Advertisement

Ind V/s SA: ದ್ವಿತೀಯ ಟಿ-20 ಪಂದ್ಯಕ್ಕೂ ಮಳೆ ತೊಂದರೆ

11:55 PM Dec 12, 2023 | Team Udayavani |

ಕೆಬೆರಾ: ನಾಯಕ ಸೂರ್ಯಕುಮಾರ್‌ ಯಾದವ್‌ ಮತ್ತು ರಿಂಕು ಸಿಂಗ್‌ ಅವರ ಅರ್ಧಶತಕದಿಂದಾಗಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡದೆದುರಿನ ದ್ವಿತೀಯ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಭಾರತದ ಇನ್ನಿಂಗ್ಸ್‌ ಮುಗಿಯಲು ಮೂರು ಎಸೆತ ಬಾಕಿ ಇರುವಾಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ಆಗ ಭಾರತ 19.3 ಓವರ್‌ಗಳಲ್ಲಿ 7 ವಿಕೆಟಿಗೆ 180 ರನ್‌ ಗಳಿಸಿತ್ತು. ರಿಂಕು ಸಿಂಗ್‌ 68 ರನ್ನುಗಳಿಂದ ಆಡುತ್ತಿದ್ದರು.

Advertisement

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಇನ್ನೂ ರನ್‌ ಖಾತೆ ತೆರೆಯುವ ಮೊದಲೇ ಯಶಸ್ವಿ ಜೈಸ್ವಾಲ್‌ ಅವರ ವಿಕೆಟನ್ನು ಕಳೆದುಕೊಂಡು ಕುಸಿಯಿತು. ಆರು ರನ್‌ ತಲುಪುವಷ್ಟರಲ್ಲಿ ಗಿಲ್‌ ಅವರನ್ನು ಉರುಳಿದ ದಕ್ಷಿಣ ಆಫ್ರಿಕಾ ಪ್ರವಾಸಿ ತಂಡಕ್ಕೆ ಇನ್ನೊಂದು ಹೊಡೆತ ನೀಡಿತು.

ಆಬಳಿಕ ತಿಲಕ್‌ ವರ್ಮ ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಮೂರನೇ ವಿಕೆಟಿಗೆ 49 ರನ್‌ ಪೇರಿಸಿದರು. ಈ ಹಂತದಲ್ಲಿ 29 ರನ್‌ ಗಳಿಸಿದ ತಿಲಕ್‌ ವರ್ಮ ಔಟಾದರು. ಸೂರ್ಯ ಅವರನ್ನು ಸೇರಿಕೊಂಡ ರಿಂಕು ಸಿಂಗ್‌ ಬಿರುಸಿನ ಆಟಕ್ಕೆ ಮುಂದಾದರು. ಅವರಿಬ್ಬರು 70 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತಲುಪಿಸಲು ಪ್ರಯತ್ನಿಸಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್‌ ಯಾದವ್‌ ದೊಡ್ಡ ಹೊಡೆತಕ್ಕೆ ಯತ್ನಿಸಿ ಶಮಿÕಗೆ ವಿಕೆಟ್‌ ಒಪ್ಪಿಸಿದರು. 36 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು. ಕೊನೆ ಹಂತದಲ್ಲಿ ರಿಂಕು ಸಿಂಗ್‌ ಮತ್ತು ರವೀಂದ್ರ ಜಡೇಜ ಬಿರುಸಿನ ಆಟ ಆಡಿದ್ದರಿಂದ ತಂಡದ ಮೊತ್ತ 175ರ ಗಡಿ ದಾಟಿತು.

ಭಾರೀ ಮಳೆಯಿಂದ ಸರಣಿಯ ಮೊದಲ ಪಂದ್ಯ ಯಾವುದೇ ಎಸೆತ ಕಾಣದೆ ರದ್ದುಗೊಂಡಿತ್ತು. ಮಂಗಳವಾರ ಬೆಳಗ್ಗೆ ಹಗುರ ಮಳೆ ಬಂದಿತ್ತು. ಆದರೆ ಪಂದ್ಯ ನಿಗದಿತ ಸಮಯಕ್ಕೆ ಆರಂಭಗೊಂಡರೂ ಪಂದ್ಯ ಮುಗಿಯಲು ಮೂರು ಎಸೆತ ಇರುವಾಗ ಮತ್ತೆ ಮಳೆ ಆರಂಭಗೊಂಡ ಕಾರಣ ಪಂದ್ಯ ಸ್ಥಗಿತಗೊಂಡಿದೆ.

ಸಂಕ್ಷಿಪ್ತ ಸ್ಕೋರು
ಭಾರತ 19.3 ಓವರ್‌ಗಳಲ್ಲಿ 7 ವಿಕೆಟಿಗೆ 180 (ತಿಲಕ್‌ ವರ್ಮ 29, ಸೂರ್ಯಕುಮಾರ್‌ ಯಾದವ್‌ 56, ರಿಂಕು ಸಿಂಗ್‌ ಔಟಾಗದೆ 68, ರವೀಂದ್ರ ಜಡೇಜ 19).

Advertisement
Advertisement

Udayavani is now on Telegram. Click here to join our channel and stay updated with the latest news.

Next