Advertisement

Rain Water ಸಂಗ್ರಹ “ಪಾಠ ‘: ಜಲ ಸಾಕ್ಷರತೆ ಸಾರುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆ

03:58 PM Jun 02, 2023 | Team Udayavani |

ಕುಂದಾಪುರ: “ಮಳೆ ಇದ್ದರೆ ಇಳೆ, ಇಳೆ ಇದ್ದರೆ ಬೆಳೆ’ ಎನ್ನುವ ಧ್ಯೇಯ ವಾಕ್ಯದಂತೆ ಮಳೆ ನೀರಿನ
ಮಹತ್ವವನ್ನು ಚೆನ್ನಾಗಿಯೇ ಅರಿತಿರುವ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆಯು ತನ್ನ 42 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಮಳೆ ನೀರನ್ನು ಸಂಗ್ರಹಿಸಿಡುವ ಮಹತ್ಕಾರ್ಯ ಮಾಡುತ್ತಿದ್ದು, ಆ ಮೂಲಕ ಮಕ್ಕಳಿಗೂ ಜಲ ಸಾಕ್ಷರತೆಯ ಪಾಠವನ್ನು ಮಾಡುತ್ತಿದೆ.

Advertisement

ಗುರುಕುಲ ಶಿಕ್ಷಣ ಸಂಸ್ಥೆಯು ನಮ್ಮ ಸಂಸ್ಕೃತಿ, ದೇಶಿಯ ಚಿಂತನೆಗಳು, ಪ್ರಾಚೀನ ಶಿಕ್ಷಣ ಪದ್ಧತಿಗೆ ಆದ್ಯತೆ ನೀಡಿರುವುದು ಮಾತ್ರವಲ್ಲದೆ, ಪರಿಸರಕ್ಕೆ ಪೂರಕವಾದ ಹತ್ತಾರ ಮಾರ್ಗೋಪಾಯಗಳನ್ನು ಕೈಗೊಳ್ಳುವ ಮೂಲಕವು ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ.

ಫಲ ಕೊಟ್ಟ ಇಂಗುಗುಂಡಿ
ಶಾಲಾ ಕಟ್ಟಡ, ಕಚೇರಿ ಕಟ್ಟಡ, ಹಾಸ್ಟೆಲ್‌ ಕಟ್ಟಡಗಳಿಂದ ಬೀಳುವ ಮಳೆ ನೀರನ್ನು 4 ಕಡೆಗಳಲ್ಲಿ ಇಂಗು ಗುಂಡಿ ಹಾಗೂ 2 ಕಡೆಗಳಲ್ಲಿ ಬೃಹತ್ತಾದ ಇಂಗು ಬಾವಿಗಳಿಗೆ ಬಿಡುವ ವ್ಯವಸ್ಥೆಯನ್ನು ಮಾಡಿದ್ದು, ಇದರಿಂದ ಬೇಸಗೆಯಲ್ಲಿ ಇಲ್ಲಿರುವ ಬಾವಿಗಳು, ಬೋರ್‌ವೆಲ್‌ಗ‌ಳಲ್ಲಿ ನೀರಿನ ಮಟ್ಟವು ಉತ್ತಮವಾಗಿದೆ. ಇಲ್ಲಿ ನೀರಿನ ಸಮಸ್ಯೆಯೇ ಎದುರಾಗಿಲ್ಲ.

ತ್ಯಾಜ್ಯ ನೀರು ಶುದ್ಧಿಕರಿಸಿ ಬಳಕೆ
ಇನ್ನು ಹಾಸ್ಟೆಲ್‌ಗ‌ಳಲ್ಲಿನ ತ್ಯಾಜ್ಯ ನೀರನ್ನು ಸಹ ಶುದ್ಧಿಕರಿಸಿ, ಅದನ್ನು ಮರು ಬಳಕೆ ಮಾಡುವ ಎರಡು ದೊಡ್ಡ ಮಟ್ಟದ ಎಸ್ಟಿಪಿ ವ್ಯವಸ್ಥೆಯನ್ನು ಸಹ ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಹೀಗೆ ಶುದ್ಧಿಕರಿಸಲಾದ ನೀರನ್ನು ಇಲ್ಲಿರುವ ಹಣ್ಣಿನ ಮರಗಳು, ಔಷಧೀಯ ಸಸ್ಯಗಳಿಗೆ ಬಿಡಲಾಗುತ್ತಿದೆ.

400 ಕ್ಕೂ ಮಿಕ್ಕಿ ಔಷಧೀಯ ಸಸ್ಯ
ಇಲ್ಲಿ ಪಾಠಕ್ಕೆ ಮಾತ್ರ ಒತ್ತು ಕೊಡಲಾಗುತ್ತಿಲ್ಲ. ಪರಿಸರಕ್ಕೂ ಮಹತ್ವ ನೀಡಲಾಗುತ್ತಿದ್ದು, ಇಲ್ಲಿನ ವಿಶಾಲವಾದ ಕ್ಯಾಂಪಸ್‌ನಲ್ಲಿ 300 ಕ್ಕೂ ಮಿಕ್ಕಿ ವಿವಿಧ ಹಣ್ಣಿನ ಮರಗಳಿದ್ದು, ಅದಕ್ಕಿಂತಲೂ ಹೆಚ್ಚಾಗಿ 400 ಕ್ಕೂ ಮಿಕ್ಕಿ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ.

Advertisement

ಹಕ್ಕಿಗಳಿಗೆ ನೀರಿನ ತೊಟ್ಟಿ
ಇನ್ನು ಬೇಸಗೆಯಲ್ಲಿ ಪ್ರಾಣಿ- ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎನ್ನುವ ಕಳಕಳಿಯಿಂದಾಗಿ ಇಲ್ಲಿನ ಆವರಣದ ಹಲವು ಕಡೆಗಳಲ್ಲಿ ಪ್ರಾಣಿ- ಪಕ್ಷಗಳಿಗೆ ನೀರು ಸುಲಭವಾಗಿ ಸಿಗುವಂತಾಗಲು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಇಡಲಾಗಿದೆ. ಕೆಲವು ಕಡೆಗಳಲ್ಲಿ ಮಣ್ಣಿನ ಪಾತ್ರೆಗಳನ್ನು ಮರಕ್ಕೆ ಕಟ್ಟಿ, ಅದರಲ್ಲಿ ನೀರು ತುಂಬಿಸಿ ಇಡಲಾಗಿದೆ.

ಸೌರಶಕ್ತಿ ಉತ್ಪಾದನೆ
ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಸೌರಶಕ್ತಿಯನ್ನು ಸಹ ಉತ್ಪಾದಿಸುವ ಸೋಲಾರ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ತಿಂಗಳಿಗೆ ಅಂದಾಜು 250 ಯೂನಿಟ್‌ ಸೋಲಾರ್‌ ಬೆಳಕು ಸಂಗ್ರಹಿಸಲಾಗುತ್ತಿದೆ.

ಸಾವಯವ ಗೊಬ್ಬರ
ಇನ್ನು ಇಲ್ಲಿರುವ ತೆಂಗು, ಇನ್ನಿತರ ಹಣ್ಣು, ತರಕಾರಿ ಬೆಳೆಗಳಿಗೆ ಸಂಪೂರ್ಣ ಸಾವಯವ ಗೊಬ್ಬರವನ್ನೇ ಬಳಸಿಕೊಳ್ಳಲಾಗುತ್ತಿದೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೇ, ಸಂಪೂರ್ಣ “ಸಾವಯವ ಕ್ಯಾಂಪಸ್‌’ ಆಗಿದೆ.

ಪಠ್ಯದೊಂದಿಗೆ ಪರಿಸರ ಪಾಠ
ಶ್ರೀ ಪಡ್ರೆ ಅವರಿಂದ ಪ್ರೇರಣೆಗೊಂಡು, ಅವರ ಮಾರ್ಗದರ್ಶನದಲ್ಲಿ ಮಳೆ ನೀರು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದೇವು. ಅದೀಗ ಫಲ ಕೊಡುತ್ತಿದೆ. ಎಲ್ಲ ಕಡೆಗಳಲ್ಲಿ ಈ ರೀತಿಯ ವ್ಯವಸ್ಥೆಗಳನ್ನು ಅಳವಡಿಸಿಕೊಂಡರೆ, ನೀರಿನ ಸಮಸ್ಯೆ ಕಡಿಮೆಯಾಗಬಹುದು. ಮಕ್ಕಳಿಗೆ ನಾವು ಪಠ್ಯದೊಂದಿಗೆ ಕೃಷಿ, ಪರಿಸರದ ಬಗೆಗಿನ ಪಾಠಕ್ಕೂ ನಾವು ಹೆಚ್ಚಿನ ಒತ್ತನ್ನು ಕೊಡುತ್ತಿದ್ದೇವೆ.
-ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ,
ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರು,
ಗುರುಕುಲ ಶಿಕ್ಷಣ ಸಂಸ್ಥೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next