ಹೊಸದಿಲ್ಲಿ: ಸದ್ಯ ಬೆಂಗಳೂರು ಸೇರಿದಂತೆ ಕರ್ನಾಟಕ ಮತ್ತು ದೇಶದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಬಂದಿದೆ. ಹೀಗಾಗಿ, ವಾ ಎಂಥ ಮಳೆಗಾಲ ಎಂದು ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ. ಆದರೆ ವಾಸ್ತವ ಬೇರೆಯೇ ಇದೆ. ಇನ್ನೇನು ಮೂರು ವಾರಗಳಲ್ಲಿ ಹಾಲಿ ಹಂಗಾಮಿನ ನೈಋತ್ಯ ಮುಂಗಾರು ಮುಕ್ತಾಯವಾಗಲಿದೆ. ನಂತರದ ದಿನಗಳಲ್ಲಿ ಕರ್ನಾಟಕ ಸೇರಿದಂತೆ 17 ರಾಜ್ಯಗಳ 225 ಜಿಲ್ಲೆಗಳಲ್ಲಿ ಬರಗಾಲ ಕಾಣಿಸಿಕೊಳ್ಳಲಿದೆ. ಹೀಗೆಂದು ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಕೃಷಿ ಮತ್ತು ಬರಗಾಲ ಪರಿಶೀಲನಾ ವ್ಯವಸ್ಥೆ (ಎನ್‌ಎಡಿಎಎಂಎಸ್) ಎಚ್ಚರಿಕೆ ನೀಡಿದೆ.
ಹೆಚ್ಚು ಪರಿಣಾಮ ಎದುರಿಸುವ ರಾಜ್ಯಗಳೆಂದರೆ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಂಜಾಬ್. ಈಗಾಗಲೇ ಈ ರಾಜ್ಯಗಳಲ್ಲಿ ಪರಿಸ್ಥಿತಿ ಉತ್ತಮವೇನೂ ಇಲ್ಲ. ಹೀಗಿದ್ದಾಗಿಯೂ ಆಯಾ ರಾಜ್ಯ ಸರಕಾರಗಳು ರೈತರ ಸಾಲ ಮನ್ನಾ ಮಾಡಿ ಅದನ್ನು ಪಾವತಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ.
ದೇಶಾದ್ಯಂತ ಸುರಿದ ಮಳೆ ಮತ್ತು ಅದರ ಪ್ರಭಾವದ ವರದಿಯನ್ನು ಈ ತಿಂಗಳಲ್ಲೇ ಬಿಡುಗಡೆ ಮಾಡಲಾಗುತ್ತದೆ. ಜುಲೈನಲ್ಲಿ ಸುರಿದ ಮಳೆ ಆಧರಿಸಿ ಆಗಸ್ಟ್‌ನಲ್ಲಿ ವರದಿ ಬಿಡುಗಡೆ ಮಾಡಲಾಗಿತ್ತು. ಅದರ ಪ್ರಕಾರ 104 ಜಿಲ್ಲೆಗಳಲ್ಲಿ ಬರಗಾಲದ ಸ್ಥಿತಿ ಉಂಟಾಗಬಹುದು ಎಂದು ಅಂದಾಜಿಸಲಾಗಿತ್ತು. ರಾಷ್ಟ್ರೀಯ ಬೆಳೆ ಮುನ್ಸೂಚನಾ ಕೇಂದ್ರ (ಎನ್‌ಸಿಎಫ್ಸಿ)ದ ನಿರ್ದೇಶಕ ಎಸ್.ಎಸ್.ರಾಯ್ ಹೇಳುವ ಪ್ರಕಾರ ದೇಶಾದ್ಯಂತ ಉತ್ತಮವಾಗಿಯೇ ಮಳೆಯಾಗಿದೆ. ಆದರೆ ಒಣ ಹವೆಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಎನ್‌ಸಿಎಫ್ಸಿ ಸಂಗ್ರಹಿಸಿದ ಮಾಹಿತಿ ಪ್ರಕಾರ, ಹೆಚ್ಚು ಆಹಾರ ಬೆಳೆಯುವ ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ಮತ್ತು ಹರ್ಯಾಣದಲ್ಲಿನ ಜಿಲ್ಲೆಗಳು ಹೆಚ್ಚು ಬಾಧಿತವಾಗಿವೆ. ಇನ್ನುಳಿದಂತೆ ಕರ್ನಾಟಕ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ತೆಲಂಗಾಣ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲಿನ ಜಿಲ್ಲೆಗಳೂ ಬರದ ಛಾಯೆ ಅನುಭವಿಸುತ್ತಿವೆ.
ಉತ್ಪಾದನೆಗೆ ತೊಂದರೆ ಇಲ್ಲ
ಕೇಂದ್ರ ಕೃಷಿ ಸಚಿವಾಲಯ ಹೇಳಿಕೊಳ್ಳುವಂತೆ ಇದರಿಂದ ಒಟ್ಟಾರೆ ಆಹಾರ ಉತ್ಪಾದನೆಗೆ ತೊಂದರೆಯಾಗಲಾರದು. ಆದರೆ ಕಳೆದ ಶುಕ್ರವಾರ ಬಿಡುಗಡೆ ಮಾಡಿದ ದೇಶಾ ದ್ಯಂತದ ಬೀಜ ಬಿತ್ತನೆ ಪ್ರದೇಶದ ಮಾಹಿತಿ ಗಮನಿಸಿದರೆ ಶೇ.3ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಸಾಧ್ಯವೇ ಇಲ್ಲ
ಬೇಳೆ ಕಾಳುಗಳನ್ನು ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ. ಅದೂ ರೈತರ ಹಿತದೃಷ್ಟಿಯನ್ನು ಕಡೆಗಣಿಸಿ ಇಂಥ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ, ಶೇ.3ರಷ್ಟು ಕೊರತೆಯಾಗಲಿದೆ ಎಂಬ ಕೇಂದ್ರದ ವಾದವನ್ನು ಒಪ್ಪಿಕೊಳ್ಳಲಾಗದು ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ಆಹಾರ ಭದ್ರತೆಯನ್ನು ಅದು ಕಾಪಾಡಿದರೂ ರೈತರ ಹಿತವನ್ನು ಅದು ಕಡೆಗಣಿಸುತ್ತದೆ ಎಂಬ ವಾದ ಅವರದ್ದು.
ರೈತರ ಪ್ರತಿಭಟನೆ
ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಮಧ್ಯಪ್ರದೇಶ ದಲ್ಲಿ ರೈತರ ಪ್ರತಿಭಟನೆ ವೇಳೆ ಗೋಲಿಬಾರ್ ನಡೆದಿದ್ದರಿಂದ ಇಬ್ಬರು ರೈತರು ಅಸುನೀಗಿದ್ದರು.