Advertisement
ಭಾರೀ ಮಳೆ ಸುರಿಯುತ್ತಿದ್ದ ಕರಾವಳಿಯಲ್ಲಿ ಬಿರುಸು ತಗ್ಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆ.13ರ ವರೆಗೆ ಎಲ್ಲೋ ಅಲರ್ಟ್ ನೀಡಲಾಗಿದೆ.
Related Articles
Advertisement
ಅಪಾರ ಹಾನಿಗೈದ ವರುಣಾರ್ಭಟಕ್ಕೆ ಕೊಂಚ ಬಿಡುವು
ಬೆಂಗಳೂರು: ರಾಜ್ಯದ ಹಲವೆಡೆ ನಿರಂತರ ಸುರಿಯುತ್ತಿದ್ದ ಮಳೆ ಮಂಗಳವಾರ ಕೊಂಚ ಬಿಡುವು ನೀಡಿತ್ತು. ವ್ಯಾಪಕ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಘಟಪ್ರಭಾ ನದಿಗೆ ಹರಿದು ಬರುತ್ತಿರುವ ನೀರಿನ ಮಟ್ಟ ಹೆಚ್ಚಾಗಿ ತಾಲೂಕಿನ ನಾಲ್ಕು ಸೇತುವೆಗಳು ಮಂಗಳವಾರ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು.
ಈ ನಡುವೆ ಎಡಬಿಡದೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿ ರೈತ ಕಂಗೆಟ್ಟಿದ್ದಾನೆ. ಕಬಿನಿ ಜಲಾಶಯದಿಂದ ಹೊರಬಿಟ್ಟಿರುವ ಹೆಚ್ಚುವರಿ ನೀರಿನಿಂದಾಗಿ ಕಪಿಲಾ ನದಿ ಪಾತ್ರದ ಗ್ರಾಮಗಳು, ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಈಗಾಗಲೇ ಕಪಿಲಾ ನದಿ ಮೈದುಂಬಿ ಹರಿಯತೊಡಗಿದೆ. ಐತಿಹಾಸಿಕ ಹದಿನಾರು ಕಾಲು ಮಂಟಪ ಅರ್ಧಕ್ಕಿಂತ ಹೆಚ್ಚು ಮುಳುಗಿದ್ದು, ಪರಶುರಾಮ ದೇಗುಲದ ಸುತ್ತಲಿನ ಪ್ರದೇಶವನ್ನು ಕಪಿಲೆ ಸುತ್ತುವರಿಯತೊಡಗಿದೆ. ಇದರಿಂದ ಶ್ರಾವಣ ಮಾಸದ ಪೂಜೆ ನಿಷೇಧಿಸಲಾಗಿದೆ. ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಚಿಕ್ಕಕೆರೆ ಕೋಡಿ ನೀರಿನಲ್ಲಿ ಅಪರಿಚಿತ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾನೆ.
ಕಬಿನಿ ಡ್ಯಾಂನಿಂದ 43 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಎಚ್.ಡಿ. ಕೋಟೆ: ಕೇರಳದ ವೈನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಕಪಿಲಾ ನದಿಗೆ ಬಿಡಲಾಗುತ್ತಿರುವ ಹೆಚ್ಚುವರಿ ನೀರಿನ ಪ್ರಮಾಣ ಮತ್ತಷ್ಟು ಏರಿಸಲಾಗಿದೆ. ಜಲಾಶಯದ 4 ಕ್ರಸ್ಟ್‌ಗೇಟ್‌ಗಳ ಮೂಲಕ ಮಂಗಳವಾರ ಮಧ್ಯಾಹ್ನದಿಂದ 43 ಸಾವಿರ ಕ್ಯೂಸೆಕ್ ನೀರು ಕಪಿಲಾ ನದಿಗೆ ಹರಿಯಬಿಡಲಾಗಿದೆ. ಅಪಾರ ಪ್ರಮಾಣದ ನೀರು ಹೊರ ಬಿಟ್ಟಿರುವುದರಿಂದ ಜಲಾಶಯದ ಕ್ರಸ್ಟ್‌ಗೇಟ್ ತಳಭಾಗದ ಬಿದರಹಳ್ಳಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಬೀಚನಹಳ್ಳಿ, ಬಿದರಳ್ಳಿ, ಕೆಂಚನಹಳ್ಳಿ, ಎನ್.ಬೇಗೂರು, ಬೀರಂಬಳ್ಳಿ ಭಾಗದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮೂಡಲಗಿ: ನಾಲ್ಕು ಸೇತುವೆ
ಜಲಾವೃತ-ಸಂಚಾರ ಸ್ಥಗಿತ
ಮೂಡಲಗಿ: ಪಶ್ಚಿಮಘಟ್ಟ ಹಾಗೂ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಘಟಪ್ರಭಾ ನದಿಗೆ ಹರಿದು ಬರುತ್ತಿರುವ ನೀರಿನ ಮಟ್ಟ ಹೆಚ್ಚಾಗಿ ತಾಲೂಕಿನ ನಾಲ್ಕು ಸೇತುವೆಗಳು ಮಂಗಳವಾರ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ಸೇರಿ ಘಟಪ್ರಭಾ ನದಿಗೆ ಒಟ್ಟು 17,000 ಕ್ಯೂಸೆಕ್ ನೀರು ಬರುತ್ತಿದೆ. ಘಟಪ್ರಭಾ ನದಿಯ ನೀರಿನ ಮಟ್ಟ ಏರಿಕೆಯಾಗಿ ತಾಲೂಕಿನ ಅವರಾದಿ ಹಾಗೂ ಮಹಾಲಿಂಗಪೂರಕ್ಕೆ ಸಂಪರ್ಕ ಕಲ್ಪಿಸುವ ಅವರಾದಿ ಸೇತುವೆ, ಸುಣಧೋಳಿ ಹಾಗೂ ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸುಣಧೋಳಿ ಸೇತುವೆ, ವಡೇರಹಟ್ಟಿ ಹಾಗೂ ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ವಡೇರಹಟ್ಟಿ ಸೇತುವೆ, ಕಮಲದಿನ್ನಿ ಹಾಗೂ ಹುಣಶ್ಯಾಳ ಪಿವೈಗೆ ಸಂಪರ್ಕ ಕಲ್ಪಿಸುವ ಕಮಲದಿನ್ನಿ ಸೇತುವೆಗಳು ಜಲಾವೃತಗೊಂಡಿದ್ದು ಸಂಚಾರ ಸ್ಥಗಿತಗೊಂಡು ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.