Advertisement

ಮಳೆ ನೀರು ಸಂಗ್ರಹ ಚಳವಳಿ ಅಗತ್ಯ

09:09 PM Jul 15, 2019 | Lakshmi GovindaRaj |

ದೊಡ್ಡಬಳ್ಳಾಪುರ: ನೀರಿನ ಅಭಾವ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸ್ವಾತಂತ್ರ್ಯ ಚಳವಳಿಯಂತೆ ಮಳೆ ನೀರು ಸಂಗ್ರಹ ಚಳವಳಿ ರೂಪಿಸುವ ಅಗತ್ಯವಿದೆ. ನಗರದಲ್ಲಿ ನಡೆಯುತ್ತಿರುವ ಮಳೆ ನೀರು ಸಂಗ್ರಹಣೆ ಅಭಿಯಾನದ ಉಸ್ತುವಾರಿಯನ್ನು ಕಾಲೇಜು ವಿದ್ಯಾರ್ಥಿಗಳು ನಿರ್ವಹಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ತಿಳಿಸಿದರು.

Advertisement

ನಗರದ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಮಳೆಯ ನೀರು ಸಂಗ್ರಹಣೆ ಯೋಜನೆಯಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿದ ಅವರು ಮಾತನಾಡಿ, ದೊಡ್ಡಬಳ್ಳಾಪುರ ನಗರದಲ್ಲಿ ಪ್ರಸ್ತುತ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ, 14,500 ಮನೆಗಳಿಗೆ ನೋಟಿಸ್‌ ನೀಡಲಾಗಿದೆ.

ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೂ ಸಹ ನೋಟಿಸ್‌ ಜಾರಿ ಅಗಿದೆ. ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿರುವುದು ಕೇವಲ ನೋಟಿಸ್‌ಗಷ್ಟೆ ಸೀಮಿತವಾಗಬಾರದು. ಕಾರ್ಯರೂಪಕ್ಕೆ ಬರುವಂತೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಉಸ್ತುವಾರಿ ಮತ್ತು ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ: ಮಳೆ ನೀರು ಸಂಗ್ರಹಣೆ ಅಭಿಯಾನದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಗುರುತಿನ ಚೀಟಿ ಸಹ ನೀಡಲಾಗುತ್ತದೆ. ಮಳೆ ನೀರು ಸಂಗ್ರಹಣೆ ಮಾಹಿತಿಯುಳ್ಳ ಕರಪತ್ರಗಳನ್ನು ನೀಡಲಾಗುತ್ತದೆ. ಮಳೆ ನೀರು ಕೊಯ್ಲು ಅಭಿಯಾನದಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಗುವುದು.

ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದಿರುವ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯಕ್ಕೆ ಇದೊಂದು ಮಹತ್ವದ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳನ್ನು ಸಮಾಜಮುಖೀ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವ ವಿಶೇಷ ಪ್ರಯತ್ನ ಸಹ ಇದಾಗಿದೆ. ವಿದ್ಯಾರ್ಥಿಗಳು ತಮ್ಮ ಹಾಗೂ ಸುತ್ತಮುತ್ತಲ ಮನೆಗಳಲ್ಲಿ ಮಳೆ ನೀರು ಸಂಗ್ರಹಣೆ ವ್ಯವಸ್ಥೆ ಮಾಡುವಂತಾದರೆ ಈ ಯೋಜನೆ ಸಾರ್ಥಕವಾಗುತ್ತದೆ ಎಂದರು.

Advertisement

ಮಳೆ ಪ್ರಮಾಣ ವ್ಯತ್ಯಾಸವಿಲ್ಲ: ಕಳೆದ ನೂರು ವರ್ಷಗಳಲ್ಲಿ ಬಿದ್ದಿರುವ ಮಳೆಯನ್ನು ಲೆಕ್ಕಚಾರ ಮಾಡಲಾಗಿದೆ. ಮಳೆ ಬೀಳುತ್ತಿರುವ ಪ್ರಮಾಣದಲ್ಲಿ ವ್ಯತ್ಯಾಸವಾಗಿಲ್ಲ. ಆದರೂ ನೀರಿನ ಸಮಸ್ಯೆ, ಅಂತರ್ಜಲ ಕುಸಿತ ದೊಡ್ಡದಾಗಿದೆ. ಅಂತರ್ಜಲದಲ್ಲಿ ಇರುವ ನೀರನ್ನು ಉಪಯೋಗಿಸುವವರು ಅಂಗವಿಕಲತೆ ಮತ್ತು ರೋಗಗಳಿಗೆ ಒಳಗಾಗುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 800 ಮಿ.ಮೀ ಮಳೆಯಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಈ ಯೋಜನೆಯಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಒಂದೊಂದು ಕೆರೆಯ ಪುನಶ್ಚೇತನ ಕಾರ್ಯದಲ್ಲಿ 3 ರೂಪಾಯಿ ಇಂದ ಲಕ್ಷ ರೂ.ಗಳ ತನಕ ನೆರವು ನೀಡಿದ್ದಾರೆ ಎಂದು ತಿಳಿಸಿದರು.

ಶ್ರೀಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಒಂದು ಮಳೆ ನೀರು ಸಂಗ್ರಹ ಘಟಕವನ್ನು ನಿರ್ಮಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಸಮಸ್ಯೆ ಪರಿಹಾರಕ್ಕೆ ಮಳೆ ನೀರು ಸಂಗ್ರಹ: ಶ್ರೀಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಅಶ್ವತ್ಥಯ್ಯ ಮಾತನಾಡಿ, ಮಳೆ ನೀರು ಸಂಗ್ರಹಣೆಯಿಂದ ನೀರಿನ ಸಮಸ್ಯೆ ಬಗೆಹರಿಯಲಿದೆ. ಅಂತರ್ಜಲ ವೃದ್ಧಿಯಿಂದ ನೈಸರ್ಗಿಕ ಸಂಪತ್ತು ಸಹ ರಕ್ಷಣೆ ಮಾಡಿದಂತೆ ಅಗುತ್ತದೆ. ನಮ್ಮ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ಎಲ್ಲಾ ಕಟ್ಟಡಗಳಿಗೂ ಮಳೆ ನೀರು ಸಂಗ್ರಹಣೆ ಮಾಡಲಾಗುವುದು. ವಿದ್ಯಾರ್ಥಿಗಳನ್ನು ಮಳೆ ನೀರು ಸಂಗ್ರಹಣೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶ್ರೀಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್‌.ಶಂಕರಯ್ಯ, ವಿದ್ಯಾಸಂಸ್ಥೆಯ ನಿರ್ದೇಶಕರಾದ ವಿ.ತಿಮ್ಮಶೆಟ್ಟಪ್ಪ, ಎಸ್‌.ರಾಜಲಕ್ಷ್ಮೀ, ಲಲಿತಮ್ಮ, ಶ್ರೀನಿವಾಸಮೂರ್ತಿ, ಕೃಷ್ಣಮೂರ್ತಿ, ಜೆ.ಬಿ.ಮಹೇಶ್‌, ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಎನ್‌.ಬಾಬು, ಉಪಪ್ರಾಂಶುಪಾಲ ಅರ್‌.ಮಂಜುನಾಥ್‌, ಕಾಲೇಜಿನ ಉಪನ್ಯಾಸಕರು, ಬೋಧಕೇತರರು. ಎನ್‌ಸಿಸಿ, ಎನ್‌ಎಸ್‌ಎಸ್‌, ಭಾರತ ಸೇವಾದಳ, ಸ್ಕೌಟ್ಸ್‌ ಮತ್ತು ಗೈಡ್‌ ಸಂಘಟನೆಗಳ ಸ್ವಯಂ ಸೇವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆಯ ಅರಿವಿರಲಿ: ನೀರಿನ ಸಮಸ್ಯೆಯನ್ನು ವಿದ್ಯಾರ್ಥಿಗಳು ಅರಿಯಬೇಕಾಗಿದೆ. ಗಾಂಧೀಜಿ, ವಿವೇಕಾನಂದ ಮುಂತಾದ ಆಶಯಗಳು ಈಡೇರಲು ವಿದ್ಯಾರ್ಥಿಗಳು ಕೆಲಸ ಮಾಡಿದೆ. ಈಗ ಅಂತಹ ಮಹತ್ವದ ಚಳವಳಿ ನೀರಿಗಾಗಿ ನಡೆಯಬೇಕಾಗಿದೆ. ಜಲಮೂಲಗಳನ್ನು ಉಳಿಸುವ ಸಂರಕ್ಷಣೆ ಮಾಡುವುದಕ್ಕೆ ಅದ್ಯತೆ ನೀಡಬೇಕಾಗಿದೆ. ನೈಸರ್ಗಿಕ ಸಂಪತ್ತು ನಾಶವಾಗದಂತೆ ನೋಡಕೊಳ್ಳಬೇಕಾಗಿದೆ.

ಮನುಷ್ಯ ಅಭಿವೃದ್ಧಿ ಹೆಸರಿನಲ್ಲಿ ನದಿಗಳನ್ನು ಮಲೀನಗೊಳಿಸಿದ್ದಾನೆ. ಗಂಗೆ, ತುಂಗೆ ನೀರಿದಂತೆ ಎಲ್ಲೆಡೆ ಇಂದು ಜಲಮಾಲಿನ್ಯದಿಂದ, ಅಧಿ ಕ ಅಳವಾದ ಅಂತರ್ಜಲ ಕಲುಷಿತವಾಗಿದೆ. ಈ ಪ್ರಪಂಚದಲ್ಲಿ ಕುಡಿಯಲು ಯೋಗ್ಯವಾಗಿರುವ ನೀರು ಎಂದರೆ ಅದು ಮಳೆ ನೀರು ಮಾತ್ರವಾಗಿದೆ ಎಂದು ಬೆಂ.ಗ್ರಾ ಡೀಸಿ ಸಿ.ಎಸ್‌.ಕರೀಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next