Advertisement
23 ಸಾವಿರ ಹೆಕ್ಟೇರ್ ಬೆಳೆ ಹಾನಿ: ತೀವ್ರ ಮಳೆ, ಹುಬ್ಬಳ್ಳಿ-ಧಾರವಾಡ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದ ಕಾಶಯ್ಯ ಮಹಾದೇವಯ್ಯ ಹೊಸಳ್ಳಿಮಠ (57) ಹೊಲಕ್ಕೆ ಹೋಗುವಾಗ ಮಧ್ಯದ ಹಳ್ಳದ ರಭಸಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆ. ಮೂರು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದು, 435 ಕುಟುಂಬಗಳನ್ನು ರಕ್ಷಿಸಿ, 821 ಜನರನ್ನು ಸ್ಥಳಾಂತರಿಸಲಾಗಿದೆ. ಒಟ್ಟು 705 ಮನೆಗಳು ಜಖಂಗೊಂಡಿವೆ. 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟಕ್ಕೆ ಸಿಲುಕಿದೆ. ಧಾರವಾಡ ಸಮೀಪದ ಸಲಕಿನಕೊಪ್ಪದ ದೊಡ್ಡ ಕೆರೆಯಲ್ಲಿ ಭಾರೀ ನೀರು ಸಂಗ್ರಹಣೆಯಾಗಿದ್ದು, ಕೆರೆಯ ಕೆಳಭಾಗದಲ್ಲಿರುವ ಬಾಡ, ನಿಗದಿ ಮತ್ತು ಬೆನಕನಕಟ್ಟಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದೇವರಹುಬ್ಬಳ್ಳಿಯ ಕುಡಿಕೆರಿಗೆ ವಿಪರೀತ ನೀರು ಹರಿದು ಬರುತ್ತಿರುವುದರಿಂದ ಕೆರೆಕಟ್ಟೆಯಲ್ಲಿ ಸಣ್ಣ ಬಿರುಕು ಕಾಣಸಿಕೊಂಡಿದೆ. ಅಳ್ನಾವರದ ಇಂದಿರಮ್ಮನ ಕೆರೆಯಲ್ಲೂ ಕೋಡಿ ಬಿದ್ದ ನೀರಿನ ರಭಸಕ್ಕೆ ಹುಲಿಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳ ರಜೆಯನ್ನು ಆ.10ರವರೆಗೆ ಜಿಲ್ಲಾಡಳಿತ ವಿಸ್ತರಿಸಿದೆ.
Related Articles
Advertisement
ಕಾಳಿ, ಗಂಗಾವಳಿ ರೌದ್ರಾವತಾರ: ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕಾಳಿ ಮತ್ತು ಗಂಗಾವಳಿ ಪ್ರವಾಹ ತಂದೊಡ್ಡಿವೆ. ಕದ್ರಾ, ಮಲ್ಲಾಪುರ ಗ್ರಾಮ, ಮಲ್ಲಾಪುರ ಟೌನ್‌ಶಿಪ್ ನೀರಿನಿಂದ ಆವೃತವಾಗಿವೆ. ಕೈಗಾ ಟೌನ್‌ಶಿಪ್‌ನ 100 ಮಂದಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. 4000 ಜನರು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕದಂಬ ನೌಕಾನೆಲೆಯ ಸಹಾಯ ಪಡೆಯಲಾಗಿದೆ. ಗುರುವಾರವೂ ಶಾಲೆಗಳಿಗೆ ರಜೆ ನೀಡಲಾಗಿದೆ. ಪ್ರವಾಸಿಗರು ಜಿಲ್ಲೆಗೆ 3 ದಿನ ಬಾರದಂತೆ ನಿರ್ಬಂಧ ವಿ ಧಿಸಲಾಗಿದೆ. ಕಾಳಿಯ ಮೊದಲ ಅಣೆಕಟ್ಟು ಸುಪಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. 127 ಟಿಎಂಸಿ ಅಡಿ ಸಾಮರ್ಥ್ಯದ ಪೈಕಿ ಭರ್ತಿಗೆ 10 ಮೀ. ಬಾಕಿ ಇದೆ. ಕಾಳಿ ಕೊನೆಯ ಅಣೆಕಟ್ಟುಗಳಾದ ಕೊಡಸಳ್ಳಿ ಮತ್ತು ಕದ್ರಾ ಮೇಲೆ ನಿರಂತರ ನಿಗಾ ಇಡಲಾಗಿದೆ. ಯಲ್ಲಾಪುರ-ಅಂಕೋಲಾ, ಶಿರಸಿ-ಕುಮಟಾ, ಶಿರಸಿ-ಯಲ್ಲಾಪುರ, ಕಲಘಟಗಿ-ಮುಂಡಗೋಡ ರಸ್ತೆ ಸಂಪರ್ಕ ಕಡಿತಗೊಂಡಿದೆ. ಡೊಂಗ್ರಿ ಎಂಬಲ್ಲಿ ಸೇತುವೆಯೇ ಕೊಚ್ಚಿ ಹೋಗಿದೆ. 5000 ಹೆಕ್ಟೇರ್ ಪ್ರದೇಶದಲ್ಲಿ ಮಳೆ ನೀರು ನಿಂತ ಪರಿಣಾಮ ಭತ್ತ, ಕಬ್ಬು, ಮೆಕ್ಕೆಜೋಳ ಬೆಳೆ ರೈತರ ಕೈಗೆ ಬರದಂತಾಗಿದೆ. 25ರಿಂದ 30 ಕೋಟಿ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಮುನಿದ ಕೃಷ್ಣಾ, ಭೀಮಾ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹಾಗೂ ಜಿನಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಯುತ್ತಿರುವ ಕಾರಣ ಜಿಲ್ಲೆಯ ಗಡಿ ಉದ್ದಕ್ಕೂ ಎರಡೂ ನದಿಗಳ ಪ್ರವಾಹ ತಲೆ ದೋರಿದೆ. ಮುದ್ದೇಬಿಹಾಳ ತಾಲೂಕಿನ ಗಂಗೂರಿನ ಅಡವಿ ಸಿದ್ದೇಶ್ವರ ದೇವಸ್ಥಾನ ಹಾಗೂ ನಾಲತವಾಡ ಸಮೀಪದ ಛಾಯಾ ಭಗವತಿ ದೇವಸ್ಥಾನಗಳು ಸಂಪೂರ್ಣ ಜಲಾವೃತವಾಗಿವೆ. ಇದರಿಂದಾಗಿ ಒಂದು ವಾರದಿಂದ ಹರಿಯುತ್ತಿರುವ ಕೃಷ್ಣೆ, ಈ ಭಾಗದ ಸುಮಾರು 400 ಎಕರೆ ಪ್ರದೇಶದ ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಹಾಳು ಮಾಡಿದೆ. ಪ್ರವಾಹದ ನೀರು ಜಿಲ್ಲೆಯ ಸುಮಾರು 40 ಜನವಸತಿ ಪ್ರದೇಶಕ್ಕೆ ನುಗ್ಗುವ ಭೀತಿ ಎದುರಾಗಿದೆ. ಅಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಬಸವಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಬಸವಸಾಗರ ಜಲಾಶಯದಿಂದ 4.75 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ತೀರದಲ್ಲಿರುವ ಸುಮಾರು 20 ಹಳ್ಳಿಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಪಾತ್ರದಲ್ಲಿ ಬರುವ ಸುಮಾರು 26 ಹಳ್ಳಿಗಳಲ್ಲಿ ಪ್ರವಾಹದ ಭೀತಿ ಇದೆ.
ಯಾದಗಿರಿಯಲ್ಲೂ ಕೃಷ್ಣಾವತಾರ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬುಧವಾರ ಸಂಜೆ 4.60 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಟ್ಟಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ. ಜನ-ಜಾನುವಾರುಗಳು ನದಿ ಪಾತ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಶಹಾಪುರದ ಕೊಳ್ಳೂರು ಮತ್ತು ಗೌಡೂರಿನಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಡಗೇರಾದಲ್ಲಿ ಈಗಾಗಲೇ ಗಂಜಿ ಕೇಂದ್ರ ಆರಂಭ ವಾಗಿದೆ. ಸುರಪುರಲ್ಲಿ ಒಂದು ಗಂಜಿ ಕೇಂದ್ರ ಸಿದ್ಧವಾಗಿದೆ. ಅಂದಾಜು 1,110 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಬುಧವಾರ ರಾತ್ರಿ ವೇಳೆಗೆ ಗ್ರಾಮಗಳಲ್ಲಿ ನೀರು ನುಗ್ಗುವ ಆತಂಕ ಎದುರಾಗಿದ್ದು, ವಡಗೇರಾ ತಾಲೂಕಿನ ಚನ್ನೂರ ಗ್ರಾಮಸ್ಥರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಭಾಗಮಂಡಲ ಸಂಪೂರ್ಣ ಜಲಾವೃತ: ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕೊಡಗು ಜಿಲ್ಲೆ ಈ ಬಾರಿಯೂ ಆರ್ಭಟಿಸುತ್ತಿರುವ ಆಶ್ಲೇಷನ ದಾಳಿಗೆ ಸಿಲುಕಿ ನಲುಗಿದೆ. ಮಳೆ ಜೊತೆಗೆ, ಬುಧವಾರ ಗಾಳಿ ತೀವ್ರತೆ ಪಡೆದುಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ಹಾಗೂ ಅಂಗನವಾಡಿಗಳಿಗೆ ಆ.8 ಮತ್ತು 9ರಂದು ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಭಾಗಮಂಡಲ ಸಂಪೂರ್ಣವಾಗಿ ಜಲಾವೃತವಾಗಿದ್ದು, ದೇಗುಲದ ಮೆಟ್ಟಿಲಿನವರೆಗೂ ನೀರು ಆವರಿಸಿದೆ. ಕಾವೇರಿ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಶ್ರೀ ಭಗಂಡೇಶ್ವರ ದೇವಾಲಯದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತಿ ವರ್ಷ ಪ್ರವಾಹಕ್ಕೆ ಸಿಲುಕುವ ಕರಡಿಗೋಡು ಭಾಗದ ಮನೆಗಳು ಈ ಬಾರಿಯೂ ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನೆಲ್ಯಹುದಿಕೇರಿ ಭಾಗದ 8 ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ತಾಳತ್ತಮನೆ ಸಮೀಪದ ಮಂಗಳೂರು ರಸ್ತೆಗೆ ಅಳವಡಿಸಲಾಗಿದ್ದ ತಾತ್ಕಾಲಿಕ ಮರಳಿನ ತಡೆ ಗೋಡೆ ಕೊಚ್ಚಿ ಹೋಗಿದೆ.