ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರವೂ ಮಳೆ ಮುಂದುವರಿದಿದ್ದು, ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೋಡಗಳ ನಡುವಿನ ಅಂತರದಿಂದ ಗಾಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಪರಿಣಾಮ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ.
ಇನ್ನೂ ಎರಡು ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದರು.
ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಮಂಗಳವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಸೋಮವಾರ ಕೊಡಗಿನಲ್ಲಿ 42 ಹಾಗೂ ಹಾಸನದಲ್ಲಿ 40 ಮಿ.ಮೀ. ಮಳೆಯಾಗಿದೆ. ಉಳಿದಂತೆ ಮೈಸೂರು 31, ಚಿಕ್ಕಮಗಳೂರು 27, ಚಾಮರಾಜನಗರ 19, ಬೆಂಗಳೂರು ಗ್ರಾಮಾಂತರ 16.50, ರಾಮನಗರ 10.50, ತುಮಕೂರು 9.10, ಧಾರವಾಡ 7.50, ದಕ್ಷಿಣ ಕನ್ನಡ 3.50, ಚಿಕ್ಕಬಳ್ಳಾಪುರದಲ್ಲಿ 3 ಮಿ.ಮೀ. ಮಳೆಯಾಗಿದೆ.