ಬಜಪೆ: ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಜಪೆ ಚರ್ಚ್ ಸರ್ಕಲ್, ಬಜಪೆ ಹಳೆ ಪೊಲೀಸ್ ಠಾಣೆ, ಮುರನಗರ ಜಂಕ್ಷನ್ ಗಳಲ್ಲಿ ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯೇ ಮಳೆಯ ನೀರು ಹರಿಯುವ ತೋಡಾಗಿ, ರಸ್ತೆಯಲ್ಲಿ ಹೊಂಡ ಬಿದ್ದು ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಸಂಚಾರವೇ ದುಸ್ತರವಾಗಿ ಬಿಟ್ಟಿದೆ. ಅಂಗಡಿ ಮುಂಗಟ್ಟುಗಳ ಮುಂದೆ ಕೃತಕ ನೆರೆ ಸಹಜ ಎಂಬಂತಿದೆ.
ಚರಂಡಿ ತುಂಬೆಲ್ಲ ಹೂಳು
ಚರ್ಚ್ ಸರ್ಕಲ್ ಪರಿಸರದಲ್ಲಿ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುವುದು ಸದಾ ಕಂಡು ಬರುತ್ತದೆ. ಬಜಪೆ – ಕಟೀಲು ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆಯೇ ಸಮರ್ಪ ಕವಾಗಿ ಇಲ್ಲದಿರುವುದು ಮುಖ್ಯ ಕಾರಣ. ಕೆಲವೆಡೆ ಅರೆಬರೆ ಚರಂಡಿ ಕಾಮಗಾರಿಗಳು ನಡೆದಿದ್ದು, ಇನ್ನೂ ಕೆಲವೆಡೆ ಚರಂಡಿಯಲ್ಲಿ ಹೂಳು ತುಂಬಿದೆ.
ಮಳೆಯ ನೀರು ಚರಂಡಿಯಲ್ಲಿಯೇ ಹರಿಯದೇ ರಾಜ್ಯ ಹೆದ್ದಾರಿಯಲ್ಲಿಯೇ ಹರಿದಾಡಿ ಚರ್ಚ್ ಆವರಣ ಸಮೀಪದ ಚರಂಡಿಯ ಮೂಲಕ ತೋಡಿಗೆ ಹರಿಯುತ್ತದೆ. ಈಗ ಬಜಪೆ ಪೇಟೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ಹರಿಯುವ ಮಳೆಯ ನೀರಿನಿಂದಾಗಿ ತೊಂದರೆಯಾಗುತ್ತಿದೆ.
ಬಜಪೆ ಚರ್ಚ್ ಸರ್ಕಲ್ ಬಳಿಯ ರಸ್ತೆಯ ಮಧ್ಯೆಯಿಂದ ಹಾದು ಹೋಗುವ ಚರಂಡಿಯಲ್ಲಿ ಹೂಳು ತುಂಬಿದ ಕಾರಣ ಮಳೆಯ ನೀರು ಅದರಲ್ಲಿ ಹೋಗದೇ ರಸ್ತೆಯಲ್ಲಿಯೇ ಹರಿದಾಡಿ, ಹೊಂಡಗಳು ಬಿದ್ದಿವೆ. ರಸ್ತೆಯ ಮಧ್ಯೆದಲ್ಲಿ ಹಾದು ಹೋಗುವ ಚರಂಡಿ ಕಬ್ಬಿಣದ ರಾಡ್ ಮೇಲೆದ್ದು ಬಂದಕಾರಣ ಪಾದಚಾರಿಗಳಿಗೆ ಅದು ತಾಗಿ ಗಾಯವಾಗುವ ಸಂಭವವೂ ಇದೆ.
ರಾಜ್ಯ ಹೆದ್ದಾರಿ101ಯನ್ನು ಸಂಧಿಸುವಲ್ಲಿ, ಬಜಪೆ ಹಳೆ ಪೊಲೀಸ್ ಠಾಣೆಯ ಸಮೀಪದ ಹಳೆವಿಮಾನ ನಿಲ್ದಾಣ ರಸ್ತೆಯ ತಿರುವಿನಲ್ಲೂ ಮಳೆ ನೀರು ಹರಿಯುವ ಕಾರಣ ಹೊಂಡ ಸೃಷ್ಟಿಯಾಗಿದೆ. ಇಲ್ಲಿಯೂ ಮಳೆಯ ನೀರು ಹರಿಯಲು ಚರಂಡಿಯೇ ಇಲ್ಲ.
ಅಪಾಯಕಾರಿ ಹೊಂಡಗಳು
ಚರಂಡಿ ವ್ಯವಸ್ಥೆ ಇಲ್ಲದ ಹೆಚ್ಚಿನ ಕಡೆಗಳಲ್ಲಿ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು ಬಿದ್ದಿವೆ. ರಸ್ತೆ ಬದಿಯ ಚರಂಡಿಯ ಬಗ್ಗೆ ಹೆಚ್ಚು ಗಮನ ನೀಡಿ, ರಸ್ತೆಯಲ್ಲಿ ಹರಿಯುವ ಮಳೆಯ ನೀರು ಚರಂಡಿಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಿದಲ್ಲಿ ರಸ್ತೆಯಲ್ಲಿ ಇನ್ನಷ್ಟು ಹೊಂಡ ಬೀಳುವುದು ತಪ್ಪುತ್ತದೆ. ಸಂಚಾರವೂ ಸುಗಮವಾಗಿ ಸಮಸ್ಯೆಗಳು ಕಡಿಮೆಯಾಗಲಿವೆ. ಇದಕ್ಕೆ ಲೋಕೋಪಯೋಗಿ ಇಲಾಖೆ, ಬಜಪೆ ಪಟ್ಟಣ ಪಂಚಾಯತ್ ಜಂಟಿ ಕಾರ್ಯ ಮಾಡಬೇಕಾಗಿದೆ. ಚರಂಡಿ ಜತೆ ರಸ್ತೆಯಲ್ಲಿನ ಹೊಂಡಗಳಿಗೂ ಮುಕ್ತಿ ಕಾಣಬೇಕು.
ಮುರನಗರ ಜಂಕ್ಷನ್ ಕೃತಕ ನೆರೆ
ಸ್ವಲ್ಪ ಮಳೆ ಬಂದರೂ ಮುರನಗರ ಜಂಕ್ಷನ್ ಬಳಿ ಕೃತಕ ನೆರೆ ಉಂಟಾಗುತ್ತದೆ. ಇಲ್ಲಿಯೂ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇರದ ಕಾರಣ ಮಳೆಯ ನೀರು ತಗ್ಗು ಪ್ರದೇಶದಲ್ಲಿ ನಿಂತು ತೊಂದರೆಯಾಗುತ್ತಿದೆ.