Advertisement
ಹೆದ್ದಾರಿ ತಲುಪಿ ಆಗಿದೆ, ಇನ್ನೇನೂ ತೊಂದರೆ ಯಿಲ್ಲ ಅಂತ ಅಂದುಕೊಂಡರೆ ಸಾಗಿದಷ್ಟು ಮುಗಿಯದ ದೂರ ಪ್ರಯಾಣ ನಿರಂತರ ಇದ್ದೇ ಇದೆ. ಸಾಗುವ ಗಮ್ಯದೆಡೆಗೆ ನೋಟ ಕೇಂದ್ರೀಕೃತ ವಾಗಿರಬೇಕು. ಅಷ್ಟರಲ್ಲೋ ಎಲ್ಲೋ ಮಳೆ ಬೀಳುವ ಅಲ್ಲಲ್ಲ, ಸುರಿಯುತ್ತಿರುವ ಸದ್ದು ಕೇಳಿಸುತ್ತಿ ರುವಂತೆಯೇ ಮನದೊಳಗೆ ಒಂದು ರೀತಿಯ ಅಳುಕು. ಇದೇನಪ್ಪ ಮಳೆಗೂ ಹೀಗೆ ಬೆಚ್ಚಿ ಬೀಳು ವುದುಂಟೇ? ಅಂತ ಅಂದುಕೊಂಡರೆ ಹೌದು ಎಂಬ ಉತ್ತರ ಬರಲೇ ಬೇಕು. ಅಷ್ಟಕ್ಕೂ ಮಳೆ ಎಂಬುದು ಒಂದು ನೆಪ ಅಷ್ಟೆ. ಅದು ಯಾವುದೇ ತರದ ತೊಂದರೆಗಳನ್ನು ನಿವಾರಿಸಲು ಸಾಧ್ಯ ವಾಗದೇ ಕೈ ಚೆಲ್ಲಿ ಕುಳಿತಾಗ ಒದಗುವ ದೀವಟಿಗೆಯೆಂದರೆ ತಪ್ಪಾಗದು. ದುಃಖ ಪಡುತ್ತಾ ಇರುವವನಿಗೆ ಬೇರೆಯವರ ಕಣ್ಣಿಗೆ ಆ ನೋವಿನ ಛಾಯೆ ಕಾಣದಿರಲೆಂದು ಬರುವ ಮಳೆ ಆ ಕಣ್ಣೀರನ್ನು ಮರೆಮಾಚಿ ಜೀವನದ ಹಲವು ಆಯಾಮಗಳನ್ನು ತಿಳಿಸಿಕೊಡುತ್ತದೆ. ಬದುಕು ಎಂದರೆ ಹೀಗೇ ಎಂದು ಹೇಳುವಂತಹ ಸರಳರೇಖೆಗಳಿಲ್ಲ. ಬಂದದ್ದನ್ನು ಎದುರಿಸಿಕೊಂಡು ಹೋಗುವ ನೈಪುಣ್ಯ ಹೊಂದಿರಬೇಕಾಗುತ್ತದೆ. ಅಷ್ಟಕ್ಕೂ ಮನಸ್ಸು ಎಂಬುದು ವಾಯು ವೇಗ ಕ್ಕಿಂತಲೂ ಹೆಚ್ಚು ಚಲನೆಯುಳ್ಳದ್ದು. ಅದರೊಂದಿಗೆ ಚಲಿಸಲು ಈ ದೇಹಕ್ಕೆ ಖಂಡಿತಾ ಸಾಧ್ಯ ವಾಗದು. ಮನಸ್ಸು, ಆತ್ಮನ ಜತೆಗಾರ. ಈ ದೇಹವೋ ಎಲ್ಲೆಂದರಲ್ಲಿ ಬಾಹ್ಯ ಜ್ಞಾನ, ದಾಹ ಪಿಪಾಸೆಗೆ ಒಳಗಾಗುವ ಒಂದು ರೀತಿಯ ಜಾದೂಗಾರನೇ ಹೌದು. ಸರಿಯಾದ ದಾರಿಯಲ್ಲಿ ಸಾಗುತ್ತಾ ಕರ್ಮ ಗಳನ್ನು ಲವಲೇಶವು ಅವಗಣಿಸದೆ ಮಾಡುತ್ತಾ ಸಾಗಿದಾಗ ಬದುಕಿನ ಒಳಾರ್ಥಗಳ ಮಾಗು ವಿಕೆ ಬೆಳಕಿಗೆ ಬರುತ್ತದೆ, ಹೊಳಪು ಪ್ರಜ್ವಲಿಸುತ್ತದೆ.
Related Articles
ಯಾಂತ್ರಿಕ ಬದುಕು ಯಂತ್ರದಂತೆ ಸಾಗುತ್ತಿದೆ. ಪ್ರಚೋದನೆ ನೀಡುತ್ತಾ ಬದುಕಿಗೆ ಹೊಸ ಭಾವನೆಗಳನ್ನು ತುಂಬುತ್ತಾ ಬೆಳಕು ಬೆಳಗಿಸಲು ಸಣ್ಣ ಹಣತೆಯೂ ಸಾಕು. ಆದರೆ ಬೆಳಗಿಸುವ ಸುವಿಶಾಲ ಮನಸ್ಸು ಇರಬೇಕು. ಒಲವ ಹಾದಿಗೆ ಹೂವು ಹಾಸಿದಂತೆ ನಂಬಿಕೆಯೆಂಬ ಬತ್ತಿ ಸ್ವಚ್ಛ ಹಾಗೂ ಶುಭ್ರವಾಗಿರಬೇಕು. ಇತ್ತಿತ್ತಲಾಗಿ ಶುಭ್ರತೆ ಯೆಂಬುದು ಬರಿಯ ಹೇಳಿಕೆಯ ಪದವಾಗಿ ಸಂಗ್ರಹಯೋಗ್ಯವಾಗಿ ನಿಂತಿದೆ ಎಂದರೆ ತಪ್ಪಾಗಲಾರದು. ಮನಸ್ಸು ಹುಳುಕು ಆಗಿದೆ. ಸಿಹಿತಿಂಡಿ ತಿಂದ ಬಳಿಕ ಬಾಯಿಯನ್ನು ಸ್ವಚ್ಛಗೊಳಿಸಲು ಪುರುಸೊತ್ತು ಇಲ್ಲದ ಮೇಲೆ ಹುಳುಕು ಸಾಮಾನ್ಯವಾಗಿ ಹಲ್ಲುಗಳಿಗೆ ಬಂದು ಬಿಡುತ್ತವೆ. ಇದು ಉತ್ಪ್ರೇಕ್ಷೆಯ ಮಾತಲ್ಲ. ಹುಳುಕು ಹಲ್ಲುಗಳ ಹತ್ತಿರವೇ ಇರುವ ಒಬ್ಬಂಟಿ ನಾಲಗೆ ಹುಳುಕಿನ ಸಹವಾಸವನ್ನು ಮಾಡುವುದು ಸಹಜ. ಒಳ್ಳೆಯ ಮಾತುಗಳು ಬರಬೇಕಾದರೆ ಸಜ್ಜನರ ಸಂಗವಿರಬೇಕು ಅಥವಾ ಅನುಭವಿ ಹಿರಿಯರ ಆದರ್ಶ ನುಡಿಗಳಿರಬೇಕು. ಇವೆಲ್ಲವೂ ಈಗ ಪರದೆಯ ಹಿಂದೆ ಬೆಳಕು ಹಾಯಿಸಿ ದಾಗಲಷ್ಟೇ ಕಾಣುವ ಅಂಶಗಳಾಗಿವೆ. ಅಂತರಂಗದ ಬೆಳಕು ಹೊರಜಗತ್ತಿಗೆ ತೆರೆದು ಕೊಂಡಾಗ ಮಾತ್ರ ನಿಜದ ಅನಾವರಣವಾಗಲು ಸಾಧ್ಯವಾಗುತ್ತದೆ. ಬೆಂಕಿಯಲ್ಲಿ ಕಾಯಿಸಿದಾಗ ಹೇಗೆ ಚಿನ್ನವು ಕಪ್ಪಾಗಿರುವುದೋ ಬಳಿಕ ಸುತ್ತಿಗೆಯ ಮೃದು ಹೊಡೆತಕ್ಕೆ ಮರುಗಿ ಮಾರ್ಪಾಟು ಹೊಂದಿ ಪರಿಶುದ್ಧ ಚಿನ್ನ ದೊರಕು ವಂತೆ ಬದುಕೆಂಬ ಈ ಬಂಗಾರ, ಕಷ್ಟಗಳೆಂಬ ಹೊಡೆತಕ್ಕೆ ಸಿಕ್ಕಿ ಆ ಬಳಿಕ ತಾಳ್ಮೆಯೊಂದಿಗೆ ಜಯಿಸಿ ಪರಿಶುದ್ಧವಾಗುತ್ತದೆ. ಕಷ್ಟಗಳೇ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ.
Advertisement
ಬದುಕಿನ ಹಲವು ಘಟ್ಟಗಳು ಕೆಲವೊಮ್ಮೆ ತೀರಾ ಸರಳವಾಗಿ ಹರಿಯುವ ಸಲಿಲದಂತೆ ಸಾಗುತ್ತಿರುತ್ತವೆ. ಮತ್ತೆ ಕೆಲವೊಮ್ಮೆ ಭೋರ್ಗರೆದು ಪ್ರಪಾತಕ್ಕೆ ಸುರಿಯುವ ಜಲಪಾತದಂತೆ ರುದ್ರ ರಮಣೀಯವಾಗಿರುತ್ತದೆ. ಬದುಕು ಇವೆರಡ ರಂತೆ ಇರಲೇ ಬೇಕೆಂದೇನಿಲ್ಲ. ಭಿನ್ನವಾಗಿಯೂ ಇರಬಹುದು ಅಥವಾ ಕಾಕತಾಳಿಯವೆಂಬಂತೆ ಹೋಲಿಕೆ ಕಂಡು ಬರಬಹುದು. ಜಗತ್ತಲ್ಲಿ ಒಬ್ಬರಂತೆ ಇನ್ನೊಬ್ಬರು ಇಲ್ಲವೆಂದಾದರೂ ಕೆಲವೊಮ್ಮೆ ಅಲ್ಪ ಸ್ವಲ್ಪ ಹೋಲಿಕೆ ಕಂಡು ಬರುವು ದುಂಟು. ಹಾಗೆಯೇ ಮಾಡುವ ಕಾರ್ಯಗಳು, ಅನುಭವಿಸಿದ ಕಾಲಘಟ್ಟದ ಪರಿಣಾಮಗಳು ಏಕರೂಪವಾಗಿರಲು ಸಾಧ್ಯವಿಲ್ಲ.
ಹೋಲಿಕೆ ಇದ್ದರೂ ಅದು ಕ್ಷಣಿಕವೇ ಆಗಿರುವುದು. ಬದುಕೆಂಬ ಮಹಾಸಾಗರದೊಳಗೆ ಹುದುಗಿದ ಆಗಾಧ ಸಂಪನ್ಮೂಲಗಳನ್ನು ವ್ಯವಸ್ಥಿತ ರೀತಿಯಲ್ಲಿ ಜೋಡಿಸಿಕೊಂಡು ದಾರಿಯನ್ನು ಪಯಣಿ ಸಬೇಕಿದೆ. ಹೆಜ್ಜೆ ತಪ್ಪದೇ ಪರಾಮರ್ಶಿಸಿ ನಡೆಯುವ ವ್ಯವಧಾನ ಇನ್ನಷ್ಟು ಬೆಳೆಸಿಕೊಳ್ಳ ಬೇಕಾಗಿದೆ. ಒಡಲಿನ ನ್ಯಾಯ, ನೀತಿ, ಧರ್ಮ, ನಂಬಿಕೆಗಳಿಗೆ ಚ್ಯುತಿ ಬರದಂತೆ ಜೀವನ ಸಾಗಿಸುವ ಛಾತಿ ಇನ್ನಷ್ಟು ಹೆಚ್ಚು ಬೇಕಾಗಿದೆ. ಬದುಕು ಎಂದರೆ ಬೇಕಾಬಿಟ್ಟಿಯಾಗಿ ಸಾಗುವುದಕ್ಕಲ್ಲ. ಹಾದಿ ನಿರ್ಮಲವಾಗಿದ್ದಾಗ ಎಲ್ಲರೂ ಸಾಗುತ್ತಿರುತ್ತಾರೆ. ಆದೇ ಹಾದಿಯಲ್ಲಿ ಕೊಳಚೆ ನಿರ್ಮಿಸಿದಿರೋ ಮೂಗು ಮುಚ್ಚಿಕೊಂಡು ದೂರ ಹೋಗುತ್ತಾರೆ.
ಬರಿಯ ಕಾಂಕ್ರೀಟ್ ನಿರ್ಮಾಣದಿಂದ ಸ್ವಚ್ಛತೆ ಬರಲಾರದು ಅಥವಾ ಕಲ್ಮಶ ಮಾಯವಾಗದು. ಅಂಗೈಯಲ್ಲಿ ಮಣ್ಣೇ ಆಗಬಾರದು ಎಂದರೆ ಮಣ್ಣಿನ ಜತೆ ಆಟ ಹೇಗೆ ಆಡುವುದು? ಮಣ್ಣು ಬೆಳಕು ಕಾಣುವುದರಿಂದ ಹಿಡಿದು ಬೆಳಕು ಮರೆಯಾದ ಬಳಿಕವೂ ಅಗತ್ಯವಾಗಿ ಬೇಕಾಗು ವಂತದ್ದು. ಅಂತಹ ಮಣ್ಣು ಈಗ ಬಿಸಿಯಾಗಿ ಭೂಮಿ ತನ್ನ ಒಡಲ ಶಾಖ ಹೆಚ್ಚಿಸುವಂತಾ ಗುತ್ತಿರುವುದು ಮನುಷ್ಯನ ಅತಿಯಾಸೆಯಿಂದ. ಹಸುರು ಬೆಳೆದು ಹಸನು ಮಾಡಲು ಬಿಡದೇ ತಾಪ ಕಡಿಮೆಯಾಗುವುದೆಂತು?, ಕಾಲಿಗೆ ಮಣ್ಣಿನ ಸ್ಪರ್ಶ ಆಗದ ಹೊರತು ಮಣ್ಣನ್ನು ಹೃದಯದಲ್ಲಿಟ್ಟು ಪೂಜಿಸುವುದೆಂತು?, ಮಣ್ಣಿನ ಮಜ್ಜನ- ಸಕಲ ರೋಗಕ್ಕೂ ರಾಮ ಬಾಣ. ತಡವಾದರೂ ಅರಿತ ಮೇಲೆ ಇನ್ನಾದರೂ ಮಣ್ಣನ್ನು ಪೂಜಿಸುವ ಮನ ಹೆಚ್ಚಾಗಲಿ.
-ಮಲ್ಲಿಕಾ ಜೆ. ರೈ, ಪುತ್ತೂರು