ಹೊಸದಿಲ್ಲಿ: ಪ್ರಸಕ್ತ ವರ್ಷ ದೇಶಕ್ಕೆ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಎಲ್ ನಿನೋ ಕಾರಣದಿಂದ ಹೀಗಾಗ ಲಿದೆ. ಜತೆಗೆ ಶೇ. 20ರಷ್ಟು ಬರಗಾಲ ಉಂಟಾಗುವ ಸಾಧ್ಯತೆಯೂ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಸೋಮವಾರ ಮುನ್ಸೂಚನೆ ನೀಡಿದೆ. ಹಿಂದಿನ ನಾಲ್ಕು ವರ್ಷಗಳ ಕಾಲ ಸತತವಾಗಿ ದೇಶಕ್ಕೆ ಸಾಮಾನ್ಯ ಮುಂಗಾರು ಲಭ್ಯವಾಗಿತ್ತು.
ಪ್ರಸಕ್ತ ವರ್ಷದ ಬೇಸಗೆಯಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ತಾಪಮಾನ ಇರುವ ಸಂದರ್ಭದಲ್ಲಿಯೇ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂಬ ವರದಿ ಕೃಷಿ ಕ್ಷೇತ್ರದಲ್ಲಿ ಆತಂಕ ತಂದೊಡ್ಡುವ ಸಾಧ್ಯತೆಗಳಿವೆ.
ಜೂನ್‌ನಿಂದ ಸೆಪ್ಟಂಬರ್ ವರೆಗಿನ ಮುಂಗಾರು ಹಂಗಾಮಿನಲ್ಲಿ ಸರಿಸುಮಾರು 868.6 ಮಿಲಿಮೀಟರ್ ಮಳೆಯಾಗಲಿದೆ. ಅಂದರೆ ಶೇ. 94 ಮಾತ್ರ ಮಳೆ ಸುರಿಯಲಿದೆ. ದೇಶದ ಉತ್ತರ ಮತ್ತು ಕೇಂದ್ರ ಭಾಗದ ಪ್ರದೇಶಗಳಿಗೆ ಮಳೆ ಕೊರತೆಯಾಗುವ ಸಾಧ್ಯತೆಗಳು ಇವೆ. ಜುಲೈಯಿಂದ ಆಗಸ್ಟ್ ಅವಧಿಯಲ್ಲಿ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಸ್ಕೈಮೆಟ್ ವರದಿಯಲ್ಲಿ ತಿಳಿಸಿದೆ. ಜೂನ್‌ನಲ್ಲಿ 165.3 ಮಿ.ಮೀ. ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ ಇನ್ನೂ ಅಧಿಕೃತ ವರದಿಯನ್ನು ಬಿಡುಗಡೆ ಮಾಡಿಲ್ಲ.
ಏನಿದು ಎಲ್ ನಿನೋ?
ದಕ್ಷಿಣ ಅಮೆರಿಕದ ಸಮೀಪ ಶಾಂತಿ ಮಹಾಸಾಗರದ ಸಮಭಾಜಕ ಪ್ರದೇಶದಲ್ಲಿ ನೀರು ಬಿಸಿಯಾಗುವ ಪ್ರಕ್ರಿಯೆಯೇ ಎಲ್ ನಿನೋ. ಅದು ಪ್ರತೀ 2ರಿಂದ 7 ವರ್ಷಗಳಿಗೊಮ್ಮೆ ಉಂಟಾಗುತ್ತದೆ.