ಅನೇಕ ಕಡೆಗಳಲ್ಲಿ ಮರಗಳು ಧರೆಗೆ ಉರುಳಿದ್ದು, ವಿದ್ಯುತ್ ಕಂಬ ಮುರಿತ ಸಹಿತ ಹಾನಿ ಉಂಟಾಗಿದೆ. ಮಂಗಳೂರು, ಪುಂಜಾಲಕಟ್ಟೆ, ಬಂಟ್ವಾಳ, ಮಡಂತ್ಯಾರು, ವಿಟ್ಲ, ಸುಳ್ಯ, ಐವರ್ನಾಡು, ಐನಕಿದು, ಸೋಣಂಗೇರಿ, ವೇಣೂರು, ಕಾವಳಮೂಡೂರು, ನೆಲ್ಲಿಗುಡ್ಡೆ ಪ್ರದೇಶದಲ್ಲಿ ಗುಡುಗು ಮಿಂಚು ಮಳೆಯಾಗಿದೆ.
Advertisement
ಉಳ್ಳಾಲ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ದೇರಳ ಕಟ್ಟೆಯ ಕ್ಷೇಮ ಆಸ್ಪತ್ರೆಯ ಬಳಿ ನಡೆಯುತ್ತಿರುವ ರಸ್ತೆ ಚತುಷ್ಪಥ ಕಾಮಗಾರಿಗೆ ಹಾಕಿರುವ ಮಣ್ಣಿನಲ್ಲಿ ವಾಹನಗಳು ಹೂತು ಹೋಗಿ ಸಂಚಾರದಲ್ಲಿ ವ್ಯತ್ಯಯವಾಯಿತು.
ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಗಾಳಿ ಮಳೆಯಿಂದ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಅಪಾರ ಕೃಷಿ ನಾಶವಾಗಿದೆ. ಕೊಕ್ಕಡ ಗ್ರಾಮದ ಹೂವಿನಕೊಪ್ಪಲ ಬಳಿ ವಿ.ಜೆ. ನೋಬೆಲ್ ಎಂಬವರು ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಕಾರಿಗೆ ಹಾನಿಯಾಗಿದೆ. ಪೊಟ್ಲಡ್ಕ ಬಳಿ ವಿದ್ಯುತ್ ಕಂಬ ಬಿದ್ದು ರಸ್ತೆ ತಡೆಯಾಗಿದೆ.
Related Articles
ಕೊಕ್ಕಡ ಹಳ್ಳಿಂಗೇರಿ ಸಮೀಪದ ಅಡೈ ಎಂಬಲ್ಲಿ ಕುಶಾಲಪ್ಪ ಗೌಡರ ಮನೆಯಲ್ಲಿ ಎ.9ರಂದು ಮದುವೆ ಇದ್ದು, ರವಿವಾರ ಸಂಜೆ ಪೂಜೆ ನಡೆಯುತ್ತಿದ್ದಾಗಲೇ ಮಾವಿನ ಮರ ಬಿದ್ದು ಮನೆಗೆ ಹಾನಿ ಸಂಭವಿಸಿದ್ದು, ಸೇರಿದ್ದ ಜನರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮರದಡಿಯಲ್ಲಿ ನಿಲ್ಲಿಸಿದ್ದ ಬೈಕ್ಗಳೆರಡು ಸಂಪೂರ್ಣ ನುಜ್ಜುಗುಜ್ಜಾಗಿವೆ.
Advertisement
ಅಡೈ ಸಮೀಪದ ದೇರಾಜೆ ಎಂಬಲ್ಲಿ ಪಾರ್ವತಿ ಎಂಬವರ ಮನೆಯ ಸಿಮೆಂಟ್ ಶೀಟುಗಳು ಸಂಪೂರ್ಣ ಹಾರಿ ಹೋಗಿದ್ದು ಮನೆಯ ಹೊರಗೆ ಬರುವ ವೇಳೆ ಶೀಟ್ ಬಿದ್ದು ಕೈಗೆ ಗಾಯವಾಗಿದೆ. ಗಾಣದಕೊಟ್ಟಿಗೆ ಸಂದೇಶ್ ಅವರ ಕೊಟ್ಟಿಗೆಗೆ ಅಳವಡಿಸಲಾಗಿದ್ದ ಶೀಟ್ಗಳು ಪೈಪ್ ಸಹಿತ ಹಾರಿ ಹೋಗಿವೆ. ಅನಿರೀಕ್ಷಿತವಾಗಿ ಬೀಸಿದ ಗಾಳಿಯಿಂದ ಕೃಷಿ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟವುಂಟಾಗಿದೆ.