Advertisement

ಮಳೆಗಾಲದ ಪೂರ್ವ ಸಿದ್ಧತೆಗೆ ಮೀನಮೇಷ 

11:35 AM May 21, 2018 | |

ಸುಳ್ಯ : ಮಳೆ ನೀರು ಸರಾಗವಾಗಿ ಹರಿದುಹೋಗಲು ನಗರದ ಚರಂಡಿಗಳು ಸಿದ್ಧಗೊಳ್ಳದೆ, ಅಪೂರ್ಣ ಸ್ಥಿತಿಯಲ್ಲಿ ಇವೆ. ಮುಖ್ಯ ರಸ್ತೆ ಬದಿ ಚರಂಡಿಗಳು ಕೆಆರ್‌ ಡಿಸಿಎಲ್‌ ವ್ಯಾಪ್ತಿಯೊಳಗಿದ್ದರೆ, ವಾರ್ಡ್‌ನ ಚರಂಡಿಗಳು ನ.ಪಂ. ಸುಪರ್ದಿಯಲ್ಲಿದೆ. ಇವೆರೆಡು ವ್ಯಾಪ್ತಿಯಲ್ಲಿ ಮಳೆ ನೀರು ಹರಿದು ಹೋಗಲು ತಯಾರಿ ನಡೆದಿಲ್ಲ. ಹೂಳು, ಗಿಡ ಗಂಟಿ ತುಂಬಿ ಚರಂಡಿ ಚಿತ್ರಣ ಬದಲಾಗಿದೆ.

Advertisement

ತೋಡಾದ ಮುಖ್ಯ ರಸ್ತೆ
ಮಾಣಿ-ಮೈಸೂರು ರಾಜ್ಯ ಹೆದ್ದಾರಿ ನಗರದ ಮಧ್ಯದಲ್ಲೇ ಹಾದು ಹೋಗುತ್ತಿದೆ. ಇಲ್ಲಿ ಸಣ್ಣ ಮಳೆ ಬಂದರೂ ಕೃತಕ ನೆರೆ ಭೀತಿ ಉಂಟಾಗುತ್ತಿದೆ. ಶನಿವಾರ ರಾತ್ರಿ ಸುರಿದ ಮಳೆಗೆ ಪೈಚಾರು, ಹಳೆಗೇಟು ಮೊದಲಾದೆಡೆ ಮಳೆ ನೀರು ರಸ್ತೆಯಲ್ಲೇ ಹರಿದು, ಮುಖ್ಯ ರಸ್ತೆ ತೋಡಾಗಿ ಬದಲಾದ ಸಂದರ್ಭ ಸೃಷ್ಟಿಯಾಗಿತ್ತು. ಇದು ಒಂದು ದಿನದ ಉದಾಹರಣೆ ಅಲ್ಲ. ಮಳೆ ಬಂದಾಗಲೆಲ್ಲ ನಿತ್ಯ ನಿರಂತರ.

ದುರಸ್ತಿ ವೇಗವಿಲ್ಲ
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಚರಂಡಿ ನಿರ್ಮಾಣ ವ್ಯವಸ್ಥಿತವಾಗಿ ಆಗಿಲ್ಲ ಎಂದು ಲೋಕಾಯುಕ್ತ ಸಂಸ್ಥೆಗೆ ದೂರು ದಾಖಲಾಗಿತ್ತು. ಕೆಆರ್‌ಡಿಸಿಎಲ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ದುರಸ್ತಿ ಕುರಿತು ಸಂಬಂಧಿಸಿದ ಗುತ್ತಿಗೆ ದಾರರಿಗೆ ಸೂಚನೆ ನೀಡಿದ್ದರು. ಕೆಲ ದಿನಗಳ ಹಿಂದೆ ದುರಸ್ತಿ ಕೆಲಸ ಆರಂಭವಾಗಿದೆಯಷ್ಟೆ. ಹಾಗಾಗಿ ದುರಸ್ತಿ ಲಾಭ ಈ ಬಾರಿ ಸಿಗದು. ಈ ಬಾರಿ ಏನಿದ್ದರೂ ರಸ್ತೆಯೇ ಚರಂಡಿ. ಜನಪ್ರತಿನಿಧಿಗಳು ಅಥವಾ ಅಧಿ ಕಾರಿ ವರ್ಗದವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ನ.ಪಂ. ಸಿದ್ಧಗೊಂಡಿಲ್ಲ
ಜೂನ್‌ನಲ್ಲಿ ಮಳೆ ಬರುವುದು ವಾಡಿಕೆ. ಆದರೆ ಕಳೆದ ಕೆಲ ವರ್ಷಗಳಿಂದ ಎಪ್ರಿಲ್‌, ಮೇ ತಿಂಗಳಲ್ಲಿಯೇ ಮಳೆ ಅಬ್ಬರವಿದೆ. ಅದರ ಅರಿವಿದ್ದರೂ, ನ.ಪಂ. ಇನ್ನೂ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ದುರಸ್ತಿಗೆ ಇನ್ನಷ್ಟೇ ಯೋಜನೆ ರೂಪಿಸಬೇಕಿದೆ ಎನ್ನುವ ಉತ್ತರ ಬರುತ್ತಿದೆ. ನಿಯಮ ಅನುಸಾರ ಮಳೆಗಾಲ ಬರುವ ಮೊದಲೇ ಚರಂಡಿ ದುರಸ್ತಿಗೆ ಅನುದಾನ ಮೀಸಲಿಡಬೇಕು. ಇದು ಮಳೆಗಾಲದ ಪೂರ್ವಸಿದ್ಧತಾ ಕ್ರಮ. ಅನಂತರ ಮಳೆಗಾಲದ ಸಂದರ್ಭದಲ್ಲಿಯೂ ನಿರ್ವಹಣೆಗೂ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲಿ ಅದ್ಯಾವುದೂ ಪರಿಪಾಲನೆ ಆಗಿಲ್ಲ.

ರಸ್ತೆಯಲ್ಲಿ ಕೆಸರು
ಮಳೆ ನೀರು ಚರಂಡಿಯಲ್ಲಿ ಹರಿಯದೇ ರಸ್ತೆಯಲ್ಲಿ ಸಾಗುವ ಕಾರಣ, ಮಣ್ಣಿನ ರಾಶಿ ರಸ್ತೆಯಲ್ಲಿ ಬೀಡು ಬಿಟ್ಟಿದೆ. ಪರಿಣಾಮ ಕೆಸರು ತುಂಬಿ, ವಾಹನ ಸ್ಕಿಡ್‌ ಆಗಿ ಅಪಘಾತ ಸಂಭವಿಸಿದ ಅನೇಕ ನಿದರ್ಶನಗಳು ಇವೆ. ಈಗಲೂ ಮುಖ್ಯ ರಸ್ತೆ ಹಾಗೂ ನಗರದ ಇತರೆ ವಾರ್ಡ್‌ ಸಂಪರ್ಕ ರಸ್ತೆಗಳಲ್ಲಿ ಕೆಸರು ತುಂಬಿ,
ಅಪಾಯ ಆಹ್ವಾನಿಸುತ್ತಿದೆ.

Advertisement

ನಿರ್ವಹಣೆ ಯಾರ ಹೊಣೆ?
ಮುಖ್ಯ ರಸ್ತೆ ಈಗ ಕೆಆರ್‌ ಡಿಸಿಎಲ್‌ ವ್ಯಾಪ್ತಿಗೆ ಸೇರಿದೆ. ರಸ್ತೆ ಹಾದು ಹೋಗಿರುವ ಪ್ರದೇಶ ನ.ಪಂ. ವ್ಯಾಪ್ತಿಯೊಳಗಿದೆ. ಇಲ್ಲಿ ಚರಂಡಿ ದುರಸ್ತಿ ಮಾಡುವವರು ಯಾರು ಎಂಬ ಗೊಂದಲ ಇದೆ. ನ.ಪಂ. ಇದು ಕೆಆರ್‌ಡಿಸಿಎಲ್‌ ಜವಾಬ್ದಾರಿ ಅನ್ನುವ ನಿಲುವು ಹೊಂದಿದ್ದರೆ, ನಿರ್ಮಾಣ ಮಾತ್ರ ನಮ್ಮ ಹೊಣೆ, ಕಾಲ-ಕಾಲಕ್ಕೆ ನಿರ್ವಹಣೆ ಆಯಾ ವ್ಯಾಪ್ತಿಯ ಸ್ಥಳೀಯಾಡಳಿತಕ್ಕೆ ಸೇರಿದೆ ಅನ್ನುತ್ತಿದೆ ಕೆಆರ್‌ಡಿಸಿಎಲ್‌. ಹಾಗಾಗಿ ಈ ಹೊಯ್ದಾಟದಿಂದ ಮಳೆ ನೀರು ರಸ್ತೆಯಲ್ಲೇ ಹರಿದು, ಪಯಸ್ವಿನಿ ಪಾಲಾಗುತ್ತಿದೆ. 

ಇಂದು ಸಭೆ
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ನಿರ್ವಹಿಸಬೇಕಾದ ಕಾರ್ಯ ವಿಧಾನಗಳ ಬಗ್ಗೆ ಮೇ 21ರಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ತನಕ ಚರಂಡಿ ದುರಸ್ತಿಗೆ ಹಣ ಮೀಸಲಿಟ್ಟಿಲ್ಲ. ನಿರ್ವಹಣೆ ಬಗ್ಗೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು. 
 – ಗೋಪಾಲ ನಾೖಕ್‌ ಮುಖ್ಯಾಧಿಕಾರಿ, ನ.ಪಂ. ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next