Advertisement

ಮತ್ತೆ ನಗರದಲ್ಲಿ ಹಿಂಗಾರು ಮಳೆ

11:36 AM Nov 08, 2017 | |

ಬೆಂಗಳೂರು: ನಗರದಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಬರೀ ಮೋಡಕವಿದ ವಾತಾವರಣಕ್ಕೆ ಸೀಮಿತವಾಗಿದ್ದ ಹಿಂಗಾರು ಮಳೆ, ಮಂಗಳವಾರ ಸಂಜೆ ಅಬ್ಬರಿಸಿತು. ಇದರಿಂದ ಕೆಲವೆಡೆ ಸಂಚಾರದಟ್ಟಣೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಸಂಜೆ 5ರ ಸುಮಾರಿಗೆ ಶುರುವಾದ ಮಳೆ ಒಂದು ತಾಸು ಧಾರಾಕಾರವಾಗಿ ಸುರಿಯಿತು.

Advertisement

ಪರಿಣಾಮ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿ ಒಂದು ಮರ ಬಿದ್ದು, ವಾಹನ ಸಂಚಾರಕ್ಕೆ ಅಡತಡೆ ಉಂಟಾಯಿತು. ಪೀಕ್‌ ಅವರ್‌ನಲ್ಲಿ ಮುಖ್ಯರಸ್ತೆಯಲ್ಲೇ ಮರ ಬಿದ್ದಿದ್ದರಿಂದ ಕೆಲಹೊತ್ತು ವಾಹನ ಸವಾರರು ಪರದಾಡಿದರು. ಇದರಿಂದ ಒಂದು ಮಾರ್ಗದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ನಂತರ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮರ ತೆರವುಗೊಳಿಸಿದರು. 

ಅದೇ ರೀತಿ, ಓಕಳೀಪುರ ಜಂಕ್ಷನ್‌, ಶೇಷಾದ್ರಿಪುರ ಜಂಕ್ಷನ್‌, ಮಡಿವಾಳ ಮತ್ತಿತರ ಕಡೆಗಳಲ್ಲಿ ಮಳೆ ನೀರಿನ ಹರಿವು ನಿಧಾನವಾಗಿತ್ತು. ಹಾಗಾಗಿ, ವಾಹನಗಳ ಸಂಚಾರ ಕೂಡ ನಿಧಾನವಾಗಿತ್ತು. ಈ ಮಧ್ಯೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಮಂಗಳವಾರ ಗರಿಷ್ಠ ತಾಪಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಕಡಿಮೆ ದಾಖಲಾಗಿದ್ದು, ಗರಿಷ್ಠ 26.0 ಹಾಗೂ ಕನಿಷ್ಠ 19.7 ಡಿಗ್ರಿ ಸೆಲ್ಸಿಯಸ್‌ ಇತ್ತು.   ನಗರದಲ್ಲಿ ಸುಮಾರು 17ರಿಂದ 20 ಮಿ.ಮೀ. ಮಳೆ ದಾಖಲಾಗಿದೆ.

ಇಂದೂ ಮಳೆ?
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ನಗರ ಸೇರಿದಂತೆ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮೋಡಕವಿದ ವಾತಾವರಣ ಹಾಗೂ ಅಲ್ಲಲ್ಲಿ ಚದುರಿದ ಮಳೆಯಾಗಿದೆ. ಇದು ಇನ್ನೂ ಎರಡು ದಿನಗಳು ಮುಂದುವರಿಯುವ ಸಾಧ್ಯತೆ ಇದೆ. ಹಿಂಗಾರಿನಲ್ಲಿ ಈ ರೀತಿಯ ವಾತಾವರಣ ಸರ್ವೇಸಾಮಾನ್ಯ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್‌.ಎಂ. ಮೇತ್ರಿ ತಿಳಿಸಿದ್ದಾರೆ. 

ಚಳಿಗೆ ಶೀತಗಾಳಿ ಕಾರಣ
ನಗರದಲ್ಲಿ ಮೋಡಕವಿದ ವಾತಾವರಣ ಚಳಿಯನ್ನು ಸೃಷ್ಟಿಸಿದೆ. ಇದಕ್ಕೆ ಕಾರಣ ಹಿಂಗಾರು ಮಾರುತಗಳು ಉತ್ತರ ದ್ರುವದಿಂದ ಬರುವುದರಿಂದ ಶೀತಗಾಳಿಯನ್ನೂ ತರುತ್ತಿವೆ. ಹೀಗಾಗಿ, ಚಳಿಯ ಅನುಭವ ಆಗುತ್ತಿದೆ ಎಂದು ಹವಾಮಾನ ತಜ್ಞ ಡಾ.ಎಂ.ಬಿ. ರಾಜೇಗೌಡ ಹೇಳುತ್ತಾರೆ.

Advertisement

ಸಾಮಾನ್ಯವಾಗಿ ಹಿಂಗಾರು ಅಕ್ಟೋಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರವೇಶಿಸುತ್ತದೆ. ಆದರೆ, ಈ ಬಾರಿ ಕೊನೆಯ ವಾರದಲ್ಲಿ ಹಿಂಗಾರು ಮಾರುತಗಳ ಪ್ರವೇಶ ಆಯಿತು. ಈ ಮಧ್ಯೆ ಅಕ್ಟೋಬರ್‌ ಮಧ್ಯದವರೆಗೂ ಮಳೆಯಾಗಿದ್ದರಿಂದ ವಾತಾವರಣದಲ್ಲಿ ಹೆಚ್ಚು ಒತ್ತಡ ಪ್ರದೇಶ ಉಂಟಾಯಿತು.

ಪರಿಣಾಮ ಬಂಗಾಳಕೊಲ್ಲಿಯಿಂದ ಬರುವ ಮಾರುತಗಳು ದಕ್ಷಿಣ ಒಳನಾಡಿನಲ್ಲಿ ಹಾದುಹೋಗುವಾಗ, ಇಲ್ಲಿ ಮಳೆ ಸುರಿಸದೆ ಶ್ರೀಲಂಕ ಮೂಲಕ ಅರಬ್ಬಿ ಸಮುದ್ರ ಸೇರಿದವು. ನವೆಂಬರ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದೂ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next