ಆಕಾಶದಿಂದ ನೂಲಿನೆಳೆಗಳನ್ನು ಭೂಮಿಗೆ ಇಳಿಬಿಟ್ಟಂತೆ ಕಾಣುವ ಮಳೆ, ಕಣ್ಣಿಗೆ ಒಂದು ಹಬ್ಬವೇ ಸರಿ. ಮಳೆಯ ವಿಧಗಳ್ಳೋ ಹಲವು. ರಪರಪನೆ ಕಲ್ಲು ಎಸೆದಂತೆ ನಾಲ್ಕಾರು ದೊಡ್ಡ ಹನಿಗಳನ್ನು ಉದುರಿಸಿ ಲಗುಬಗೆಯಿಂದ ಓಡಿ ಹೋಗುವ ಮಳೆ ಒಂದಾದರೆ, ಅತಿ ಸಣ್ಣ ಹನಿಗಳಾಗಿ ನೂಲಿನಂತೆ ಸಣ್ಣಗೆ ದಿನವಿಡೀ ಸುರಿಯುವ ಮಳೆ ಇನ್ನೊಂದು. ಕಾರ್ಮೇಘದೊಂದಿಗೆ ಬಂದು ಕತ್ತಲೆ ಆವರಿಸುವಂತೆ ಮಾಡಿ ಗುಡುಗಿ ಸಿಡಿಲಬ್ಬರಿಸಿ ಭಯ ಹುಟ್ಟಿಸುವ ಮಳೆ ಇನ್ನೊಂದೆಡೆ. ದೂರದಲ್ಲಿ ಮಳೆ ಸುರಿಯುವುದು ಕಂಡರೂ ನಾವಿರುವಲ್ಲಿಗೆ ಹಂತಹಂತವಾಗಿ ಹಲವು ನಿಮಿಷಗಳ ನಂತರ ಬರುವ ಮಳೆ, ಇನ್ನು ಕೆಲವೊಮ್ಮೆ ಆಕಾಶದಲ್ಲಿ ಅಷ್ಟೇನೂ ಮೋಡಗಳಿಲ್ಲದಿದ್ದರೂ ಒಮ್ಮೆಲೇ ಎಲ್ಲಿಂದಲೋ ಓಡಿ ಬಂದು ಸುರಿದು ಹೋಗುವ ಮಳೆ. ಹೀಗೆ, ಹಲವು ಶೈಲಿಗಳನ್ನು ಪ್ರದರ್ಶಿಸುತ್ತದೆ ಈ ಮಳೆ. ಬಿಡದೇ ಜಡಿಮಳೆ ಸುರಿಯುತ್ತಿರಬೇಕಾದರೆ ಬಿಸಿಬಿಸಿ ಚಾ/ಕಾಫಿ ಹೀರುತ್ತ, ಕುರುಕಲು ತಿಂಡಿ ತಿನ್ನುತ್ತ ಮಳೆಯನ್ನು ಕಣ್ತುಂಬಿಕೊಳ್ಳುವುದು ಅದೆಂಥಾ ಅನುಭೂತಿ! ಮೊದಲ ಮಳೆಯ ದಿನಗಳಲ್ಲಿ ಅಕಸ್ಮಾತ್ ಆಲಿಕಲ್ಲು ಬಿದ್ದರೆ ಮಕ್ಕಳ ಸಂಭ್ರಮ ಹೇಳತೀರದು. ಮಳೆಯಲ್ಲಿ ಒದ್ದೆಯಾಗುವುದನ್ನು ಲೆಕ್ಕಿಸದೇ ಅಂಗಳಕ್ಕಿಳಿದು ಆಲಿಕಲ್ಲು ಹೆಕ್ಕುವ ಮಜಾ ವರ್ಣಿಸಲು ಅಸಾಧ್ಯ.
ನದಿ, ತೋಡುಗಳಲ್ಲಿ ನೀರು ತುಂಬಿ ಅದು ಎಲ್ಲೆ ಮೀರಿ ರಭಸವಾಗಿ ಹರಿಯುವ ರುದ್ರ ಸೌಂದರ್ಯ ನೋಡಲು ಜನರಿಗೆ ಎಲ್ಲಿಲ್ಲದ ಆಸಕ್ತಿ. ಒಂದೆರಡು ದಿನ ಬಿಡದೇ ಮಳೆ ಸುರಿದು ನದಿ, ತೋಡುಗಳ ನೀರು ಉಕ್ಕಿ ಹರಿದು ಹೊಲಗದ್ದೆಗಳಿಗೆ ನುಗ್ಗಿದಾಗ ಆ ನೀರಲ್ಲಿ ನುಗ್ಗಿ ಬರುವ ದೊಡ್ಡ ಗಾತ್ರದ ಮೀನುಗಳನ್ನು ಹಿಡಿಯಲು ಜನರು ರಾತ್ರಿ ಹೊತ್ತಿನಲ್ಲಿ ತಂಡಗಳಲ್ಲಿ ಹೊರಡುತ್ತಾರೆ. ಹಗಲು ಹೊತ್ತಿನಲ್ಲಿ ಕೆಲವರು ಗಾಳ ಹಾಕಿ ಮೀನು ಹಿಡಿಯುತ್ತಾರೆ. ಮಳೆಗಾಲದಲ್ಲಿ ಹೇರಳವಾಗಿ ಏಡಿಗಳು ಸಿಗುವುದರಿಂದ ಅದನ್ನು ಹಿಡಿಯಲು ಹೋಗುವುದೂ ಗಂಡಸರಿಗೆ ಒಂದು ಮೋಜು. ಮಳೆ ಬಿರುಸುಗೊಂಡ ನಂತರ ಕೃಷಿ ಕೆಲಸಗಳಿಗೆ ಅಲ್ಪಕಾಲದ ರಜೆ ಸಿಗುವ ಈ ಕಾಲದಲ್ಲಿ ಮಲೆನಾಡು, ಕರಾವಳಿಗಳ ಜನರು ಇಂತಹ ಮೀನು ಹಿಡಿಯುವ ಮೋಜಿನಲ್ಲಿ ಮಗ್ನರಾಗುತ್ತಾರೆ. ಮಳೆಯನ್ನು ನೋಡುವಾಗ ನನ್ನ ಮನಸ್ಸಲ್ಲಿ ನೆನಪಿನ ಮಳೆ ಸುರಿಯತೊಡಗುತ್ತದೆ. ನನಗರಿವಿಲ್ಲದೇ ನನ್ನ ಬಾಲ್ಯಕಾಲಕ್ಕೆ ಮನಸ್ಸು ಹಾರಿ ಬಿಡುತ್ತದೆ.
ಬೇಸಗೆ ಕಾಲ ಕೊನೆಯಾಗುವ ಸಮಯ. ಮಳೆಗಾಲ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ ಎಂಬ ಸೂಚನೆ ಕೊಡುತ್ತಾ ಆಕಾಶದಲ್ಲಿ ಮೋಡಗಳು ಅತ್ತಿಂದಿತ್ತ ಚಲಿಸಲಾರಂಭಿಸುವಾಗ ಮಳೆಗಾಲಕ್ಕಿರುವ ಕಟ್ಟಿಗೆ ಸಂಗ್ರಹಿಸಿಯಾಗಿಲ್ಲ ಎಂಬ ಚಿಂತೆ ಅಪ್ಪನಿಗೆ. ಕೆಲಸದವರಲ್ಲಿ ಹಾಗೂ ಹೀಗೂ ಕಟ್ಟಿಗೆ ಸಿಗಿಸಿ, ತುಂಡುಮಾಡಿ ಹೊರಗಿನ ಶೆಡ್ಡಿನಲ್ಲಿ ಜೋಡಿಸಿ ಇಡಿಸಿದಾಗ ಅಮ್ಮನಿಗೆ ನೆಮ್ಮದಿ. ಆದರೂ ಅಗತ್ಯಕ್ಕೆ ಇರಲಿ ಎಂದು ರಬ್ಬರ್ ಮರದ ಒಣಗೆಲ್ಲುಗಳನ್ನು ಹೆಕ್ಕಿ ತಂದು ರಾಶಿ ಮಾಡಲು, ತೆಂಗಿನ ಒಣಗಿದ ಗರಿ, ತೆಂಗಿನ ಸಿಪ್ಪೆ ಇತ್ಯಾದಿಗಳನ್ನು ಕೂಡ ಒಟ್ಟು ಮಾಡಿಡಲು ಅಮ್ಮ ನಮ್ಮ ಸಹಾಯ ಪಡೆಯುತ್ತಿದ್ದರು. ಮಳೆಗಾಲಕ್ಕಾಗಿ ಮನೆಯೊಳಗೆ ಬೇಕಾದ ಅಗತ್ಯ ವಸ್ತುಗಳ ಸಂಗ್ರಹವೂ ಆಗುತ್ತಿತ್ತು. ಅಂಗಳದಲ್ಲಿ ಕೊನೆಯ ಕೊಯ್ಲಿನ ಅಡಿಕೆ ಒಣಹಾಕಿರುತ್ತದೆ. ಎಣ್ಣೆ ತಯಾರಿಸಲು ಕೊಬ್ಬರಿ ಒಣಹಾಕಿರುತ್ತದೆ. ಇನ್ನೂ ಏನೇನೋ ಕೆಲಸ ಬಾಕಿ ಉಳಿದಿರುವಾಗ ಅನಿರೀಕ್ಷಿತವಾಗಿ, ಗಾಳಿ, ಗುಡುಗು, ಸಿಡಿಲಿನೊಂದಿಗೆ ಮಳೆರಾಯ ಆಗಮಿಸಿಬಿಡುತ್ತಾನೆ. ಮಳೆ ಬಂದೀತೆಂಬ ಸಣ್ಣ ಕಲ್ಪನೆಯೂ ಇಲ್ಲದೇ ಕೊಡೆಯಿಲ್ಲದೇ ಹೊರಗೆ ಹೊರಟರೆ ಒಮ್ಮೆಲೇ ಆಕಾಶದಲ್ಲಿ ಕಾರ್ಮೇಘಗಳು ದಟ್ಟೆçಸಿ ಮಳೆ ಸುರಿದೇ ಬಿಡುತ್ತದೆ. ಕಾತರದಿಂದ ಕಾಯುತ್ತಿದ್ದ ಮಳೆಯನ್ನು ಹುಸಿಮುನಿಸಿನಿಂದ ಸ್ವಾಗತಿಸುತ್ತೇವೆ. ಹೇಳಿ ಬರಬಾರದೆ? ಹೀಗೆ ಅನಿರೀಕ್ಷಿತ ಅತಿಥಿಯಾಗಿ ಬರುವುದು ಸರಿಯೆ? ಎಂದು ಪ್ರೀತಿ ತುಂಬಿದ ಮುನಿಸಿನಿಂದ ಕೇಳಿದರೆ, ಒಮ್ಮಿಂದೊಮ್ಮೆಲೇ ಮಳೆರಾಯನಿಗೆ ಪಿತ್ತ ನೆತ್ತಿಗೇರಿ ಕಪ್ಪು ಕಾರ್ಮೇಘವಾಗುತ್ತಾನೆ. ಸಿಟ್ಟಿನಿಂದ ಸಿಡಿಮಿಡಿಗೊಳ್ಳುತ್ತ ಗುಡುಗಿ, ಮಿಂಚಿ, ಸಿಡಿಲಬ್ಬರದಿಂದ ಆರ್ಭಟಿಸಿ ಸುರಿಯತೊಡಗುತ್ತಾನೆ. ಸ್ವಲ್ಪ ಹೊತ್ತಿನ ಆರ್ಭಟದ ನಂತರ ಕೋಪವಿಳಿದಾಗ ತಂಗಾಳಿ ಹರಡಿ, ಮೆದುವಾಗಿ ಸುರಿದು ಮೆಲ್ಲನೆ ಮರಳುತ್ತಾನೆ. ಆದರೂ ಮತ್ತೆ ಕೆಲವು ದಿನಗಳವರೆಗೆ ಅವನ ಆರ್ಭಟ ಹಾಗೇ ಮುಂದುವರಿಯುತ್ತದೆ. ಮತ್ತೆ ಬಂದವನಿಗೆ ನಮ್ಮ ಆತಿಥ್ಯದ ಮೇಲಿನ ಪ್ರೀತಿಯೋ ಏನೋ, ಮರಳದೇ ಕೆಲವು ತಿಂಗಳ ಕಾಲ ಇಲ್ಲೇ ಠಿಕಾಣಿ ಹೂಡುತ್ತಾನೆ. ಆಮೇಲೆ ಹೋಗಿ ಬಂದು ಹೋಗಿ ಬಂದು ಇರುವವನು ಮತ್ತೂಮ್ಮೆ ಯಾಕೋ ಮುನಿಸಿ ಆರ್ಭಟಿಸಿ ಗುಡುಗಿ ಸಿಡಿಲಬ್ಬರದಲಿ ಸುರಿಯುತ್ತಾ, ಕೊನೆಗೆ ತಣ್ಣಗಾಗಿ ಮುಂದಿನ ವರ್ಷ ಮತ್ತೆ ಬರುವೆನೆಂದು ಮರಳುತ್ತಾನೆ.
ಆ ಬಿರುಮಳೆಯ ದಿನಗಳಲ್ಲಿ ನಾವು ಮಕ್ಕಳು ಸುಮಾರು ಐದು ಕಿ. ಮೀ. ನಡೆದು ಶಾಲೆಗೆ ಹೋಗಬೇಕಿತ್ತು. ನಮ್ಮ ದಾರಿಯಲ್ಲಿ ಕೃಷಿಯಿಲ್ಲದೇ ಖಾಲಿಬಿದ್ದಿದ್ದ ಒಂದೆರಡು ಗುಡ್ಡಗಳನ್ನು ದಾಟಿ ಹೋಗಬೇಕಿತ್ತು. ಮಳೆಗಾಲದ ಆರಂಭದಲ್ಲಿ ಮಳೆನೀರು ಗುಡ್ಡದ ಮೇಲಿಂದ ಹರಿದು ಬಂದರೆ ಸ್ವಲ್ಪ ದಿನ ಕಳೆಯುವಾಗ ಶುದ್ಧ ತಿಳಿ ಒರತೆನೀರು ಹರಿದು ಬರುತ್ತಿತ್ತು. ಅದರಲ್ಲಿ ಕಾಲಾಡಿಸಿ ಆಟವಾಡುತ್ತಾ ಆ ಸಣ್ಣ ಗುಡ್ಡಗಳ ಬುಡದಿಂದ ಸಾಗುವಾಗ ನಮಗಾಗುತ್ತಿದ್ದ ಆನಂದ ಅವರ್ಣನೀಯ. ಸ್ವಲ್ಪ ದೂರದವರೆಗಿನ ಅಗಲವಾದ ಕಚ್ಚಾ ರಸ್ತೆಯ ಬದಿಯ ಚರಂಡಿಯಲ್ಲಿ ಮಳೆನೀರು ತಂಗಿ ನಿಲ್ಲುತ್ತಿತ್ತು. ಅದರಲ್ಲಿ ತೇಲುವ ಮರಿ ಮೀನುಗಳನ್ನು ನೋಡುವಾಗ ನಮಗೆ ಖುಷಿಯೋ ಖುಷಿ. ಆದರೆ, ಮನೆಯಲ್ಲಿ ಅಮ್ಮನ ಬಳಿ ಈ ಕುರಿತು ಹೇಳಿದರೆ ಅದು ಮೀನಲ್ಲ, ಕಪ್ಪೆಯ ಮರಿಗಳು ಎನ್ನುತ್ತಿದ್ದರು. ಕಪ್ಪೆಯ ಮರಿಗೆ ಬಾಲವಿರಲು ಸಾಧ್ಯವೇ ಇಲ್ಲ, ಹಾಗಾಗಿ, ಅವು ಮೀನುಗಳೇ ಎಂದು ನಾವು ಬಲವಾಗಿ ನಂಬಿದ್ದೆವು. ಮುಂದೆ ವಿಜ್ಞಾನ ಪಾಠದಲ್ಲಿ ಕಪ್ಪೆಯ ಗೊದಮೊಟ್ಟೆಗಳ ಕುರಿತು ಕಲಿತಾಗ ನಮಗೆ ಸತ್ಯದ ಅರಿವಾಯಿತು. ಗುಡ್ಡ ದಾಟಿದ ಮೇಲೆ ನಾವು ನೀರು ಹರಿಯುವ ಸಣ್ಣ ಒಂದೆರಡು ಹಳ್ಳಗಳನ್ನೂ ಒಂದು ದೊಡ್ಡ ಹಳ್ಳವನ್ನೂ ದಾಟಬೇಕಿತ್ತು. ಅವುಗಳಲ್ಲಿ ನಿಜವಾದ ಮೀನಿನ ಮರಿಗಳು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ನಮ್ಮ ದಾರಿಯಲ್ಲಿ ಗದ್ದೆಗಳು ಎದುರಾಗುವಾಗ ಗದ್ದೆಯ ಬದುವಿನ ಮೇಲೆ ನಡೆಯಬೇಕಿತ್ತು. ಕೆಲಸದವರು ಕಳೆ ಕಿತ್ತು ಹಾಕಿದಾಗ ಆ ಕೆಸರು ತುಂಬಿದ ಬದುವಿನಲ್ಲಿ ಸಾಗುವ ಹವಾಯಿ ಚಪ್ಪಲ್‌ಧಾರಿಗಳಾದ ನಮ್ಮ ಸಮವಸ್ತ್ರಗಳಲ್ಲಿ ಕೆಸರಿನ ಚಿತ್ತಾರ ಮೂಡುತ್ತಿತ್ತು. ಈ ದೀರ್ಘ ಪ್ರಯಾಣದ ಮಧ್ಯೆ ಒಂದೆರಡು ಮಳೆಯಾದರೂ ಸುರಿದು ನಾವು ಪೂರ್ತಿ ಒದ್ದೆಯಾಗುತ್ತಿದ್ದೆವು. ಪುಸ್ತಕ ಒದ್ದೆಯಾಗದಿರಲು ನಾವು ಹರಸಾಹಸ ಮಾಡಬೇಕಿತ್ತು. ಬೆಳಗ್ಗೆ ಶಾಲೆ ತಲುಪಿದ ಮೇಲೆ ಶೌಚಾಲಯಕ್ಕೆ ತೆರಳಿ ಬಟ್ಟೆ ಹಿಂಡಿದ ಮೇಲಷ್ಟೇ ತರಗತಿಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಒಂದೆರಡು ದಿನ ಬಿಡದೇ ಮಳೆ ಸುರಿಯುವಾಗ ಶಾಲೆಗೆ ಹೋಗುವ ದಾರಿಯಲ್ಲಿ ನಾವು ಬೇಕೆಂದೇ ಒದ್ದೆಯಾಗುತ್ತಿದ್ದೆವು. ನಮ್ಮನ್ನು ನೋಡಿಯಾದರೂ ಶಾಲೆಗೆ ರಜೆ ಕೊಡಲಿ ಎಂಬುದಕ್ಕೆ ಇದು ನಮ್ಮ ಉಪಾಯವಾಗಿತ್ತು. ನಮ್ಮ ಊಹೆ ತಪ್ಪುತ್ತಿರಲಿಲ್ಲ. ಮಳೆಯ ನಾಡಿಮಿಡಿತ ನಮ್ಮ ಸುದೀರ್ಘ ನಡಿಗೆಯಿಂದಾಗಿ ನಮಗೆ ಕರಗತವಾಗಿತ್ತು. ಇವತ್ತು ರಜೆ ಸಿಗಬಹುದೆಂದು ನಮ್ಮೊಳಗಿನ ದಿವ್ಯದೃಷ್ಟಿ ಹೇಳಿದರೆ ಖಂಡಿತವಾಗಿಯೂ ರಜೆ ಸಿಗುತ್ತಿತ್ತು. ನಿರಂತರ ಮಳೆಯಲ್ಲಿ ನೆನೆದು ಶಾಲೆ ತಲುಪುವಾಗಲೂ, ಸಂಜೆ ಮನೆ ತಲುಪುವಾಗಲೂ ನೀರಿನ ಸಂಪರ್ಕದಿಂದ ನಮ್ಮ ಅಂಗೈ, ಅಂಗಾಲುಗಳು ಸುಕ್ಕುಗಟ್ಟಿರುತ್ತಿದ್ದವು. ಸಂಜೆ ಮನೆಗೆ ಬಂದು ಬಟ್ಟೆ ಬದಲಿಸಿ ಸ್ನಾನಮಾಡಿ ಒಲೆಯ ಮುಂದೆ ಚಳಿಕಾಯಿಸಲು ಕುಳಿತಾಗ ಹೋದ ಜೀವ ಬಂದಂತಾಗುತ್ತಿತ್ತು. ಅಮ್ಮ ಕೊಡುವ ಬಿಸಿ ಚಹಾ ಹಾಗೂ ತಿಂಡಿ ಆಗ ಅಮೃತ ಸಮಾನವೆನಿಸುತ್ತಿತ್ತು. ಮಳೆಗಾಲದ ರಾತ್ರಿಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕವಿಲ್ಲದ ನಮ್ಮ ಮನೆಯಲ್ಲಿ ಚಿಮಣಿ ದೀಪದ ಬಳಿ ಕುಳಿತು ಓದು-ಬರೆಹ, ಊಟ, ಪ್ರಾರ್ಥನೆ ಮುಗಿಸಿ ಅಬ್ಬರಿಸುವ ಮಳೆಯಲ್ಲಿ ಚಳಿಯಿಂದ ನಡುಗುತ್ತ ಹೊರಗೆ ನೋಡಿದರೆ ಅಲ್ಲಿ ಒಂದು ಜಾತಿಯ ಕಾಡು ಹಣ್ಣಿನ ಬೃಹತ್ ಮರವೊಂದರಲ್ಲಿ ಸಾವಿರಾರು ಮಿಂಚುಹುಳುಗಳು ಒಮ್ಮೆಲೇ ಮಿನುಗಿ, ಮಬ್ಟಾಗಿ, ಪುನಃ ಮಿನುಗುವ ಅದ್ಭುತ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ಸಾದಾ ಕಪ್ಪೆಗಳು ಹಾಗೂ ಮರಗಪ್ಪೆಗಳು ವಟರ್ ವಟರ್ ಎಂದು ವಿವಿಧ ಸ್ಥಾಯಿಯ ಸ್ವರಗಳನ್ನು ಹೊಮ್ಮಿಸುತ್ತ ಸಂಗೀತ ಕಛೇರಿ ಆರಂಭಿಸಿಬಿಡುತ್ತಿದ್ದವು. ನಮ್ಮದೇ ಜಮೀನಿನ ನಡುವೆ ಹರಿಯುವ ಸಣ್ಣ ತೊರೆಯೊಂದು ಕಲ್ಲುಗಳಿಗೆ ಅಪ್ಪಳಿಸುತ್ತಾ ಇಳಿಜಾರಲ್ಲಿ ಧುಮುಕುತ್ತಾ ಹರಿಯುವ ಶಬ್ದವೂ ಇನ್ನೊಂದು ಕಡೆಯಿಂದ ಹಿಮ್ಮೇಳ ಒದಗಿಸುವಾಗ ಪಟಪಟನೆ ಉದುರುವ ಮಳೆಹನಿಗಳ ಸಂಗೀತವನ್ನು ಆಸ್ವಾದಿಸುತ್ತ ಮೆಲ್ಲನೆ ಹಾಸಿಗೆಯಲ್ಲಿ ಮಲಗಿ ಚಳಿಯಿಂದ ರಕ್ಷಿಸಿಕೊಳ್ಳಲು ಹೊದಿಕೆಯೊಳಗೆ ಮುದುರಿಕೊಂಡು ನಿದ್ರೆಗೆ ಜಾರುತ್ತಿದ್ದೆವು.
ಹಲವಾರು ವರ್ಷಗಳಿಂದೀಚಿಗೆ ನಮ್ಮ ಬಾಲ್ಯದಲ್ಲಿದ್ದ ರೀತಿಯ ಮಳೆಯನ್ನೇ ನೋಡಿರಲಿಲ್ಲ. ಮಳೆಗಾಲ ಹೌದೋ ಅಲ್ಲವೋ ಎಂಬ ಸಂದೇಹ ಬರುವ ಮಟ್ಟಿಗೆ ಮಳೆಯ ಆರ್ಭಟ ಕಡಿಮೆಯಾಗಿತ್ತು. ಮಳೆಗೆ ರಜೆ ಕೊಡುವ ಸಂದರ್ಭವೇ ಇಲ್ಲವಾಗಿತ್ತು. ಪ್ರತಿವರ್ಷವೂ ನಾನು ರಸ್ತೆ ಬದಿಯ ಚರಂಡಿಗಳಲ್ಲಿ ಆ ಹಿಂದಿನ ಕಾಲದಂತೆ ಒರತೆ ನೀರು ಒಸರುವುದನ್ನೇ ಹುಡುಕುತ್ತಿ¨ªೆ. ಮಳೆ ನೀರು ಕೂಡ ಅಲ್ಲಿ ಹರಿದಿಲ್ಲವೇನೋ ಎಂಬಂತೆ ಅದು ಗೋಚರಿಸುತ್ತಿತ್ತು. ಆದರೆ, ಈ ವರ್ಷ ಆ ನಮ್ಮ ಬಾಲ್ಯಕಾಲದ ಮಳೆ ಮರಳಿ ಬಂದಿದೆ. ಎಲ್ಲಿ ನೋಡಿದರಲ್ಲಿ ಒರತೆ ನೀರು ಉಕ್ಕುತ್ತಿದೆ. ಮಳೆಯ ತೀವ್ರತೆಗೆ ಅಲ್ಲಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟರಲ್ಲೇ ಮೂರು ಬಾರಿ ಮಳೆಪ್ರಯುಕ್ತ ಶಾಲೆಗಳಿಗೆ ರಜೆ ಸಾರಲಾಗಿದೆ. ಆದರೆ ಇಷ್ಟೊಂದು ಹೆಚ್ಚು ಮಳೆ ಬರುತ್ತಿರುವುದಕ್ಕೆ ಸಂತೋಷ ಪಡಬೇಕೋ, ದುಃಖಪಡಬೇಕೋ ತಿಳಿಯುತ್ತಿಲ್ಲ. ಏಕೆಂದರೆ, ಅಂದಿನ ರೀತಿಯಲ್ಲಿ ಇಂದಿನ ಪರಿಸರ ಉಳಿದಿಲ್ಲ. ಮಳೆಯಿಂದ ಜನಜೀವನ ಸ್ತಬ್ಧವಾಗುತ್ತಿದೆ. ಹಿಂದೆ ಎಂತಹ ಬಿರುಮಳೆಯೇ ಬರಲಿ, ಗದ್ದೆಗಳಲ್ಲಿ ಜನರು ಗೊರಬು ಹಾಕಿಕೊಂಡು ಮಾಮೂಲಿನಂತೆ ದುಡಿಯುತ್ತಿದ್ದರು. ಈಗ ಮಳೆ ಸುರಿಯತೊಡಗುವಾಗ ಜನ ದಿಗಿಲುಗೊಳ್ಳುತ್ತಾರೆ. ನೀರು ಬೇಕು, ಮಳೆ ಬೇಡ ಎಂಬ ಮನಸ್ಥಿತಿಗೆ ಜನ ಬದಲಾಗಿದ್ದಾರೆಯೆ? ಹಿರಿಯ ಜನರ ಮೇಲೆ ಮಳೆಗೂ ಜಿಗುಪ್ಸೆ ಬಂದಿದೆ. ಮಕ್ಕಳ ಮೇಲೆ ಮಾತ್ರ ಅದರ ಪ್ರೀತಿ. ಬೆಳಗ್ಗೆ ಶಾಲೆಗೆ ಹೊರಡುವಾಗ, ಸಂಜೆ ಮನೆಗೆ ಮರಳುವಾಗ ಪ್ರೀತಿಯಿಂದ ಉಕ್ಕಿ ಸುರಿದು ಮಕ್ಕಳನ್ನು ಒದ್ದೆಯಾಗಿಸಿ ಖುಷಿಪಡಿಸಿ ತಾನೂ ಖುಷಿಪಡುವ ಮಳೆ, ಶಾಲೆಗೆ ರಜೆ ಕೊಟ್ಟರೆ ತಾನೂ ರಜೆಹಾಕಿ ಕುಳಿತುಬಿಡುತ್ತದೆ. ಪಾಪ ಮಳೆಗೂ ತನ್ನನ್ನು ಸ್ವೀಕರಿಸುವವರು ಬೇಕು. ದೂಷಿಸುವವರಲ್ಲ. ಮಳೆಯೊಂದಿಗೆ ಆಟವಾಡುವ ಮಕ್ಕಳಿರುವ ತನಕ, ಮಳೆಯನ್ನು ಪ್ರೀತಿಸುವ ಮಗು ಮನದವರಿರುವ ತನಕ ಮಳೆ ಬರುವುದು ನಿಲ್ಲಲಾರದು ಅಲ್ಲವೆ?
ಜೆಸ್ಸಿ ಪಿ. ವಿ.