Advertisement
ದ.ಕ., ಉಡುಪಿ, ಮೈಸೂರು, ಮಂಡ್ಯ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಧಿಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಗಾರು ಮಳೆ ತರುವ ನೈಋತ್ಯ ಮಾರುತಗಳು ಈ ಹಿಂದೆ ತಿಳಿಸಿರುವಂತೆಯೇ ನಿರ್ದಿಷ್ಟ ಪಥದಲ್ಲಿ ಸಾಗುತ್ತಿವೆ. ಈ ನಡುವೆ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಕೂಡ ಮುಂಗಾರಿಗೆ ಪೂರಕವಾಗಿದೆ ಎಂದು ಇಲಾಖೆ ತಿಳಿಸಿದೆ. ಮುಂಗಾರು ಮಾರುತವು ಪ್ರಸ್ತುತ ಬಂಗಾಲ ಕೊಲ್ಲಿಯಲ್ಲಿದೆ. ಮುಂದಿನ 24 ಗಂಟೆಗಳಲ್ಲಿ ಮಾರುತವು ಮಾಲ್ದೀವ್ಸ್, ಅರಬಿ ಸಮುದ್ರವನ್ನು ಪ್ರವೇಶಿಸಲಿದೆ. ಅನಂತರ ಕೇರಳ ಪ್ರವೇಶಿಸುವುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಅನಂತರ ಇನ್ನಷ್ಟು ತೀವ್ರಗೊಂಡು ತೀವ್ರ ಚಂಡಮಾರುತವಾಗಿ ಬದಲಾಗುವ ಸಂಭವವೂ ಇದೆ. ಚಂಡಮಾರುತವು ಮುಂಗಾರಿಗೆ ಪೂರಕವಾಗಿಯೇ ಇದೆ ಎಂದು ಇಲಾಖೆ ತಿಳಿಸಿದೆ. ಸುಳ್ಯ, ಕಡಬ, ಸುಬ್ರಹ್ಮಣ್ಯ: ಉತ್ತಮ ಮಳೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ರವಿವಾರ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ ಶನಿವಾರ ರಾತ್ರಿ ಮಳೆಯಾಗಿದೆ. ಮಡಂತ್ಯಾರಿನಲ್ಲಿ ತುಂತುರು ಮಳೆ ಕಾಣಿಸಿಕೊಂಡು ಬಳಿಕ ಗುಡುಗು – ಮಿಂಚು ಕೂಡಿದ ಮಳೆಯಾಗಿತ್ತು. ಇನ್ನು ಸುರತ್ಕಲ್, ಬಂಟ್ವಾಳದಲ್ಲಿ ತುಂತುರು ಮಳೆಯಾಗಿದ್ದರೆ, ಸುಳ್ಯ, ಕಡಬ, ಸುಬ್ರಹ್ಮಣ್ಯದಲ್ಲಿ ವರ್ಷಧಾರೆಯಾಗಿದೆ. ಪುತ್ತೂರಿನಲ್ಲಿ ಗುಡುಗು-ಸಿಡಿಲು ಸಹಿತ ಜೋರಾಗಿ ಮಳೆಯಾಗಿದೆ. ಬಜಪೆಯಲ್ಲಿ ಮೋಡ ಕವಿದ ವಾತಾವರಣವಿತ್ತು. ಕಾರ್ಕಳದಲ್ಲಿ ರವಿವಾರ ಬೆಳಗ್ಗೆ ಸಾಧಾರಣ ಮಳೆಯಾದರೆ ಉಡುಪಿಯ ಕೆಲವೆಡೆ ಮಧ್ಯಾಹ್ನದ ವೇಳೆಗೆ ಮಳೆ ಹನಿದಿದೆ.
Related Articles
ಬೆಂಗಳೂರು: ರವಿವಾರ ಮುಂಜಾನೆ 8.30ರ ವರೆಗಿನ 24 ತಾಸುಧಿಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ, ಉತ್ತರ ಒಳನಾಡು ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಯಿತು. ಬೆಂಗಳೂರು ನಗರ ಜಿಲ್ಲೆಯ ಗೋಪಾಲನಗರದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 9 ಸೆಂ.ಮೀ. ಮಳೆ ಸುರಿಯಿತು.
Advertisement
ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು (ಸೆಂ.ಮೀ.ಗಳಲ್ಲಿ):ಬಸರಾಳು, ಯಲಹಂಕ ತಲಾ 5, ದುಡ್ಡ, ಕೆ.ಆರ್. ಸಾಗರ, ಬೆಂಗಳೂರು ನಗರ, ಬೆಂಗಳೂರು ಎಚ್.ಎ.ಎಲ್. ವಿಮಾನ ನಿಲ್ದಾಣ ತಲಾ 4, ಹೆಸರಘಟ್ಟ, ಜಿಕೆವಿಕೆ ತಲಾ 3, ಟಿ.ನರಸೀಪುರ, ಶ್ರೀರಂಗಪಟ್ಟಣ, ಹೊನಕೆರೆ, ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ, ಕೊಳ್ಳೇಗಾಲ, ಹೊಸ್ಕೋಟೆ, ನೆಲಮಂಗಲ, ಮಾಗಡಿ ತಲಾ 2, ಯೆಳಂದೂರು, ಮಳವಳ್ಳಿ, ಮದ್ದೂರು ತಲಾ 1. ದಕ್ಷಿಣ ಒಳನಾಡಿನ ಹಲವೆಡೆ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾದರೆ ಕರಾವಳಿಯ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠವೆನಿಸಿದ 41.3 ಡಿ.ಸೆ. ತಾಪಮಾನ ದಾಖಲಾಯಿತು.