Advertisement

ಮಳೆ ನೀರು ಸದ್ಬಳಕೆಗೆ ಕಲ್ಯಾಣಿಗಳ ಜೀರ್ಣೋದ್ಧಾರ ಅಗತ್ಯ

10:02 PM Jun 23, 2019 | Lakshmi GovindaRaj |

ಚಿಕ್ಕಬಳ್ಳಾಪುರ: ತೀವ್ರ ಬರಗಾಲಕ್ಕೆ ತುತ್ತಾಗಿರುವ ತಾಲೂಕಿನಲ್ಲಿ ಮಳೆ ನೀರನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಕುಸಿದಿರುವ ಅಂತರ್ಜಲ ಹೆಚ್ಚಳಕ್ಕೆ ಕಲ್ಯಾಣಿಗಳ ಪುನಶ್ಚೇತನ ಅಗತ್ಯ ಎಂದು ತಾಲೂಕಿನ ಮಂಚನಬಲೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ತಿಳಿಸಿದರು.

Advertisement

ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ರುದ್ರ ದೇವಸ್ಥಾನ ಸಮೀಪ ಇರುವ ಕಲ್ಯಾಣಿ ಸ್ವಚ್ಛತೆ ಚಾಲನೆ ನೀಡಿ ಮಾತನಾಡಿದ ಅವರು, ಪೂರ್ವಿಕರು ನಿರ್ಮಿಸಿದ್ದ ಜಲಮೂಲಗಳನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿದೆ ಎಂದರು.

ಕೈಜೋಡಿಸಿ: ಸಮುದಾಯದ ಹಿತ ಕಾಯುವ ಕೆರೆ, ಕಲ್ಯಾಣಿಗಳ ಸಂರಕ್ಷಣೆ ಹಾಗೂ ಪುನಶ್ಚೇತನಗೊಳಿಸುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ. ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೈಜೋಡಿಸಿ ಇವುಗಳ ರಕ್ಷಣೆಗೆ ಮುಂದಾಗಬೇಕು ಎಂದರು.

ಮಳೆ ನೀರು ಶೇಖರಣೆ: ಪ್ರತಿಯೊಂದು ಕಲ್ಯಾಣಿಗಳಲ್ಲಿನ ಗಿಡಗಂಟಿಗಳು ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ ಹೂಳು ಎತ್ತಬೇಕಿದ್ದು, ಈ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕಲ್ಯಾಣಿಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಕಲ್ಯಾಣಿಗಳು ಪುನಶ್ಚೇತನವಾದರೆ ಮಳೆ ನೀರು ಶೇಖರಣೆಗೆ ಅನುಕೂಲವಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಗೊಳ್ಳುತ್ತದೆ ಎಂದರು.

ಸಾರ್ವಜನಿಕರಿಗೆ ಅನುಕೂಲ: ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ಸ್ಥಳೀಯ ಸಂಪನ್ಮೂಲಗಳ ಬಳಕೆ ನಮ್ಮೆಲ್ಲರ ಕರ್ತವ್ಯ. ಅದರಂತೆ ಈ ಸಂಪನ್ಮೂಲಗಳು ಅವನತಿಯ ಅಂಚಿನಲ್ಲಿದ್ದಾಗ ಅವುಗಳನ್ನು ಸಂರಕ್ಷಿಸಿ ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರದ್ದು.

Advertisement

ಎಲ್ಲೆಡೆ ನೀರಿನ ಅಭಾವ ತಲೆದೋರಿದ್ದು, ಅದಕ್ಕೆ ಪರ್ಯಾಯ ಮಾರ್ಗವಾಗಿ ಪಂಚಾಯಿತಿ ಮಟ್ಟದಲ್ಲಿರುವ ಕಲ್ಯಾಣಿಗಳನ್ನು ಜೀರ್ಣೋದ್ಧಾರಗೊಳಿಸಿ ಮಳೆ ನೀರು ಶೇಖರಣೆಗೆ ಅನುವು ಮಾಡಿಕೊಟ್ಟಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಬಸವರಾಜಪ್ಪ, ಮಧು, ರಮೇಶ್‌, ಪಿ.ಎನ್‌.ನಾಗರಾಜ್‌, ಗ್ರಾಮಸ್ಥರಾದ ಶಿವನಂಜಯ್ಯ, ಚಂದ್ರಶೇಖರಯ್ಯ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಡೀಸಿ, ಸಿಇಒ ನಮಗೆ ಸ್ಫೂರ್ತಿ: ಜಿಲ್ಲಾದ್ಯಂತ ಪಾಳು ಬಿದ್ದಿರುವ ಕಲ್ಯಾಣಿಗಳ ಸ್ವಚ್ಛತಾ ಅಭಿಯಾನದ ಜೊತೆಗೆ ಅವು ಪುನಶ್ಚೇತನ ಕಾರ್ಯ ನಡೆಯಬೇಕಾದರೆ ಜಿಲ್ಲಾಡಳಿತ ಕಾರಣ. ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಪಂ ಸಿಇಒ ಗುರುದತ್‌ ಹೆಗಡೆರವರು ಕೈಗೊಂಡ ಈ ವಿನೂತನ ಕಾರ್ಯಕ್ರಮದಿಂದ ನಾವು ಪ್ರೇರಣೆ ಪಡೆದು ನಮ್ಮ ಗ್ರಾಮದ ಕಲ್ಯಾಣಿಗಳ ಸ್ವಚ್ಛತೆಗೆ ನಾವು ಮುಂದಾಗಿದ್ದೇವೆ ಎಂದು ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next