Advertisement

ಜೋಳ ಬಿತನೆಗೆ ಅವಕಾಶ ನೀಡಿದ ಮಳೆ

11:24 AM Oct 18, 2018 | |

ಕಲಬುರಗಿ: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಳೆ ಬುಧವಾರ ಬೆಳಗಿನ ಜಾವ ಜಿಲ್ಲೆಯಾದ್ಯಂತ ಅಲ್ಪ ಪ್ರಮಾಣದಲ್ಲಿ ಸುರಿದಿದ್ದರಿಂದ ಹಿಂಗಾರಿನ ಪ್ರಮುಖ ಬೆಳೆಯಾಗಿರುವ ಜೋಳ ಬಿತ್ತನೆಗೆ ಸ್ವಲ್ಪ ಅವಕಾಶ ನೀಡಿದ್ದರೆ, ತೇವಾಂಶವಿಲ್ಲದೇ ಒಣಗುತ್ತಿದ್ದ ತೊಗರಿಗೆ ಆಸರೆಯಾಗಿದೆ.

Advertisement

ಹಿಂಗಾರು ಹಂಗಾಮಿನ ಉತ್ತರಿ ಮಳೆ ಸೆಪ್ಟೆಂಬರ್‌ 13ರಂದು ಆರಂಭವಾಗಿದ್ದರೂ ತದನಂತರದ ಹಸ್ತಿ ಮಳೆ ಸುರಿದಿರಲಿಲ್ಲ. ಬುಧವಾರ ಸುರಿದ ಮಳೆ ಚಿತ್ತಿಯಾಗಿದೆ. ಈ ಮಳೆ ಕಾಲಾವಧಿ ಇದೇ ಅಕ್ಕೋಬರ್‌ 24ರ ವರೆಗೆ ಇರುತ್ತದೆ. ಸ್ವಾತಿ ಮಳೆಯು ಅಕ್ಕೋಬರ್‌ 24ರಂದು ಪ್ರಾರಂಭವಾಗುತ್ತದೆ. ವಿಜಯದಶಮಿ ಹಬ್ಬದಂದು  ಹಾಗೂ ಸ್ವಾತಿ ಮಳೆಯೂ ಬರಲಿದೆಎನ್ನಲಾಗುತ್ತಿದೆ.

ಜೋಳ ಬಿತ್ತನೆ ಇಷ್ಟೋತ್ತಿಗೆ ಮುಗಿಯಬೇಕಿತ್ತು. ಕಡಲೆಯಂತು ಈಗಾಗಲೇ ಸಾಲು-ಸಾಲು ಹರಿಯಬೇಕಿತ್ತು. ಆದರೆ ಮಳೆ ಬಾರದೇ ಭೂಮಿಯಲ್ಲಿ ತೇವಾಂಶವಿಲ್ಲದ ಕಾರಣ ರೈತ ಬಿತ್ತನೆಗೆ ಮುಂದಾಗಿರಲಿಲ್ಲ. ಆದರೆ ಕೆಲವೆಡೆ ಮಳೆ ಬರಬಹುದೆಂಬ ಆಶಾಭಾವನೆಯಿಂದ ಜೋಳ ಬಿತ್ತನೆ ಮಾಡಲಾಗಿದೆ. ಕೆಲವೆಡೆ ಕಡಲೆ ಬಿತ್ತನೆ ಮಾಡಲಾಗಿದ್ದರೂ ತೇವಾಂಶವಿಲ್ಲದ ಕಾರಣ ಬೀಜ ಮೊಳಕೆಯೊಡೆದಿಲ್ಲ. ಆದರೆ ಬುಧವಾರ ಸುರಿದ ಮಳೆ ಜೋಳ ಬಿತ್ತನೆಗೆ ಅವಕಾಶ ನೀಡುವಂತಾದರೆ, ಕಡಲೆ ಮೊಳಕೆಯೊಡಲು ಸಹಕಾರಿಯಾಗಿದೆ.

ಮಂಗಳವಾರ ಸಂಜೆ ಹಾಗೂ ಬುಧವಾರ ಬೆಳಗಿನ ಜಾವ ಜಿಲ್ಲೆಯಾದ್ಯಂತ 22 ಮಿ.ಮೀ ಮಳೆ ಸುರಿದಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 68 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ ಕೇವಲ 28 ಮಿ.ಮೀ ಮಾತ್ರ ಸುರಿದು ಶೇ. 58ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಸರಾಸರಿ 189 ಮಿ.ಮೀ ಮಳೆ ಬರಬೇಕಿತ್ತು. ಆದರೆ ಕೇವಲ 63 ಮಿ.ಮೀ ಮಾತ್ರ ಸುರಿದು ಶೇ. 67ರಷ್ಟು ಮಳೆ ಕೊರತೆಯಾಗಿದೆ.

ಸೆಪ್ಟೆಂಬರ್‌ ತಿಂಗಳಿನಲ್ಲಿ ಮಳೆ ಬಂದಿದ್ದರೆ ಹಿಂಗಾರಿ ಬಿತ್ತನೆಯೂ ಸುಗಮವಾಗುತ್ತಿತ್ತು. ಜತೆಗೆ ಹೈ. ಕ. ವಾಣಿಜ್ಯ ಬೆಳೆ ತೊಗರಿಯೂ ಉತ್ತಮವಾಗಿ ಇಳುವರಿ ಬರಲು ಸಾಧ್ಯವಾಗುತ್ತಿತ್ತು.  ಬುಧವಾರ ಬೆಳಗಿನ ಜಾವ ಸುರಿದ ಮಳೆ ಇನ್ನಷ್ಟು ಪ್ರಮಾಣದಲ್ಲಿ ಬಂದಿದ್ದರೆ ಜೋಳ-ಕಡಲೆ ಬಿತ್ತನೆಗೆ ಯಾವುದೇ ಆತಂಕವಿರಲಿಲ್ಲ. ಏಕೆಂದರೆ ಭೂಮಿ ಕಾದ ಹಂಚಿನಂತಾಗಿದ್ದರಿಂದ ಈ ಮಳೆಯಿಂದ ಭೂಮಿ ಆಳವಾಗಿ ಹಸಿ(ತೇವಾಂಶ)ಯಾಗಿಲ್ಲ. ತೇವಾಂಶ ಕೊರತೆಯಿಂದ ಶೇ. 50 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಹೂವು ಉದುರಿದೆ.

Advertisement

ಆದರೆ ಈ ಮಳೆ ಹೂವು ಉದುರುವುದನ್ನು ನಿಲ್ಲಿಸಬಹುದಾಗಿದೆ. ಹೀಗಾಗಿ ಎಕರೆಗೆ ಕನಿಷ್ಠ ಒಂದು ಕ್ವಿಂಟಲ್‌ ಇಳುವರಿಯಾದರೂ ಬರಬಹುದೆಂಬ ನಿರೀಕ್ಷೆ ರೈತರದ್ದಾಗಿದೆ. ಕಳೆದ ವರ್ಷ ತೊಗರಿ ಎಕರೆಗೆ 6 ರಿಂದ 7 ಕ್ವಿಂಟಲ್‌ ಇಳುವರಿ ಬಂದಿತ್ತು. ಆದರೆ ಈ ವರ್ಷ 1ರಿಂದ 2 ಕ್ವಿಂಟಲ್‌ ಇಳುವರಿ ಬರುವುದು ದುಸ್ತರವಾಗಿದೆ. ಚಿಂಚೋಳಿ, ಸೇಡಂ ಹಾಗೂ ಚಿತ್ತಾಪುರ ತಾಲೂಕಿನಲ್ಲಿ ಸ್ವಲ್ಪ ಪರ್ವಾಗಿಲ್ಲ ಎನ್ನುವಂತೆ ಬೆಳೆ ಇದೆ. ಅಫಜಲಪುರ ಹಾಗೂ ಜೇವರ್ಗಿ ತಾಲೂಕಿನಲ್ಲಿ ಒಂದು ಕ್ವಿಂಟಲ್‌ ಸಹ ಇಳುವರಿ ಬಾರದ ಕೆಟ್ಟ ಪರಿಸ್ಥಿತಿಯಿದೆ.

ಕೈ ಹಿಡಿಯದ ಸೂರ್ಯಕಾಂತಿ: ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿಯೂ ಪ್ರಮುಖ ಬೆಳೆಯಾಗಿದೆ. ಆದರೆ ಮಳೆ ನಾಪತ್ತೆಯಾಗಿದ್ದರಿಂದ ರೈತ ಈ ಸಲ ಸೂರ್ಯಕಾಂತಿ ಬಿತ್ತನೆಗೆ ಮುಂದಾಗಿಲ್ಲ. ಆದರೆ ಮುಂಗಾರು ಹಂಗಾಮಿನಲ್ಲಿ ತೊಗರಿ ನಡುವೆ ಒಂದು ಸಾಲ ಸೂರ್ಯಕಾಂತಿ ಹಾಕಲಾಗಿದ್ದು, ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಾದರೂ ಇಳುವರಿ ಬರುವ ಲಕ್ಷಣಗಳು ಕಂಡು ಬಂದಿವೆ. ಒಟ್ಟಾರೆ ಹಿಂಗಾರು ಮಳೆ ಅಭಾವ ಕುಸುಬೆ, ಗೋಧಿ ಸೇರಿದಂತೆ
ಇತರ ಹಿಂಗಾರು ಬೆಳೆಗಳಿಗೂ ಕುತ್ತು ತಂದಿದೆ. ಎರಡೂಮೂರು ದಿನದೊಳಗೆ ಮಗದೊಮ್ಮೆ ಮಳೆ ಚೆನ್ನಾಗಿ ಬರಲಿದೆ ಎಂಬುದಾಗಿ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಳೆ ಬೀಳುವವರೆಗೂ ಯಾವುದನ್ನು ನಿಶ್ಚಿತವಾಗಿ ಹೇಳುವಂತಿಲ್ಲ ಎನ್ನುವಂತಾಗಿದೆ.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next