Advertisement

ಈ ಬಾರಿಯೂ ನೆಮ್ಮದಿ ಕಸಿದ ಮುಂಗಾರು

02:07 PM Sep 02, 2017 | |

ವಿಜಯಪುರ: ಸತತ ಮೂರು ವರ್ಷಗಳ ಭೀಕರ ಬರದಿಂದ ತತ್ತರಿಸಿರುವ ಜಿಲ್ಲೆಯ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲೂ ಮಳೆಯ ವಿಳಂಬದ ಕಾರಣ ಕೊಂಚ ಬೆಳೆ ಹಾನಿ ಅನುಭವಿಸಿದೆ. ಜುಲೈ ತಿಂಗಳ ಮಳೆಯ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ. 

Advertisement

ಪ್ರಸಕ್ತ ಮುಂಗಾರು ಹಂಗಾಮಿನ ಜೂನ್‌ ತಿಂಗಳಲ್ಲಿ 89.2 ಮಿ.ಮೀ. ಸುರಿಯಬೇಕಿದ್ದ ಮಳೆ 120.9 ಮಿ.ಮೀ. ಸುರಿದ ಕಾರಣ ಜಿಲ್ಲೆಯಲ್ಲಿ 4.39 ಲಕ್ಷ ಹೆಕ್ಟೇರ್‌ ಬಿತ್ತನೆಯ ಗುರಿ ತಲುಪಲಾಗಿತ್ತು. ಆದರೆ ಜುಲೈನಲ್ಲಿ 86.6 ಮಿ.ಮೀ. ಸುರಿಯಬೇಕಿದ್ದ ಮಳೆಯಲ್ಲಿ ಕೇವಲ 18 ಮಿ.ಮೀ. ಮಾತ್ರ ಸುರಿದ ಕಾರಣ 68 ಮಿ.ಮೀ. ಮಳೆಯ ಕೊರತೆ ಆಗಿತ್ತು.
ಇದರಿಂದ ಮುಂಗಾರು ಬಿತ್ತನೆಯಲ್ಲಿ 24 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಹಾಗೂ ಉದ್ದು ಬೆಳೆ ಹಾನಿಯಾಗಿದೆ. ಇತ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗದ ಕಾರಣ 174 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಲಿಂಬೆ ಬೆಳೆ ಸಂಪೂರ್ಣ ಒಣಗಿ ಹಾಳಾಗಿದೆ.

ಹೆಸರು-ಉದ್ದು ಬೆಳೆಯನ್ನು ಹೊರತುಪಡಿಸಿದರೆ ಆಗಸ್ಟ್‌ನಲ್ಲಿ 85 ಮಿ.ಮೀ. ಮಳೆ ಸುರಿಯಬೇಕಿದ್ದರೂ 109.8 ಮಳೆ ಆಗಿರುವ ಕಾರಣ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಇತರೆ ಬೆಳೆ ಉತ್ತಮವಾಗಿವೆ. 45 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದರೆ, 2.68 ಲಕ್ಷ ಹೆಕ್ಟೇರ್‌ ನಲ್ಲಿ ತೊಗರಿ, 27 ಸಾವಿರ ಹೆಕ್ಟೇರ್‌ ಸಜ್ಜೆ, 11 ಸಾವಿರ ಹೆಕ್ಟೇರ್‌ ಹತ್ತಿ, 23 ಸಾವಿರ ಹೆಕ್ಟೇರ್‌ ಸೇಂಗಾ, 19 ಸಾವಿರ ಹೆಕ್ಟೇರ್‌ ಸೂರ್ಯಕಾಂತಿ, 10 ಸಾವಿರ
ಹೆಕ್ಟೇರ್‌ನಲ್ಲಿ ನಾಟಿ ಕಬ್ಬು ನಳನಳಿಸುತ್ತಿದೆ. ಇನ್ನು ಆಗಸ್ಟ್‌ನಲ್ಲಿ ವಾಡಿಕೆಗಿಂದ ಹೆಚ್ಚಾಗಿ ಉತ್ತಮ ಮಳೆ ಆಗಿರುವ ಕಾರಣ 60 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರ ಬೇಡಿಕೆಯಲ್ಲಿ 57,500 ಮೆ.ಟ. ರಸಗೊಬ್ಬರ ದಾಸ್ತಾನಿದೆ. ಹಿಂಗಾರು ಬಿತ್ತನೆ ಸೆಪ್ಟೆಂಬರ್‌ ಮಧ್ಯಾವ ಧಿಯಿಂದ ಆರಂಭಗೊಳ್ಳುವ ಕಾರಣ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಹಿಂಗಾರು ಹಂಗಾಮಿನಲ್ಲಿ 5.20 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳ ಮಳೆಯ ಕೊರತೆಯ ಮಧ್ಯೆಯೂ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆ ಬೆಳೆಗಳಿಗೆ ಸಹಕಾರಿ ಆಗಿದೆ. ಹೆಸರು, ಉದ್ದು ಕೊಂಚ ಮಟ್ಟಿಗೆ ಹಾನಿ ಆಗಿರುವುದನ್ನು ಹೊರತುಪಡಿಸಿದರೆ ಇತರೆ ಎಲ್ಲ ಬೆಳೆ ಉತ್ತಮವಾಗಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಸ್ಪಷ್ಟಪಡಿಸಿದೆ. ತೋಟಗಾರಿಕೆಯಲ್ಲಿ ಜುಲೈ ತಿಂಗಳಲ್ಲಿ ಉತ್ತಮ ಮಳೆ ಸುರಿಯದ ಕಾರಣ ವಾಡಿಕೆಯಂತೆ ಮುಂಗಾರಿ ಹಂಗಾಮಿನ ತರಕಾರಿ ಬಿತ್ತನೆಯೂ
ವಿಳಂಬವಾಗಿದೆ. ಈರುಳ್ಳಿ, ಟೊಮ್ಯಾಟೋ, ಬದನೆ, ಹಸಿರು ಮೆಣಸಿನಕಾಯಿ ಸೇರಿ ಕೇವಲ 7 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ತರಕಾರಿ ಬಿತ್ತನೆ ಆಗಿದೆ. ಬೇಸಿಗೆಯಲ್ಲಿನ ನೀರಿನ ಕೊರತೆಯ ಕಾರಣ ಪ್ರಸಕ್ತ ವರ್ಷ 30 ಲಕ್ಷ ರೂ. ಮೌಲ್ಯದ ಲಿಂಬೆ ಬೆಳೆ ಹಾನಿಯಾಗಿದೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ
ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

„ಜಿ.ಎಸ್‌. ಕಮತರ

Advertisement
Advertisement

Udayavani is now on Telegram. Click here to join our channel and stay updated with the latest news.

Next