Advertisement
ಎಲ್ಲೆಲ್ಲಿ ಸಮಸ್ಯೆ?ಸರ್ವಿಸ್ ರಸ್ತೆ ಪಕ್ಕದಲ್ಲಿ ಚರಂಡಿಯಿದ್ದರೂ ಉಚ್ಚಿಲ – ಪಣಿಯೂರು ರಸ್ತೆ, ಉಚ್ಚಿಲ ಪೇಟೆ, ಪೊಲ್ಯ ರಸ್ತೆಯಿಂದ ಬದ್ದಿಂಜೆ ಮಠದವರೆಗಿನ ಸರ್ವಿಸ್ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದೆ. ಉಚ್ಚಿಲ – ಮೂಳೂರು ಡೈವರ್ಷನ್ ಬಳಿಯ ಕುಂಜೂರು ಆಟೋಮೊಬೈಲ್ಸ್‌ನ ಮುಂಭಾಗದಲ್ಲಿ ಹೆದ್ದಾರಿಯಲ್ಲೇ ಮಳೆ ನೀರು ನಿಂತು ಸಂಚಾರಕ್ಕೆ ಸಂಚಕಾರವುಂಟಾಗುತ್ತಿದೆ. ಮೂಳೂರು ಪಂಚಮಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಚರಂಡಿ ನಿರ್ಮಾಣವಾಗದೇ ಇರುವುದರಿಂದ ರಸ್ತೆಯಲ್ಲೇ ಮಳೆ ನೀರು ಹರಿದು ಹೋಗುವಂತಾಗಿದೆ.
ಮೂಳೂರಿನಲ್ಲಿರುವ ಡೈವರ್ಷನ್ ಬಳಿ ಮಂಗಳೂರು-ಉಡುಪಿ ರಸ್ತೆಯಲ್ಲಿ ಗ್ಯಾರೇಜ್ ಮುಂಭಾಗದಲ್ಲೇ ಮಳೆ ನೀರು ಸಂಪೂರ್ಣವಾಗಿ ನಿಲ್ಲುತ್ತಿದೆ. ಡೈವರ್ಷನ್‌ನ ಡಿವೈಡರ್‌ನ ಪಕ್ಕದ ಭಾಗವು ತಗ್ಗು ಪ್ರದೇಶದಲ್ಲಿದ್ದು ಮಳೆ ನೀರು ನಿಂತ ಪರಿಣಾಮ ವಾಹನ ಸವಾರರು ಪ್ರಾಣಾಪಾಯದಲ್ಲೇ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಮಳೆ ನೀರಿನ ಮೇಲೆ ಸವಾರರು ವೇಗವಾಗಿ ವಾಹನ ಚಲಾಯಿಸಿಕೊಂಡು ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯೆಂಬಂತಾಗಿದೆ.
ಉಚ್ಚಿಲ ಮತ್ತು ಮೂಳೂರು ನಡುವಿನ ಒಂದು ಕಿ.ಮೀ. ಅಂತರದ ನಡುವಿನ ಹೆದ್ದಾರಿ ಮೇಲಿನ ಪ್ರಯಾಣವು ವಾಹನ ಸವಾರರ ಪಾಲಿಗೆ ಕಂಟಕವಾಗುತ್ತಿದ್ದು ಇನ್ನಾದರೂ ಸ್ಥಳೀಯ ಬಡಾ ಗ್ರಾ.ಪಂ., ಹೆದ್ದಾರಿ ಇಲಾಖೆ, ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರು, ಜಿಲ್ಲಾಡಳಿತವು ಈ ಬಗ್ಗೆ ತುರ್ತಾಗಿ ಸ್ಪಂದಿಸಬೇಕಾಗಿದೆ. ಕಾರಣವೇನು ?
ಹೆದ್ದಾರಿ ಚತುಷ್ಪಥ ಯೋಜನೆ ಕಾಮಗಾರಿಯ ವೇಳೆ ಚರಂಡಿ ನಿರ್ಮಾಣವಾಗಿದೆ ಯಾದರೂ ಅದು ಸಂಪೂರ್ಣ ಅವೈಜ್ಞಾನಿಕ ವೆಂಬಂತಾಗಿದೆ. ಮಳೆ ನೀರು ಹರಿಯಲು ಚರಂಡಿ ನಿರ್ಮಿಸಲಾಗಿದ್ದರೂ ನೀರು ಹರಿದು ಹೋಗಲು ಬಳಕೆಯಾಗುತ್ತಿಲ್ಲ. ನೀರು ಚರಂಡಿಯೊಳಗೆ ಹೋಗಲು ಸರಿಯಾದ ತೂತುಗಳನ್ನೇ ಇಡಲಾಗಿಲ್ಲ.