Advertisement
ಮೈಸೂರು – ಸುಳ್ಯ – ಮಡಿಕೇರಿ, ಜಾಳ್ಸೂರು – ಸುಬ್ರಹ್ಮಣ್ಯ, ಸುಳ್ಯ – ಗುತ್ತಿಗಾರು – ಸುಬ್ರಹ್ಮಣ್ಯ, ಬೆಳ್ಳಾರೆ – ಪಂಜ-ಸುಬ್ರಹ್ಮಣ್ಯ, ಸುಬ್ರಹ್ಮಣ್ಯ- ಪಂಜ- ಕಾಣಿಯೂರು, ಕಡಬ – ಸುಬ್ರಹ್ಮಣ್ಯ, ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ನೀರು ರಸ್ತೆಯಲ್ಲೆ ಸಂಗ್ರಹಗೊಳ್ಳುತ್ತಿರುವ ಜತೆಗೆ ರಸ್ತೆಯ ಎರಡೂ ಬದಿ ಮರಗಳ ರೆಂಬೆಗಳನ್ನು ಕತ್ತರಿಸದೆ ಅಪಾಯ ಆಹ್ವಾನಿಸುತ್ತಿದೆ. ಸುಳ್ಯ-ಸುಬ್ರಹ್ಮಣ್ಯ ರಸ್ತೆ ಹೆದ್ದಾರಿಯ ದೊಡ್ಡತೋಟ ತಿರುವಿನ ಕಂದಡ್ಕ ಬಳಿ, ದುಗಲಡ್ಕ, ಕಲ್ಲಾಜೆ, ಇಂಜಾಡಿ, ನಾಲ್ಕೂರು, ಸೋಣಂಗೇರಿ ಪ್ರದೇಶದಲ್ಲಿ ರಸ್ತೆಗೆ ಗುಡ್ಡದ ನೀರು ಹರಿದು ರಸ್ತೆಯಲ್ಲೆ ಹೂಳು ತುಂಬಿಕೊಂಡಿದೆ. ಜತೆಗೆ ಅಲ್ಲಲ್ಲಿ ಮರ ರಸ್ತೆಗೆ ಉರುಳಿ ಬೀಳುವ ಘಟನೆಗಳು ಸಂಭವಿಸುತ್ತಿವೆ. ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಲಿವೆ.
ಗ್ಯಾಂಗ್ ಮನ್ ಗಳ ನೇಮಕವಿಲ್ಲ
ಈ ಹಿಂದೆ ರಸ್ತೆ ನಿರ್ವಹಣೆಗೆ ಗ್ಯಾಂಗ್ ಮನ್ ಗಳನ್ನು ನೇಮಿಸುತ್ತಿದ್ದ ಪಿ.ಡಬ್ಲ್ಯೂ.ಡಿ. ಇಲಾಖೆ ಈ ವ್ಯವಸ್ಥೆಯನ್ನು ಸಂಪೂರ್ಣ ಕೈ ಬಿಟ್ಟಿದೆ. ಇಲಾಖೆಯೂ ರಸ್ತೆ ನಿರ್ವಹಣಾ ಕಾರ್ಯ ನಡೆಸುತ್ತಿಲ್ಲ. ಇದರಿಂದಾಗಿ ರಸ್ತೆ ನಿರ್ವಹಣೆಗೆ ಸ್ಥಳೀಯ ಆಡಳಿತವನ್ನು ಆಶ್ರಯಿಸಬೇಕಾದ ದುಸ್ಥಿತಿ ಇದೆ. ಸಮಸ್ಯೆ ಬಂದಾಗ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯಾಡಳಿತಗಳು ಪರಸ್ಪರ ಬೆರಳು ತೋರುತ್ತಿರುವುದು ಕಾಣುತ್ತದೆ. ಇದು ಹೊಳೆಯಲ್ಲ, ರಸ್ತೆ!
ಇದೀಗ ಸುರಿದ ಮಳೆಗೆ ಗುಡ್ಡ ಪ್ರದೇಶದಿಂದ ರಸ್ತೆಗೆ ಹರಿಯುವ ಮಳೆ ನೀರಿನ ಜತೆ ಕಲ್ಲು ಮಣ್ಣು ಬರುತ್ತಿದ್ದು, ರಸ್ತೆ ಮಧ್ಯೆ ಅಲ್ಲಲ್ಲಿ ಕೆಸರು ಮಣ್ಣು ಶೇಖರಣೆಯಾಗಿದೆ. ಮಳೆಗೆ ತಗ್ಗು ಪ್ರದೇಶಗಳತ್ತ ನೀರು ಹರಿದು ರಸ್ತೆಗಳು ಕೆರೆಗಳಾಗಿ ಪರಿವರ್ತನೆ ಆಗುತ್ತಿವೆ. ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಸಂಚಾರದಲ್ಲಿ ಭಾರಿ ವ್ಯತ್ಯಯದ ಜತೆಗೆ ಅಪಾಯಕ್ಕೂ ಆಹ್ವಾನ ನೀಡುತ್ತಿದೆ. ಇದು ರಸ್ತೆಯೋ ಹೊಳೆಯೋ ಎಂಬ ಅನುಮಾನಗಳು ಕಾಡಲಾರಂಬಿಸಿವೆ. ಚರಂಡಿ ನಿರ್ವಹಣೆ, ರೆಂಬೆ ತೆರವಿಗೆ ಪ್ರತ್ಯೇಕ ಅನುದಾನ ಲಭ್ಯವಾಗುತ್ತಿಲ್ಲ ಎಂಬ ನೆಪವೊಡ್ಡಿ ಇಲಾಖೆ ನುಣುಚಿಕೊಳ್ಳುತ್ತಿದೆ. ಒಟ್ಟಿನಲ್ಲಿ ಚಾಲಕರು ಹಾಗೂ ಪ್ರಯಾಣಿಕರ ಸ್ಥಿತಿ ಅತಂತ್ರವಾಗಿದೆ. ಕೆಲವು ಕಡೆ ರಸ್ತೆ ಕಿರಿದಾಗಿದ್ದು, ಕೆಲವೊಂದು ಕಡೆ ರಸ್ತೆಗಳು ತಿರುವಿನಿಂದ ಕೂಡಿವೆ. ರಸ್ತೆಯ ಡಾಮರು ಎದ್ದು ಹೋಗಿ ಹೂಳು ತುಂಬಿಕೊಂಡಿದೆ.
Related Articles
ಸಮರ್ಪಕ ಚರಂಡಿ ಕೊರತೆಯಿಂದ ರಸ್ತೆ ಮಧ್ಯೆ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಹೊಂಡದಲ್ಲಿ ನೀರು ನಿಂತ ಪರಿಣಾಮ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುವಂತಾದರೆ, ಇತರೆ ವಾಹನಗಳ ತಳ ಭಾಗಕ್ಕೆ ಬಲವಾದ ಏಟು ಬಿದ್ದು ವಾಹನ ಜಖಂಗೊಳ್ಳುತ್ತಿದೆ. ಜೊತೆಗೆ ಅಪಘಾತಗಳು ಸಂಭವಿಸುತ್ತಿವೆ.
Advertisement
ಕೆಂಪು ನೀರಿನ ಸೇಚನರಸ್ತೆ ಬದಿ ತೆರಳುವ ಪಾದಚಾರಿಗಳಿಗೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತ ರಸ್ತೆ ಬದಿ ತೆರಳುವಾಗ ರಸ್ತೆಯಲ್ಲಿ ವಾಹನಗಳು ಸಂಚರಿಸುವ ವೇಳೆ ರಸ್ತೆಯಲ್ಲಿ ನಿಂತ ಕೊಳಚೆ ನೀರು ಮಕ್ಕಳ ಬಟ್ಟೆ ಹಾಗೂ ಮೈಮೇಲೆ ಚಿಮ್ಮುತ್ತಿದೆ. ಮಕ್ಕಳಿಗೆ ಮಳೆಗಾಲ ಕೆಂಪು ನೀರಿನ ಸೇಚನ ಭಾಗ್ಯವೂ ದೊರಕುವಂತಿದೆ. ಸರಕಾರಕ್ಕೆ ಪಟ್ಟಿ ಸಲ್ಲಿಸಲಾಗಿದೆ
ಮಳೆಗಾಲದ ಅವಧಿ ಮುನ್ನೆಚ್ಚರಿಕೆ ವಹಿಸುತ್ತೇವೆ. ಈಗ ಕಾಮಗಾರಿಗಳ ಕಾರ್ಯಸೂಚಿ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ. ಅದನ್ನು ಈ ಕೂಡಲೇ ಸರಕಾರಕ್ಕೆ ಸಲ್ಲಿಸುತ್ತೇವೆ. ಅನುದಾನ ಬಂದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ದೊಡ್ಡ ಮಟ್ಟದಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ತತ್ ಕ್ಷಣಕ್ಕೆ ದುರಸ್ತಿಗೆ ಏರ್ಪಾಡು ಮಾಡುತ್ತೇವೆ
– ಎಸ್. ಸಣ್ಣೇಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಮುಂಜಾಗ್ರತೆ ವಹಿಸಬೇಕು
ರಸ್ತೆ ಬದಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೆ ನೀರು ನಿಲ್ಲುತ್ತಿವೆ. ಸಂಚಾರಕ್ಕೆ ಕಷ್ಟವಲ್ಲದೆ ರಸ್ತೆಗಳು ಹಾಳಾಗುತ್ತಿವೆ. ನಗರ ಮತ್ತು ಹಳ್ಳಿ ಎಲ್ಲೆಡೆಯೂ ಚರಂಡಿ ಇಲ್ಲದಿರುವುದೇ ದೊಡ್ಡ ಸಮಸ್ಯೆ. ಇಲಾಖೆಗಳು ಕಾರ್ಯೋನ್ಮುಖವಾಗಬೇಕು.
– ದೇವಿಪ್ರಸಾದ್ ಚೆನ್ನಕಜೆ, ಸುಳ್ಯ ನಗರ ಅಟೋ ಚಾಲಕ — ಬಾಲಕೃಷ್ಣ ಭೀಮಗುಳಿ