Advertisement

Desi Swara:ರೈನ್‌ ಮೈನ್‌ ಕನ್ನಡ ಸಂಘ: ನೆರೆದವರ ಮನಗೆದ್ದ ಹಾಡು -ಹರಟೆ -ಹಾಸ್ಯ

11:11 AM May 11, 2024 | Team Udayavani |

ಫ್ರಾಂಕ್‌ಫ‌ರ್ಟ್‌: ಹೊರನಾಡ ಕನ್ನಡಿಗರಿಗೆ ಮತ್ತೆ ಮತ್ತೆ ನಮ್ಮತನದ ಚೆಲುವು ಹರಿಸಿ, ಅನ್ಯದಲ್ಲಿ ಆಸಕ್ತಿ ವಹಿಸಿ ಅಪರಿಚಿತ ಲೋಕಕ್ಕೆ ಬಂದವರಿಗೆ ನಾವಿದ್ದೇವೆ ಎಂಬ ಭರವಸೆಯ ಬೆಳಕು ಚೆಲ್ಲುವುದು ರೈನ್‌ಮೈನ್‌ ಕನ್ನಡ ಸಂಘಗಳಂತಹ ಕನ್ನಡ ಸಂಘಗಳು. ಕಳೆದ ರವಿವಾರ ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ ನಗರದ ರೈನ್‌ಮೈನ್‌ ಕನ್ನಡ ಸಂಘ (ಆರ್‌. ಎಂ. ಕೆ. ಎಸ್‌.)ದ ವತಿಯಿಂದ 2024 ಯುಗಾದಿಯ ಸಂಭ್ರಮವನ್ನು “ಹಾಡು ಹರಟೆ ಹಾಸ್ಯ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸಲಾಯಿತು.

Advertisement

ಹಾಡಿನ ತಲ್ಲೀನತೆಗೆ ವಾಸು ದೀಕ್ಷಿತ್‌, ಹರಟೆಯ ಅಲೆಗೆ ವಿನಾಯಕ ಜೋಶಿ, ಹಾಸ್ಯದ ಕಚಗುಳಿಗೆ ಪ್ರಮೋದ್‌ ಅಶ್ನಾಲ್‌ ರಾಯಭಾರಿಗಳಾಗಿ ಕೇವಲ ಫ್ರಾಂಕ್‌ಫ‌ರ್ಟ್‌ ಅಷ್ಟೇ ಅಲ್ಲದೇ ಯುರೋಪಿನ ಹಲವಾರು ಕನ್ನಡ ಸಂಘಗಳಲ್ಲಿ ಲಕ್ಷಂಬರ್ಗ್‌, ನೆದರ್‌ಲ್ಯಾಂಡ್‌, ಲಂಡನ್‌, ಸ್ವೀಡನ್‌ಗಳಲ್ಲಿಯೂ ತಮ್ಮ ಪ್ರಸ್ತುತತೆಯಿಂದ ಕನ್ನಡಿಗರ ಹೃದಯಕ್ಕೆ ಬೆಳದಿಂಗಳ ತಂಪು, ಬೆಲ್ಲದ ಸಹಿ ಉಣಿಸಿದ್ದಾರೆ.

ತೊಲಗಲಿ ದ್ವೇಷ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನವ ಸಂವತ್ಸರ ಎಂಬ ಕುವೆಂಪುರವರ ನುಡಿಯಂತೆ ಬದುಕಿನ ಬವಣೆ, ಸಮಸ್ಯೆಗಳ ಸಿಕ್ಕುಗಳ ನಡುವೆ ಮನಸ್ಸುಗಳಲ್ಲಿ ಮೂಡುವ ಮತ್ಸರ, ದ್ವೇಷಗಳ ಬದಿಗೊತ್ತಿ ಚೈತ್ರ ಮಾಸದ ಹೊಸ ಚಿಗುರಿನಲ್ಲಿ ಪ್ರಕೃತಿ ಹೊಸ ಹುಟ್ಟು ಪಡೆವಂತೆ ನವ ಸಂವತ್ಸರದಲ್ಲ ಎಲ್ಲರಲ್ಲೂ ಪ್ರೀತಿ ಚಿಗುರಿಸಲು ಇಂತಹ ಕಾರ್ಯಕ್ರಮಗಳು ಸೇತುವೆಯಾಗುತ್ತದೆ.

ಹಾಡು: ಜೀವನದಲ್ಲಿ ಬೇವು ಮತ್ತು ಬೆಲ್ಲ ಎರಡನ್ನೂ ಸ್ವೀಕರಿಸಲೇ ಬೇಕು. ಯಾವುದಕ್ಕೂ ‘ಆಗಲ್ಲ ಆನ್ಬೇಡಿ’ ಎಂದು ಹಾಡುತ್ತಲೆ ಕಾರ್ಯಕ್ರಮದಲ್ಲಿ ನೆರೆದಿರುವ ಅಬಾಲವೃದ್ಧರ ವರೆಗೂ ಆಗಲ್ಲ ಅನ್ನದೆ ಕುಣಿಯುವಂತೆ ಹಾಡಿದ ವಾಸು ದೀಕ್ಷಿತ್‌ರವರ ಗಾನ ಎಲ್ಲರ ಮನಗಳಿಗೆ ಸುಧೆಯ ಎರಕವನ್ನೇ ಹೊಯ್ದಿತ್ತು. ಕಣ್ಣಲ್ಲೇ ಹರಸಿ, ಬಾನೆತ್ತರಕ್ಕೆ ಬೆಳೆಸಿ ಎಲ್ಲ ತಿಳಿಸಿ ಮೆಲ್ಲ ನಡೆಸುವ ಅಮ್ಮನ ಪ್ರೀತಿಯ ಸಾಲುಗಳು ಎಲ್ಲರಿಗೂ ಹೃದ್ಯವಾಗುವಂತಿತ್ತು. ಮೂಲತಃ ಮೈಸೂರಿನವರಾದ ವಾಸು ಅವರ ಮೈಸೂರು ಪ್ರೀತಿ ಬೆಂಗಳೂರನ್ನು ದಾಟಿ ಇಡೀ ಕರ್ನಾಟಕವನ್ನೇ ನೆನಪಿಸುತ್ತ ನೆನಪಿನ ಲಹರಿಯಲ್ಲಿ ಮೀಯಿಸಿತ್ತು.

ಯೋಗ್ಯರಾಗಿ, ಭೋಗ್ಯರಾಗಿ ಎಂಬ ದಾಸರ ತತ್ತ್ವ ಪದವನ್ನು ಹಾಡುತ್ತಾ ಅನ್ಯವಾರ್ತೆಯ ಬಿಟ್ಟವರಾಗಿ ಬದುಕಬೇಕೆಂಬ ಸಾಲುಗಳು ಆತ್ಮದೊಳಗೆ ಹೊಕ್ಕಿಸಿದ ಸ್ವರದ ಪರಿ ಸ್ವರಾತ್ಮನ ಸ್ವರ ಲಾಲಿತ್ಯ ಮತ್ತು ಇವರಿಗೆ ಸಾಥ್‌ ಕೊಟ್ಟ ಜೊಯಲ್‌ ಸಕ್ಕಾರಿ, ಮನು ಶ್ರೀವಾತ್ಸವ, ನಂದ ಕಿಶೋರ್‌ ದೇಸಾಯಿ ಮತ್ತು ದತ್ತಾತ್ರೇಯ ದೇಸಾಯಿಯವರ ಒಟ್ಟಾರೆ ಸಂಗೀತ ಮತ್ತು ವಾದ್ಯಗಳ ತಾಳ-ಮೇಳ ಎಲ್ಲರನ್ನೂ ಅವಕ್ಕಾಗಿಸಿತು.

Advertisement

ಹರಟೆ: ಮಾತು ಮಾತು ಮಥಿಸಿ ಮನದೊಳಗಿನ ಮೌನವೂ ಮಾತಾಡುವಂತೆ ಮಾಡಿದ್ದು ವಿನಾಯಕ ಜೋಶಿಯವರು ನಾಯಕ ವಿತ್‌ ವಿನಾಯಕದ ರೂವಾರಿ ಇಂದು ಎಲ್ಲರಿಗೂ ನಾಯಕರಾಗಿ ನಿಂತು ನೆರೆದವರು ತಾಸಿನ ಪರಿವೆ ಮಾಡದೆ ತ್ರಾಸಿಲ್ಲದೆ ಕೂತು ಮನರಂಜನೆ ಪಡೆಯುವಂತೆ ಮಾಡಿದ ಮಾತಿನ ಮೋಡಿಗಾರ, ಕನ್ನಡ ಸಿನೆಮಾ ರಂಗದಲ್ಲಿ ಬಾಲನಟರಾಗಿ, ನಟರಾಗಿ ಜೋಶ್‌ಲೇ ವೆಬ್‌ ಸಿರೀಸ್‌ನ ನಿರ್ದೇಶಕರಾಗಿ ಪ್ರಸಿದ್ಧಿಯಾದ ವಿನಾಯಕ ಜೋಶಿಯವರು ಮಾತಿಗೊಂದು ಹದ ಬೆರೆಸಿ, ಹಾಡಿನ ಸಾಹಿತ್ಯವನ್ನು ಹಿಮ್ಮುಖವಾಗಿ ಹೇಳುವುದು ಕಲಿಸಿ ದೊಡ್ಡವರಿಗಷ್ಟೇ ಅಲ್ಲ ಕಾರ್ಯಕ್ರಮದಲ್ಲಿದ್ದ ಪುಟಾಣಿ ಮಕ್ಕಳ ಸ್ಫೂರ್ತಿಯ ಚಿಲುಮೆಯಾದರು. ಅವರ ಕನ್ನಡ ಭಾಷೆಯ ಸ್ಪಷ್ಟತೆ, ಹಿಡಿತ, ಸರಳತೆ ಎಲ್ಲರಿಗೂ ಮಾದರಿಯಾಗುವಂತಹದ್ದು .

ಹಾಸ್ಯ: ಬಳಸಿದಂತೆಲ್ಲ ಬೆಳೆಯುವ ಅಕ್ಷಯ ಪಾತ್ರೆ ನಗು. ಮಾತಿನ ಮಡಿವಂತಿಕೆ ಎಲ್ಲೂ ಬಿಟ್ಟುಕೊಡದೆ ಉತ್ತರ ಕರ್ನಾಟಕದ ತಮ್ಮ ಭಾಷಾ ಶೈಲಿಯಿಂದ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದವರು ಪ್ರಮೋದ್‌ ಅಶ್ನಾಲ್‌. ದಿನನಿತ್ಯದ ಸಂದರ್ಭಗಳ ಸೂಕ್ಷ್ಮತೆಯಿಂದ ಗಮನಿಸಿ ಅದರಲ್ಲಿ ನಗುವಿನ ಬೊಗಸೆ ತುಂಬಿಸಿಕೊಳ್ಳುವ ಹಾಸ್ಯ ಕಲಾವಿದರು. ಡಿ.ವಿ.ಜಿ.ಯವರ ಸಾಲಿನಂತೆ ನಗುವ, ನಗಿಸುವ, ನಗಿಸಿ, ನಗುತ ಬಾಳುವ ವರಸಿದ್ಧಿ ಪಡೆದವರು. ಸರೋವರದ ನೀರಿನ ಅಲೆಗಳಂತೆ ಆರ್‌.ಎಂ.ಕೆ.ಎಸ್‌. ಯುಗಾದಿ ಕಾರ್ಯಕ್ರಮದಲ್ಲಿ ನಗೆ ಅಲೆಯನ್ನು ಮೂಡಿಸಿದರು.

ಇಂತಹ ಅಭೂತಪೂರ್ವ ಕಾರ್ಯಕ್ರಮ ನಡೆಸುವ ಮೂಲಕ ರೈನ್‌ಮೈನ್‌ ಕನ್ನಡ ಸಂಘ ನವ ಸಂವತ್ಸರವನ್ನು ಕೂಗಿ ಕರೆದಿದೆ. ಬೆರ್ಗನ್‌ ಸಾಲ್‌ಬಾವ್‌ನಲ್ಲಿ ಇದಕ್ಕಾಗಿ 300ಕ್ಕಿಂತಲೂ ಹೆಚ್ಚು ಕನ್ನಡಿಗರನ್ನು ಒಗ್ಗೂಡಿಸಿದೆ. ಕೇವಲ ಫ್ರಾಂಕ್‌ಫ‌ರ್ಟ್‌ ಅಷ್ಟೇ ಅಲ್ಲದೆ ಸ್ಟುಟ್‌ಗಾರ್ಟ್‌ ಬ್ರೆಮನ್‌, ಹೈಡಲ್‌ಬರ್ಗ್‌, ವುಲ್ಸ್‌ ಬರ್ಗ್‌, ಎರ್‌ಲಾಂಗೆನ್‌, ಡ್ರಾಮ್‌ಸ್ಟಾಡ್‌ಗಳಿಂದಲೂ ಕನ್ನಡಿಗರು ಆರ್‌.ಎಂ.ಕೆ.ಎಸ್‌.ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಸಂಘದ ಏಳ್ಗೆಗಾಗಿ ಸಂಘದ ಕಾರ್ಯಕಾರಿ – ಸಹಕಾರ್ಯಕಾರಿ – ಸ್ವಯಂಸೇವಕರ ಕೊಡುಗೆ ಅಪಾರವಾದುದು. ನಿರೀಕ್ಷೆಗಳಿಲ್ಲದೆ ಮಾಡುವ ಕಾರ್ಯಗಳಲ್ಲಿ ಸ್ವಯಂ ತೃಪ್ತಿ, ಸಂತೋಷವೂ ಹೆಚ್ಚು . ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ, ಭಾಷೆಯನ್ನು ಹರಡುವ ಸ್ವಯಂ ಸೇವಕರ ಸ್ವಾರ್ಥ ಸೇವೆ ಶ್ಲಾಘನೀಯ. ‘ಗಜಾನನಯುತಂ ಗಣೇಶ್ವರಂ’ ಎನ್ನುತ ಆದಿನಾಯಕನಿಗೆ ಸಂಗೀತಾರ್ಚನೆ ಮತ್ತು ನಾರಾಯಣತೆ ನಮೋ ನಮೋ ಎಂದು ನೃತ್ಯ ಸೇವೆಯೂ ಒಳಗೊಂಡ ಕಾರ್ಯಕ್ರಮಕ್ಕೆ ಇಂದಿರಾ ಇಂಡಿಯನ್‌ ಫುಡ್ಸ್‌, ಟೋಟಲ್‌ ಎನ್ವರ್ನಮೆಂಟ್‌ ಹೋಮ್ಸ್‌ ಮತ್ತು ಕ್ಯಾಬ್‌ರೈಡ್ಸ್‌ ಅವರ ವತಿಯಿಂದ ಆರ್ಥಿಕ ಸಹಾಯ ದೊರಕಿತು.

ವಿನಾಯಕ ಜೋಶಿಯವರು ಆರ್‌.ಎಂ.ಕೆ.ಎಸ್‌.ನ ಎಲ್ಲ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು . ಹಾಗೂ ಆರ್‌.ಎಂ.ಕೆ.ಎಸ್‌.ನ ವತಿಯಿಂದ ಎಲ್ಲ ಕಲಾವಿದರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ರೈನ್‌ ಮೈನ್‌ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಜುಲೈಯಲ್ಲಿ ನೀಡಿ ಗೌರವಿಸಲಾಯಿತು. ರೈನ್‌ ಮೈನ್‌ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಜುಲೈಯಲ್ಲಿ ನಡೆಯಲಿರುವ ನಾವಿಕೋತ್ಸವಕ್ಕೆ ವಿನಾಯಕ್‌ ಜೋಶಿಯವರ ಸಮ್ಮುಖದಲ್ಲಿ ಚಾಲನೆ ದೊರೆಯಿತು.

*ವರದಿ: ಶೋಭಾ ಚೌಹ್ಹಾಣ್‌, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next