿಕ ರಚನೆಗೆ ಒಂದೇ ಯಮನ್‌ ರಾಗವನ್ನು ಬಳಸಲಾಗಿದ್ದರೂ ಹಾಡಿನ ಧಾಟಿಯ ಚಲನೆಯಲ್ಲಿ ಸಾಹಿತ್ಯದ ಗುಣಕ್ಕೆ ಎಲ್ಲಿಯೂ ಅಪಚಾರವಾಗಿಲ್ಲ. ಬದಲಾಗಿ ಆ ಎರಡೂ ಹಾಡುಗಳು ಒಂದೇ ರಾಗದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ನಿಂತು ತಮ್ಮ ಮನಃಸ್ಥಿತಿಯನ್ನು ಯಶಸ್ವಿಯಾಗಿ ಬಿಂಬಿಸುತ್ತ ಅಭಿವ್ಯಕ್ತಿಸುತ್ತ ತಾವು ಹೇಳಬೇಕಾದ್ದನ್ನು ಅತ್ಯಂತ ಬಲಶಾಲಿಯಾಗಿ ಹೇಳುತ್ತವೆ!

ರಾಗದ ಬಹುರೂಪ
ಹಾಗಿದ್ದರೆ, ರಾಗವೊಂದರ ಲಕ್ಷಣವು ಹೇಗಿರುತ್ತದೆ? ಒಂದೇ ರಾಗವು ಏಕಕಾಲಕ್ಕೆ ಬೆಂಗಳೂರಿನ ಪ್ರೇಮಿಯಲ್ಲಿ ವಿರಹದ ನೋವನ್ನೂ , ಮೈಸೂರಿನಲ್ಲಿರುವ ಪ್ರೇಮಿಯಲ್ಲಿ ಸನಿಹದ ಆನಂದವನ್ನೂ ಅಷ್ಟು ಉತ್ಕಟವಾಗಿ ಸೃಷ್ಟಿಸಲು ಸಾಧ್ಯವಾಗುವುದು ಹೇಗೆ?

Advertisement

ಪಂಡಿತ್‌ ಭೀಮಸೇನ್‌ ಜೋಶಿಯವರ ಪೂರಿಯಾ ರಾಗದ ಬೇರೆ ಬೇರೆ ಹಾಡುಗಾರಿಕೆಯ ಡಿಜಿಟಲ್‌ ಟ್ರ್ಯಾಕ್‌ಗಳು ನಮಗೆ ಸಿಗುತ್ತವೆ. ಅವರ ವಯಸ್ಸು ಸುಮಾರು ನಲವತ್ತರ ಆಸುಪಾಸಿನಲ್ಲಿದ್ದಾಗ ಅವರು ಹಾಡಿದ ಅದೇ ರಾಗವು ಅವರ ವಯಸ್ಸು ಅರವತ್ತಾದಾಗ ಮತ್ತೂಂದು ಲೋಕವನ್ನು ಸೃಷ್ಟಿಸುತ್ತದೆ. ಉಸ್ತಾದ್‌ ಝಾಕಿರ್‌ ಹುಸೇನರು ಬೆಂಗಳೂರಿನಲ್ಲಿ ನುಡಿಸಿದ ಅದೇ ಪಂಜಾಬೀ ಘರಾನೆಯ ಚಕ್ರಧಾರವು ಮಾರನೆಯ ದಿನದ ಪುಣೆಯ ಕಾರ್ಯಕ್ರಮದಲ್ಲಿ ಮತ್ತೂಂದು ರುಚಿಯನ್ನು ನೀಡುತ್ತದೆ. ಈ ರಾಗವೊಂದರ ಅಥವಾ ನಾದದ ಅತೀ ಸಂಕೀರ್ಣವಾದ ರೂಪಾಂತರವು ಮಹಿಮೆಯೂ ಹೌದು ಮತ್ತು ಶಬ್ದಗಳ ಜೋಡಣೆಯ ಅರ್ಥವ್ಯಾಪ್ತಿಗೆ ಸಿಕ್ಕದ ಪ್ರಕೃತಿಯ ಚಮತ್ಕಾರವೂ ಹೌದು.

ಪಂಡಿತ್‌ ಜಸ್‌ರಾಜ್‌ರ ಕಾರ್ಯಕ್ರಮವೊಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದೆ. ಸುಡುಬೇಸಿಗೆಯ ಸಂಜೆ. ತಮ್ಮ ಮೊದಲ ರಾಗದ ಪ್ರಸ್ತುತಿಯು ಮುಗಿಯುತ್ತಿದ್ದಂತೆ ಪಂಡಿತ್‌ಜಿ ಇನ್ನೇನು ಮಳೆಬರಲಿದೆ ಎನ್ನುತ್ತ ಮಳೆಯ ರಾಗವೊಂದನ್ನು ಹಾಡಲು ಶುರು ಮಾಡಿದ್ದಾರೆ. ಕಾರ್ಯಕ್ರಮವು ಮುಗಿದ ಮೇಲೆ ಸಭಾಂಗಣದಿಂದ  ಹೊರಬಂದು ನಿಂತ ಪ್ರೇಕ್ಷಕರನ್ನು ಸ್ವಾಗತಿಸಿದ್ದು ಬಿರುಬೇಸಿಗೆಯಲ್ಲಿ ಒದ್ದೆಯಾದ ನೆಲ! ವರ್ಷಾಋತುವಿನ ಎಲ್ಲ ಲಕ್ಷಣಗಳನ್ನು ಹೊತ್ತಂಥ ಜಕರಾಂಡ ಮರದ ನೀಲಿ ಹೂವುಗಳು! ಇಲ್ಲಿ ಪಂಡಿತ್‌ಜೀಗೆ ಆ ಸ್ಪುರಣೆಯಾಗಿದ್ದು ಹೇಗೆ? ಸಾಧಕನ ಮನಸ್ಸು ಪ್ರಕೃತಿಯಲ್ಲಿದ್ದಷ್ಟು ಸಾಧನೆಯು ಅಣುವನ್ನೂ ಪರ್ವತವನ್ನೂ ಏಕಕಾಲಕ್ಕೆ ಸಾಕ್ಷಾತ್ಕರಿಸಬಲ್ಲದು!

ರಾಗಗಳನ್ನು ಸಮಷ್ಟಿಯಾಗಿ ಭಾರತೀಯ ಶಾಸ್ತ್ರೀಯ ಸಂಗೀತದ ಆತ್ಮ ಎಂದು ನಿಶ್ಚಿಂತೆಯಿಂದ ಹೇಳಬಹುದು. ಈ ರಾಗಗಳು ಪ್ರಕೃತಿಯ ಮೂಲಕ ಶರೀರದ ಸಂಪರ್ಕಕ್ಕೆ ಬಂದಾಗ ಪ್ರಕೃತಿಯ ಗುಣಗಳನ್ನು ಹೊತ್ತು ತರುತ್ತವೆ. ನಿಜವಾಗಿ ಅರ್ಥಮಾಡಿಕೊಂಡರೆ ಹಾಗೆ ಶಾರೀರವಾಗುವ ರಾಗಗಳು ಅಳುತ್ತವೆ, ನಗುತ್ತವೆ ಮತ್ತು ಮನುಷ್ಯನ ಭಾವನೆಗಳನ್ನು ಸಮರ್ಥವಾಗಿ ಹೊರಹಾಕುತ್ತವೆ. ಇಲ್ಲಿ ರಾಗವೇ ಪ್ರಕೃತಿ ಮತ್ತು ಸಾಧಕ ನಿಮಿತ್ತನಷ್ಟೆ. 

ಕಣಾದ ರಾಘವ

Advertisement

Udayavani is now on Telegram. Click here to join our channel and stay updated with the latest news.

Next