ಬೆಂಗಳೂರು: ರಾಜ್ಯದಲ್ಲಿ ಭಾನುವಾರವೂ ಮಳೆ ಮುಂದುವರಿದಿದ್ದು, ಮುಂದಿನ ಎರಡು ದಿನಗಳು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 2 ದಿನಗಳಿಂದ ಸಾಮಾನ್ಯಕ್ಕಿಂತಲೂ ಹೆಚ್ಚಿನ ತಾಪಮಾನ ದಾಖಲಾಗಿದೆ.
ಇದರಿಂದಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ತೇವಾಂಶ ಭರಿತ ಮೋಡಗಳು ಚಲಿಸಿದ ಕಡೆ ಮಳೆಯಾಗುತ್ತಿದೆ. ಅದರಲ್ಲೂ ಹೆಚ್ಚಿನ ಕಡೆ ಬೆಳಗ್ಗೆಯಿಂದ ಸಂಜೆವರೆಗೆ ಹೆಚ್ಚಿನ ಉಷ್ಣಾಂಶವಿದ್ದು, ಸಂಜೆ ವೇಳೆಗೆ ಮಳೆಯಾಗುತ್ತಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಹೇಳಿದರು.
ಇದೇ ರೀತಿಯ ವಾತಾವರಣ ದಕ್ಷಿಣ ಒಳನಾಡಿನಲ್ಲಿ ಇನ್ನೂ ಎರಡು ದಿನ ಮುಂದುವರಿಯಲಿದ್ದು, ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ.
ಭಾನುವಾರ ರಾಜ್ಯದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಹಾಸನದಲ್ಲಿ 57.50, ಹಾವೇರಿ 45 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 42.50 ಮಿಲಿ ಮೀಟರ್ ಮಳೆಯಾಗಿದೆ. ಉಳಿದಂತೆ ರಾಮನಗರ 28, ಚಿಕ್ಕಬಳ್ಳಾಪುರ 26,
ತುಮಕೂರು 40, ಚಿತ್ರದುರ್ಗ 26.90, ದಾವಣಗೆರೆ 26, ಮೈಸೂರು 34, ಮಂಡ್ಯ 52, ಧಾರವಾಡ 17, ಚಿಕ್ಕಮಗಳೂರು 21, ಕೊಡಗು 20, ಬೆಳಗಾವಿ 13.50, ಗದಗ 11, ಉತ್ತರ ಕನ್ನಡ 5.10, ಯಾದಗಿರಿ 4, ಬಳ್ಳಾರಿ 4, ಶಿವಮೊಗ್ಗ 7, ಕಲಬುರಗಿ 3 ಮಿ. ಮೀ ಮಳೆಯಾಗಿದೆ.